ಉದ್ಯೋಗದಾತ ಆಗುವಲ್ಲೂ ಯುವಜನರು ಶ್ರಮ ವಹಿಸಲಿ: ಡಿಕೆಶಿ

KannadaprabhaNewsNetwork |  
Published : Jan 13, 2024, 01:30 AM IST
ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಶುಕ್ರವಾರ ನಡೆದ ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಚಾಲನಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಮಾತನಾಡಿದರು. | Kannada Prabha

ಸಾರಾಂಶ

ಯುವಜನರು ಸ್ವಾಭಿಮಾನ ಬದುಕು ಹೊಂದಬೇಕು. ಯುವನಿಧಿ ಬದುಕು ಬದಲಾಯಿಸುವ ಯೋಜನೆಯಾಗಿದೆ. ಈ ಯೋಜನೆ ಲಾಭ ಪಡೆದು ಧನಾತ್ಮಕ ಚಿಂತನೆಯಲ್ಲಿ ಮುಂದಡಿಯಿಟ್ಟು ಸಾಧನೆ ತೋರಬೇಕು. ಯುವ ಸಮುದಾಯ ಉದ್ಯೋಗಕ್ಕಾಗಿ ಮಾತ್ರ ಶ್ರಮಪಡದೆ ತಾವೇ ಉದ್ಯೋಗದಾತರಾಗುವತ್ತ ಮುಂದಡಿ ಇಡಬೇಕು ಎಂದು ಶಿವಮೊಗ್ಗದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಯುವನಿಧಿ ಯೋಜನೆ ಮೂಲಕ ವಿದ್ಯಾವಂತ ಯುವಸಮೂಹದಲ್ಲಿ ಆತ್ಮವಿಶ್ವಾಸ ಮೂಡಿಸುವ ಯೋಜನೆಯಾಗಿದೆ. ಯುವ ಸಮುದಾಯ ಉದ್ಯೋಗಕ್ಕಾಗಿ ಮಾತ್ರ ಶ್ರಮಪಡದೆ ತಾವೇ ಉದ್ಯೋಗದಾತರಾಗುವತ್ತ ಮುಂದಡಿ ಇಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ಐದನೇ ಗ್ಯಾರಂಟಿಯಾದ ‘ಯುವನಿಧಿ’ಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ಆಲೋಚನೆ ಉದ್ಯೋಗ ಸೃಷ್ಟಿಸುವತ್ತ ಇರಬೇಕು. ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ಎಂದು ಯುವ ಸಮುದಾಯಕ್ಕೆ ಸಲಹೆ ನೀಡಿದರು.

ನೀವು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. ಬದುಕು ಬದಲಾಯಿಸುವ ಯೋಜನೆಯಾದ ಯುವನಿಧಿಯ ಲಾಭ ಪಡೆದ ಬಳಿಕ ನೀವು ಧನಾತ್ಮಕ ಚಿಂತನೆಯಲ್ಲಿ ಮುನ್ನಡಿಯಿಟ್ಟರೆ ನೀವು ಏನನ್ನೂ ಬೇಕಾದರೂ ಸಾಧಿಸಬಹುದು. ದೇವರು ಶಾಪ ಅಥವಾ ವರ ಕೊಡುವುದಿಲ್ಲ. ಬದಲಾಗಿ ಅವಕಾಶ ನೀಡುತ್ತಾನೆ. ಆ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಳ್ಳಬೇಕು. ನೀವು ನಿಮ್ಮ ಬದುಕನ್ನು ಯಶಸ್ವಿಯಾಗಿ ಕಟ್ಟಿಕೊಳ್ಳುವುದರ ಜೊತೆಗೆ ದೇಶಕ್ಕೆ ಕೂಡ ಶಕ್ತಿ ತುಂಬಬೇಕೆಂದರು.

ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಶಕ್ತಿ ಸೇರಿದಂತೆ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ ಫಲಾನುಭವಿ ಕುಟುಂಬಗಳು ಮಾತ್ರ ಲಾಭ ಪಡೆದಿಲ್ಲ. ಹೋಟೆಲ್‌, ಅಂಗಡಿ, ಪ್ರವಾಸಿ ಸ್ಥಳ, ಧಾರ್ಮಿಕ ಕ್ಷೇತ್ರಗಳಲ್ಲಿನ ವ್ಯಾಪಾರಸ್ಥರಿಗೂ ವಹಿವಾಟು ಜಾಸ್ತಿಯಾಗಿ ಅವರಿಗೂ ಆರ್ಥಿಕ ಲಾಭ ದೊರಕಿದೆ ಎಂದು ಹೇಳಿದರು.

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ರಾಷ್ಟ್ರಕವಿ ಕುವೆಂಪು ಹೇಳಿದಂತೆ ನಾವು ಕೂಡ ಯಾವ ಟೀಕೆಗಳಿಗೂ ತಲೆಕೆಡಿಸಿಕೊಳ್ಳದೇ ಬಡವರ, ದಲಿತರಿಗೆ ಆರ್ಥಿಕ ಶಕ್ತಿ ತುಂಬುವತ್ತ ಕೆಲಸ ಮಾಡುತ್ತಿದ್ದೇವೆ. ಜನರು ಮೆಚ್ಚುವ ರೀತಿಯಲ್ಲಿ ಸಾಗುತ್ತಿದ್ದೇವೆ ಎಂದರು.

- - - ಕೋಟ್‌

ಸಾಧನೆಯಿಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶವಿಲ್ಲದೇ ಸತ್ತರೆ ಬದುಕಿಗೆ ಅವಮಾನ ಎಂಬ ದಾರ್ಶನಿಕರ ಮಾತಿನಂತೆ ಯುವಸಮೂಹ ಬದುಕು ಕಟ್ಟಿಕೊಳ್ಳಬೇಕು

- ಡಿ.ಕೆ.ಶಿವಕುಮಾರ್‌, ಡಿಸಿಎಂ

- - - -12ಕೆಪಿಎಸ್‌ಎಂಜಿ15:

ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಶುಕ್ರವಾರ ನಡೆದ ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಚಾಲನಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಮಾತನಾಡಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ