- ಶಾಮನೂರು ಕುಟುಂಬವನ್ನು ಟೀಕಿಸುವ ನೀವೆಷ್ಟು ಸರಿ ಇದ್ದೀರಿ?: ಪ್ರವೀಣ ಕುಮಾರ ಪ್ರಶ್ನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪದೇಪದೇ ಶಾಮನೂರು ಕುಟುಂಬದ ಬಗ್ಗೆ ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡ ಯಶವಂತ ರಾವ್ ಜಾಧವ್ ತಮ್ಮ ರಾಜಕೀಯ ಹಾಗೂ ಸಾರ್ವಜನಕ ಜೀವನದ ಇತಿಹಾಸವನ್ನು ಜನರ ಮುಂದಿಡುವ ಧೈರ್ಯ ತೋರಿಸಲಿ ಎಂದು ಯುವ ಕಾಂಗ್ರೆಸ್ ಮುಖಂಡ ಎಸ್.ಕೆ. ಪ್ರವೀಣಕುಮಾರ ಸವಾಲು ಹಾಕಿದ್ದಾರೆ.ಶಾಮನೂರು ಕುಟುಂಬ ಹೇಗೆ ಬೆಳೆದಿದೆಯೆಂದು ಪದೇಪದೇ ಪ್ರಶ್ನಿಸುವ ಯಶವಂತ ರಾವ್ ರಾಜಕೀಯ ಪಯಣ ಹೇಗಿತ್ತು? ಆಸ್ತಿಪಾಸ್ತಿ ಹಾಗೂ ರಾಜಕೀಯ ಪ್ರಭಾವ ಹೇಗೆ ಬೆಳೆದವೆಂಬ ಬಗ್ಗೆಯೂ ಜನರ ಮುಂದೆ ಉತ್ತರಿಸಲಿ. ಗುಮಾಸ್ತರಾಗಿ ಶಾಮನೂರು ಶಿವಶಂಕರಪ್ಪ ಕೆಲಸ ಆರಂಭಿಸಿ, ಇಂದು ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಸಾಮಾನ್ಯ ವ್ಯಕ್ತಿ ದೊಡ್ಡ ಸ್ಥಾನ, ಉನ್ನತ ಸ್ಥಾನಮಾನ ಅಲಂಕರಿಸುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ರಾಜಕೀಯ ನಾಯಕರಿಗೆ ಸಂಬಂಧಿಸಿದ ಸಂಸ್ಥೆಗಳು, ಆಸ್ತಿಗಳ ಬಗ್ಗೆಯೂ ಇದೇ ಪಾರದರ್ಶಕತೆಗೆ ಒತ್ತಾಯಿಸಬೇಕಲ್ಲವೇ? ಜಿಎಂ ವಿವಿಗೆ ಸಂಬಂಧಿಸಿದ ಭೂಮಿ, ಸಂಸ್ಥೆಯ ಸ್ಥಾಪನೆ, ಅದರ ಹಿನ್ನೆಲೆಯ ಬಗ್ಗೆ ಇರುವ ಪ್ರಶ್ನೆಗಳಿಗೂ ದಾಖಲೆ ಸಮೇತ ಉತ್ತರಿ ಸಿಗಬೇಕಲ್ಲವೇ? ಅಕ್ರಮ ಅದಿರು ಸಾಗಾಟ ಮತ್ತು ಸಂಗ್ರಹಣೆ ಪ್ರಕರಣದಲ್ಲಿ ನಿಮ್ಮ ನಾಯಕರ ಸಹೋದರನ ವಿರುದ್ಧದ ಪ್ರಕರಣದ ಬಗ್ಗೆಯೂ ಪ್ರಸ್ತಾಪ ಮಾಡಿ. ಯಾವುದೇ ಆರೋಪ ಮಾಡುವಾಗ ದಾಖಲೆ ಇಡುವ ಧೈರ್ಯ ಬೇಕು. ನಿಮ್ಮ ರಾಜಕೀಯ ಬಳಗದ ಮೇಲಿರುವ ಪ್ರಶ್ನೆಗಳಿಗೂ ದಾಖಲೆ ಸಮೇತ ಉತ್ತರಿಸುವ ಹೊಣೆಗಾರಿಕೆ ಹೊರುವ ಕೆಲಸ ಮಾಡಿ ಎಂದು ತಿಳಿಸಿದ್ದಾರೆ.
(ಕೋಟ್) ಸತ್ಯದ ಪರ ಮಾತನಾಡುತ್ತಿದ್ದೇನೆ ಎನ್ನುವ ಯಶವಂತ ರಾವ್ ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಸುಲಭ. ಆದರೆ, ದಾಖಲೆಗಳೊಂದಿಗೆ ಸತ್ಯವನ್ನು ಎದುರಿಸುವ ಧೈರ್ಯವೇ ನಿಜವಾದ ರಾಜಕೀಯ ನಾಯಕತ್ವವಾಗಿದೆ. ಮತ್ತೊಬ್ಬರ ಕಡೆ ಬೆರಳು ಮಾಡಿ, ಆರೋಪಿಸುವ ಮುನ್ನ ನಿಮಗೆ ನೀವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಜನರು ಎಲ್ಲವನ್ನೂ ನೋಡುತ್ತಾರೆ, ಗಮನಿಸುತ್ತಾರೆ. ಪ್ರಶ್ನೆ ಕೇಳುವ ಹಕ್ಕು ನಿಮಗಿದ್ದರೆ, ನಿಮ್ಮನ್ನು ಪ್ರಶ್ನಿಸುವ ಹಕ್ಕು ಜನರಿಗೂ ಇದೆ.
- - -