ಮೋದಿಗಾಗಿ ಎಲ್ಲರೂ ಒಂದಾಗೋಣ: ಕುಮಾರ ಬಂಗಾರಪ್ಪ

KannadaprabhaNewsNetwork | Published : Apr 6, 2024 12:46 AM

ಸಾರಾಂಶ

ಸೊರಬ ಪಟ್ಟಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಲೋಕಸಭೆ ಚುನಾವಣೆ ಹಿನ್ನೆಲೆ ಹಮ್ಮಿಕೊಂಡಿದ್ದ ಪೇಜ್ ಪ್ರಮುಖ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಕುಮಾರ ಬಂಗಾರಪ್ಪ ಉದ್ಘಾಟಿಸಿದರು. ಕುಮಾರ ಬಂಗಾರಪ್ಪ ಮನೆಗೆ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಕುಶಲೋಪರಿ ನಡೆಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಡೆದ ತಪ್ಪುಗಳು ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತನೆಯಾಗಲು ಕಾರ್ಯಕರ್ತರು ಅವಕಾಶ ಮಾಡಿಕೊಡಬಾರದು. ದೇಶದ ಪ್ರತಿಯೊಂದು ಹೃದಯವೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹಂಬಲಿಸುತ್ತಿವೆ. ಹಾಗಾಗಿ ಈ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡುವ ಕೆಲಸ ನಡೆಯುತ್ತಿದೆ. ಅದು ಮೋದಿಗಾಗಿ ಎಂದು ಮಾಜಿ ಶಾಸಕ ಕುಮಾರ ಬಂಗಾರಪ್ಪ ನುಡಿದರು.

ಪಟ್ಟಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಲೋಕಸಭೆ ಚುನಾವಣೆ ಹಿನ್ನೆಲೆ ಹಮ್ಮಿಕೊಂಡಿದ್ದ ಪೇಜ್ ಪ್ರಮುಖ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಬಿ.ವೈ.ರಾಘವೇಂದ್ರ ಮತ್ತು ತಾಲೂಕಿನಲ್ಲಿ ತಮ್ಮ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಕಣ್ಣ ಮುಂದೆ ಇದ್ದರೂ ಕೆಲವು ವ್ಯತ್ಯಾಸ ನಡೆದಿವೆ. ಇಂಥ ವ್ಯತ್ಯಾಸಗಳು ರಾಜ್ಯದ ೧೩೬ ಕ್ಷೇತ್ರಗಳಲ್ಲಿಯೂ ನಡೆದಿದೆ. ಇದನ್ನು ವೈಯಕ್ತಿವಾಗಿ ತೆಗೆದುಕೊಳ್ಳದೇ ಸಾಮೂಹಿಕವಾಗಿ ಎಲ್ಲರೂ ಒಗ್ಗೂಡುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು. ಆದ್ದರಿಂದ ಇಡೀ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಒಗ್ಗೂಡಿಸುತ್ತಿರುವ ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿಯಾಗಬೇಕು. ಈ ಕಾರಣದಿಂದ ಬಿಜೆಪಿ ಅಭ್ಯರ್ಥಿ ರಾಘವೇಂದ್ರಗೆ ತಾಲೂಕಿನಿಂದ ಅಧಿಕ ಮತಗಳು ಚಲಾವಣೆ ಆಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ತಾತ್ಕಾಲಿವಾದದ್ದು. ಅಭಿವೃದ್ಧಿ ಮಾಡಿಯೂ ಸೋತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಸಿದ್ಧ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ತಾವು ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಮತ್ತು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಅಷ್ಟೇ ಸತ್ಯ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತರನ್ನು ಚೇಲಾಗಳು ಎಂದು ಲಘುವಾಗಿ ಮಾತನಾಡಿ ದರ್ಪದಿಂದ ಮೆರೆಯುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಬಿಜೆಪಿಗೆ ಸಂಸದರಾಗಿದ್ದರು ಮತ್ತು ಮಧು ಬಂಗಾರಪ್ಪ ಕೂಡಾ ಬಿಜೆಪಿ ಅಭ್ಯರ್ಥಿಯಾಗಿದ್ದರು ಎನ್ನುವುದನ್ನು ಮರೆಯಬಾರದು. ಅವರ ಅಹಂಕಾರದ ಮಾತುಗಳಿಗೆ ಅಧಿಕ ಮತಗಳು ಚಲಾವಣೆಯಾಗಿ ತಾಲೂಕಿನಿಂದಲೇ ಉತ್ತರಕೊಡಬೇಕು ಎಂದು ಕಾರ್ಯಕರ್ತರಿಗೆ ಕರೆನೀಡಿದರು. ಈ ಮೂಲಕ ಪಕ್ಷದ ಧ್ಯೇಯ ವಾಕ್ಯವಾದ ಈ ಬಾರಿ ನಾನೂರು ಮೀರಿ ಯೋಜನೆಗೆ ಬಲ ತುಂಬಬೇಕು ಎಂದರು.

ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಡಿ.ಎಸ್. ಅರುಣ್, ಜಿಲ್ಲಾಧ್ಯಕ್ಷ ಮೇಘರಾಜ್, ತಾಲೂಕು ಅಧ್ಯಕ್ಷ ಪ್ರಕಾಶ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಮಾಜಿ ಶಾಸಕ ಎಚ್. ಹಾಲಪ್ಪ, ಜಿಲ್ಲಾ ಮಹಿಳಾ ಅಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ಮುಖಂಡರಾದ ಎ.ಎಲ್.ಅರವಿಂದ, ಪಾಣಿ ರಾಜಪ್ಪ, ರಾಜು ತಲ್ಲೂರು, ಗೀತಾ ಮಲ್ಲಿಕಾರ್ಜುನ ಸೇರಿ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕುಮಾರ ಬಂಗಾರಪ್ಪ ಮನೆಗೆ ರಾಘವೇಂದ್ರ ಭೇಟಿ

ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ನಂತರ ಒಂದು ಬಾರಿ ಮಾತ್ರ ಭೇಟಿ ನೀಡಿ, ೮ ತಿಂಗಳು ತಾಲೂಕು ಅಲ್ಲದೇ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಯಾವುದೇ ಪಕ್ಷ ಚಟುವಟಿಕೆಗಳಲ್ಲಿ ಭಾಗವಹಿಸಿದೇ ಮೌನವಾಗಿದ್ದ ಕುಮಾರ ಬಂಗಾರಪ್ಪ ಮನೆಗೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಭೇಟಿ ನೀಡಿ, ಕುಶಲೋಪಾರಿ ವಿಚಾರಿಸಿದರು.

ಈ ಸಂದರ್ಭದಲ್ಲಿ ಪಕ್ಷದಲ್ಲಿನ ಕೆಲವು ವರ್ತನೆಗಳಿಂದ ಮುನಿಸಿಕೊಂಡಿದ್ದ ಕುಮಾರ ಬಂಗಾರಪ್ಪ ಅವರಿಗೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮತ್ತು ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಗೆ ಬರುವ ಬೈಂದೂರು ಸೇರಿ ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪರವಾಗಿ ಮತಯಾಚಿಸುವಂತೆ ಹಾಗೂ ಹಿಂದೆ ನಡೆದ ಘಟನೆ ಬದಿಗೊತ್ತಿ, ಕಾರ್ಯಕರ್ತರನ್ನು ಮುನ್ನಡೆಸಬೇಕು ಎಂದು ಬಿ.ವೈ. ರಾಘವೇಂದ್ರ ಮನವೊಲಿಸಿದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಪುತ್ರ ಅರ್ಜುನ್ ಕುಮಾರ ಬಂಗಾರಪ್ಪ, ಪುರಸಭಾ ಸದಸ್ಯರಾದ ಎಂ.ಡಿ. ಉಮೇಶ, ನಟರಾಜ್, ಟಿ.ಆರ್. ಸುರೇಶ್ ಇದ್ದರು.

Share this article