ಶಿವಮೊಗ್ಗ: ನಾನಾ ಕಾರಣದಿಂದ ಕಾಂಗ್ರೆಸ್ ಪಕ್ಷದಿಂದ ಒಬಿಸಿ ಮತಗಳು ದೂರ ಉಳಿದಿವೆ. ಅವುಗಳನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ಪ್ರತಿಯೊಬ್ಬ ಕಾರ್ಯಕರ್ತರಿಂದ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.
ಕಾಂಗ್ರೆಸ್‌ನ ಒಬಿಸಿಯ ಶಕ್ತಿಯನ್ನು ನಾವು ಅರ್ಥಮಾಡಿಕೊಂಡಿಲ್ಲ. ಇದಕ್ಕೆ ಸಂಘಟನೆ ಬಹುಮುಖ್ಯ. ಮುಂದಿನ ದಿನದಲ್ಲಿ ಒಬಿಸಿ ಪರವಾಗಿ ನಾನು ನಿಲ್ಲುತ್ತೇನೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಬೇರೆ ಸಮಾಜದ ವ್ಯಕ್ತಿಯಾದರೂ ಕೂಡ ರಾಹುಲ್ ಗಾಂಧಿ ಅವರು ಒಬಿಸಿ ಅವರ ಪರ ಧ್ವನಿ ಎತ್ತಿದ್ದಾರೆ. ನಾವು ಕೂಡ ಅಷ್ಟೇ ಜವಾಬ್ದಾರಿಯನ್ನು ತೆಗೆದುಕೊಂಡು ಒಬಿಸಿ ಮತಗಳನ್ನು ಸೆಳೆಯುವ ಪ್ರಯತ್ನಮಾಡಬೇಕು ಎಂದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು, ಬಂಗಾರಪ್ಪ, ದೇವರಾಜ್ ಅರಸು, ವೀರಪ್ಪಮೋಯ್ಲಿ ಅವರು ನೀಡಿದ ಕಾರ್ಯಕ್ರಮಗಳನ್ನು ಹಿಂದುಳಿದ ವರ್ಗದ ಜನರಿಗೆ ಮುಟ್ಟಿಸಿ ಅವರನ್ನು ಪಕ್ಷಕ್ಕೆ ಕರೆತರುವ ಕೆಲಸ ಆಗಬೇಕಿದೆ. ಪಕ್ಷದ ಕಾರ್ಯಕರ್ತನೂ ತಮ್ಮ ಜವಬ್ದಾರಿಯನ್ನು ಅರಿತು ಕಾಂಗ್ರೆಸ್ ಪಕ್ಷದ ಧ್ವನಿಯಾಗಿರಬೇಕು ಎಂದು ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ವಕ್ತಾರ ಆಯನೂರು ಸದಸ್ಯ ಮಾತನಾಡಿ, ಪಕ್ಷದೊಳಗೆ ನೀಡುವ ಜವಾಬ್ದಾರಿಯನ್ನು ಅಧಿಕಾರ ಎಂದು ಭ್ರಮಿಸಿದರೆ ಅವತ್ತು ನಾವು ಕಾರ್ಯಕರ್ತರಿಂದ ದೂರವಾಗುತ್ತೇವೆ. ಅಧಿಕಾರ ಸಿಕ್ಕಿದೆ ಎಂದು ಭಾವಿಸುವುದಕ್ಕಿಂತ ಎಲ್ಲರನ್ನೂ ಒಟ್ಟಿಗೆ ಸೇರಿಸುವ ಮೂಲಕ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲ ಪಡಿಸಲು ಸಿಕ್ಕ ಅವಕಾಶ ಎಂದು ಭಾವಿಸಬೇಕು ಎಂದು ಸಲಹೆ ನೀಡಿದರು.
ದಿ.ಬಂಗಾರಪ್ಪ ಅವರನ್ನು ಹಿಂದುಳಿದ ವರ್ಗದ ಚಾಂಪಿಯನ್ ಎಂದು ಕರೆಯುತ್ತಿದ್ದೇವೆ. ಆದರೆ, ಅತಿ ಹೆಚ್ಚು ಸಂಖ್ಯೆಯನ್ನು ಇಟ್ಟುಕೊಂಡು ಬಂಗಾರಪ್ಪ ಅವರ ಮಗಳನ್ನು ಚುನಾವಣೆಯಲ್ಲಿ ಸೋಲಿಸಿದ್ದೇವೆ ಎಂದರೆ ಇದು ಅಭ್ಯರ್ಥಿಯ ಸೋಲಲ್ಲ. ಬದಲಿಗೆ ಸ್ಥಳೀಯ ಕಾರ್ಯಕರ್ತರ ವೈಫಲ್ಯ. ಹಿಂದುಳಿದ ವರ್ಗದ ಮತದಾರರ ಮನಸ್ಸಿನಿಂದ ನಾವು ದೂರಾಗಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ನೂತನ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ಅವರು ಅಧಿಕಾರ ಸ್ವೀಕಾರಿಸಿದರು. ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕ ಜಿ.ಡಿ.ಮಂಜುನಾಥ್ ಮತ್ತಿತರರಿದ್ದರು.