ಯತ್ನಾಳ್, ಸೋಮಣ್ಣ ಬ್ಲಾಕ್ ಮೇಲ್ ರಾಜಕಾರಣ ಬಿಡಲಿ

KannadaprabhaNewsNetwork |  
Published : Dec 15, 2023, 01:30 AM IST
14ಕೆಡಿವಿಜಿ1, 2-ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಸೋಮಣ್ಣ ಸುಳ್ಳು ವೈಭವೀಕರಿಸುವ ವ್ಯಕ್ತಿ, ಯತ್ನಾಳರದ್ದು ಯಾವ ಸಮಾಜಕ್ಕೂ ಕೊಡುಗೆ ಇಲ್ಲ: ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ

ಸೋಮಣ್ಣ ಸುಳ್ಳು ವೈಭವೀಕರಿಸುವ ವ್ಯಕ್ತಿ, ಯತ್ನಾಳರದ್ದು ಯಾವ ಸಮಾಜಕ್ಕೂ ಕೊಡುಗೆ ಇಲ್ಲ: ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಸವನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣನ ಪಾಪದ ಕೊಡ ತುಂಬಿದ್ದು, ಅಂತ್ಯವಾಗುವುದಕ್ಕೋಸ್ಕರ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್, ಸೋಮಣ್ಣ ಬ್ಲಾಕ್ ಮೇಲ್ ರಾಜಕಾರಣ ಬಿಡಬೇಕು. ಬ್ಲಾಕ್ ಮೇಲ್‌ ರಾಜಕಾರಣ ಯಾವುತ್ತೂ ಮಾಡಬಾರದು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಜನರ ಮುಂದೆ ವಿಲನ್ ಮಾಡಲು ಹೊರಟಿದ್ದಾರೆ. ರಾಜಕೀಯವಾಗಿ ಅಂತ್ಯವಾಗುವುದಕ್ಕೆ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿರುವ ಯತ್ನಾಳ್, ಸೋಮಣ್ಣ ಏನು ಮಾಡಿದ್ದಾರೆಂದು ನಾವೂ ಹೇಳುತ್ತೇವೆ. ನಾವೇನೂ ಯಾರಿಗೂ ಸೊಪ್ಪು ಹಾಕಬೇಕಿಲ್ಲ. ಯಾರಿಗೂ ಹೆದರಬೇಕಿಲ್ಲ ಎಂದು ಹೇಳಿದರು.

ಯತ್ನಾಳ್, ಸೋಮಣ್ಣ ಮೊದಲು ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡುವುದು ಬಿಡಬೇಕು. ಎಲ್ಲರೂ ಒಂದಾಗಿ ಬಿಜೆಪಿಯಲ್ಲಿ ಮುನ್ನಡೆಯಬೇಕು. ಏನಾದರೂ ಸಮಸ್ಯೆ ಇದ್ದರೆ, ಪಕ್ಷದ ನಾಲ್ಕು ಗೋಡೆ ಮಧ್ಯೆ ಕುಳಿತು ಮಾತಾಡಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿದ್ದರೆ ಸಹಿಸಿಕೊಂಡಿರಲು ಸಾಧ್ಯವೂ ಇಲ್ಲ ಎಂದು ಹೇಳಿದರು.

ಇದೇ ಬಸವನಗೌಡ ಪಾಟೀಲ್‌ ಯತ್ನಾಳ್ ರನ್ನು ಕರೆ ತಂದು, ಕೇಂದ್ರ ಮಂತ್ರಿ ಮಾಡಿದ್ದು ತಪ್ಪಾ? ಸೋಮಣ್ಣ, ಯತ್ನಾಳ್‌ಗೆ ಮಾತನಾಡುವ, ಟೀಕಿಸುವ ಯಾವ ನೈತಿಕ ಹಕ್ಕು ಇದೆ? ಸೋಮಣ್ಣ ಸುಳ್ಳನ್ನು ಬಹಳ ಚೆನ್ನಾಗಿ ವೈಭವೀಕರಿಸುವ ಚಾಕಚಕ್ಯತೆ ಹೊಂದಿರುವ ವ್ಯಕ್ತಿ. ಕಾಂಗ್ರೆಸ್ಸಿನಿಂದ ಬಂದ ನಿಮಗೆ ಟೀಕಿಸುವ ಯಾವ ಹಕ್ಕು ಇದೆ ಎಂದು ಪ್ರಶ್ನಿಸಿದರು.

ಬಿಜೆಪಿ ಅನ್ಯಾಯ ಮಾಡಿದೆಯೆಂದು ಉತ್ತರ ಕರ್ನಾಟಕ ಯಾವುದೇ ಜನ ಪ್ರತಿನಿಧಿಗಳು ಕೇಳಿದ್ದಾರಾ? ಅಭಿವೃದ್ಧಿ ಬಗ್ಗೆ ಹೋರಾಟ ಮಾಡಿ. ಹತಾಶೆಯಿಂದ ದಿನಕ್ಕೊಂದು ಹೇಳಿಕೆ ನೀಡುವುದು ಇನ್ನಾದರೂ ಬಿಟ್ಟು ಬಿಡಿ. ಸ್ವಪಕ್ಷದವರ ವಿರುದ್ಧವೇ ಹೇಳಿಕೆ ನೀಡುವುದಕ್ಕೆ ನಾಚಿಕೆಯಾಗಬೇಕು. ವಿಜಯೇಂದ್ರಗೆ ಸೋಲಿಸಲು ಯಾರೆಲ್ಲಾ ಪ್ರಯತ್ನ ಮಾಡಿದ್ದಾರೆಂಬುದು ನಮಗೂ ಗೊತ್ತಿದೆ. ಗೆದ್ದರೆ ವಿಜಯೇಂದ್ರ ನಾಯಕನಾಗುತ್ತಾರೆಂದು ಸೋಲಿಗೆ ಪ್ರಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ನಾಯಕ ಯಡಿಯೂರಪ್ಪ ಯಾವತ್ತಿಗೂ ಕೀಳುಮಟ್ಟದ ರಾಜಕಾರಣ ಮಾಡಲಿಲ್ಲ. ಯತ್ನಾಳರದ್ದು ಯಾವ ಸಮಾಜಕ್ಕೂ ಕೊಡುಗೆ ಇಲ್ಲ. ಪದೇಪದೇ ಬಸವನಗೌಡ ಪಾಟೀಲ ಯತ್ನಾಳ್, ವಿ.ಸೋಮಣ್ಣ ಮಾತನಾಡುವುದರಿಂದ ನಮ್ಮ ನಾಯಕರಾದ ಯಡಿಯೂರಪ್ಪನವರ ತೂಕ, ವ್ಯಕ್ತಿತ್ವವೇನೂ ಕಡಿಮೆಯಾಗುವುದೂ ಇಲ್ಲ ಎಂದು ರೇಣುಕಾಚಾರ್ಯ ತಿರುಗೇಟು ನೀಡಿದರು. ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಪ್ರವೀಣ ಜಾಧವ್, ರಾಜು ವೀರಣ್ಣ, ಎಸ್.ಜಿ.ಬಸವರಾಜ ಅಣಜಿ ಇತರರಿದ್ದರು.

ಯತ್ನಾಳ ಸೆರೆಮನೆ ವಾಸವಾಗಿದ್ದರಾ?

ಸೋಮಣ್ಣಗೆ ಹಿಂದೆ 2 ಬಾರಿ ಮಂತ್ರಿ ಮಾಡಿದ್ದಾಗ ನಾವೆಲ್ಲರೂ ಸುಮ್ಮನಿದ್ದೆವಲ್ಲ ಮರೆತು ಬಿಟ್ಟಿದ್ದೀರಾ? ಯಡಿಯೂರಪ್ಪ ಜೈಲುವಾಸ ಅನುಭವಿಸಿ, ರಾಜ್ಯದಲ್ಲಿ ಪಕ್ಷ ಕಟ್ಟಿದ್ದಾರೆ. ಯತ್ನಾಳರೆ ಪಕ್ಷಕ್ಕಾಗಿ ನೀವು ಎಲ್ಲಿ, ಯಾವಾಗ ಸೆರೆಮನೆ ವಾಸ ಅನುಭವಿಸಿದ್ದಿರಿ? ನೀವು ಉತ್ತರ ಕರ್ನಾಟಕದ ಬಗ್ಗೆ ಬೆಳಕು ಚೆಲ್ಲುವ ಯಾವ ಕೆಲಸ ಮಾಡಿದ್ದೀರಿ.

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

......................................ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಮೀಕ್ಷೆ ಆಧರಿಸಿ ಟಿಕೆಟ್‌ ನೀಡಿ

* ಮತದಾರರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಲು ಮತದಾರರು, ಕಾರ್ಯಕರ್ತರ ಒಲವು ಯಾರ ಪರ ಇದೆಯೆಂಬುದು ಅರಿಯಲು ಕ್ಷೇತ್ರದಲ್ಲಿ ಸಮೀಕ್ಷೆ ಕೈಗೊಳ್ಳಲು ಬಿಜೆಪಿ ವರಿಷ್ಠರಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮೀಕ್ಷೆ, ಸರ್ವೇ ಆಧಾರದಲ್ಲಿ ಬಿಜೆಪಿ ಟಿಕೆಟ್ ನೀಡಲಿ. ರೇಣುಕಾಚಾರ್ಯಗೆ ಟಿಕೆಟ್ ನೀಡಲೇಬೇಕೆಂದು ನಾನು ಹೇಳಿಲ್ಲ. ಸರ್ವೇ ಆಧಾರದ ಮೇಲೆ ಟಿಕೆಟ್ ನೀಡಬೇಕೆಂಬ ಬೇಡಿಕೆ ನನ್ನದು. ಲೋಕಸಭೆ ಟಿಕೆಟ್ ವಿಚಾರವಾಗಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಳಿ ನಾನು ಇನ್ನೂ ಮಾತನಾಡಿಲ್ಲ. ಆಕಾಂಕ್ಷಿಯೆಂದು ನಿತ್ಯ ಹೇಳುತ್ತಿದ್ದರೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ ಸುಮ್ಮನಿದ್ದೇನೆ ಎಂದು ದಾವಣಗೆರೆ ಲೋಕಸಭೆ ಕ್ಷೇತ್ರಕ್ಕೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಪುನರಾಯ್ಕೆ ಬಯಸಿ, ಟಿಕೆಟ್ ಕೇಳುತ್ತಿರುವ ಕುರಿತ ಪ್ರಶ್ನೆಗೆ ರೇಣುಕಾಚಾರ್ಯ ಪ್ರತಿಕ್ರಿಯಿಸಿದರು.

ಬಿಜೆಪಿಯಿಂದ ಉಚ್ಚಾಟಿತ ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಮಾಡಾಳು ವಿರೂಪಾಕ್ಷಪ್ಪ, ಮುಖಂಡರಿಂದ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದು ನಿಜ. ರಾಜ್ಯದಿಂದ 28 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ನಮ್ಮದು. ದಾವಣಗೆರೆಯೂ ಬಿಜೆಪಿಯ ಭದ್ರನೆಲೆ. ಈ ಹಿನ್ನೆಲೆಯಲ್ಲಿ ಒಟ್ಟಾಗಲು ಗುರುಸಿದ್ದನಗೌಡ, ಮಾಡಾಳು ವಿರೂಪಾಕ್ಷಪ್ಪ, ಡಾ.ಟಿ.ಜಿ.ರವಿಕುಮಾರ, ಮಾಡಾಳ ಮಲ್ಲಿಕಾರ್ಜುನರನ್ನು ಬಿಎಸ್‌ವೈ ಭೇಟಿ ಮಾಡಿಸಿದ್ದೇನೆ ಎಂದು ದೂರಿದರು.

ಯತ್ನಾಳ್‌, ಸೋಮಣ್ಣರಿಂದ ಮಾತ್ರ ಬಿಎಸ್‌ವೈ ಟೀಕೆ

ಸೋಮಣ್ಣಗೆ ವಿಧಾನಸಭೆ ಚುನಾವಣೆಯಲ್ಲಿ ಅಷ್ಟು ಮತಗಳು ಯಡಿಯೂರಪ್ಪನವರಿಂದಲೇ ಬಂದಿವೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ಹತಾಶರಾಗಿ ಸೋಮಣ್ಣ ಮಾತನಾಡುತ್ತಿದ್ದಾರೆ. ಯತ್ನಾಳ್, ಸೋಮಣ್ಣ ಬಿಟ್ಟರೆ ಯಡಿಯೂರಪ್ಪನವರಿಗೆ ಯಾರೂ ಟೀಕಿಸುತ್ತಿಲ್ಲ. ಮುಂಬರುವ ಲೋಕಸಭೆ ಚುನಾವಣೆ ನಾವೆಲ್ಲರೂ ಒಟ್ಟಾಗಿ ಎದುರಿಸುತ್ತೇವೆ. 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಿ, ಕೇಂದ್ರದಲ್ಲಿ ಅಧಿಕಾರಕ್ಕೆ ತರುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!