ಹೊಸಪೇಟೆ: ಈ ಬಾರಿಯ ಹಂಪಿ ಉತ್ಸವವನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ನಡೆದ ಹಂಪಿ ಉತ್ಸವದ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದರು.ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಸಲಹೆ -ಸೂಚನೆ ಪಡೆಯಲಾಗಿದೆ. ಎರಡೂ ಇಲಾಖೆಗಳ ಅಧಿಕಾರಿಗಳ ಅಭಿಪ್ರಾಯ ಸಹ ಪಡೆಯಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಮತ್ತು ಸಹಭಾಗಿತ್ವದೊಂದಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ಸವ ಯಶಸ್ವಿಗೊಳಿಸಲಾಗುವುದು. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಎಲ್ಲ ಅಚ್ಚುಕಟ್ಟಾಗಿ ರೂಪಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.ಪೂರ್ವ ಸಿದ್ಧತಾ ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅಗತ್ಯ ಸಲಹೆ ನೀಡಿದರು.
ಶಾಸಕರಾದ ಎಚ್.ಆರ್. ಗವಿಯಪ್ಪ, ಜೆ.ಎನ್. ಗಣೇಶ್, ಇಲಾಖೆ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ಮಂಜುಳಾ, ಸಲ್ಮಾ ಫಾಹಿಮ್, ಧರಣಿ ದೇವಿ ಮಾಲಗತ್ತಿ, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಸಿಇಒ ಅಕ್ರಂ ಶಾ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಇಲಾಖೆಗಳ ಅಧಿಕಾರಿಗಳು ಇದ್ದರು.ಹಂಪಿಯಲ್ಲಿ ಜರ್ಮನಿ ಪ್ರವಾಸಿಗನಿಂದ ಸ್ವಚ್ಛತೆಹೊಸಪೇಟೆ:
ಹಂಪಿಯ ತುಂಗಭದ್ರಾ ನದಿ ತೀರದಲ್ಲಿ ಜರ್ಮನಿಯ ಪ್ರವಾಸಿಗನೋರ್ವ ಸ್ವಚ್ಛತಾ ಕಾರ್ಯ ಕೈಗೊಂಡು ಸೈ ಎನಿಸಿಕೊಂಡಿದ್ದಾನೆ.ಹಂಪಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಬಿಟ್ಟಿರುವ ಬಟ್ಟೆಗಳು ಹಾಗೂ ಇತರೆ ತ್ಯಾಜ್ಯವನ್ನು ಜರ್ಮನಿಯಿಂದ ಹಂಪಿಗೆ ಪ್ರವಾಸಕ್ಕೆ ಬಂದಿರುವ ಟೊಬಿ ಎಂಬ ಪ್ರವಾಸಿಗ ಸ್ವಚ್ಛ ಮಾಡಿದ್ದು, ಸ್ಥಳೀಯ ಯುವಕರ ಪಡೆ ಅವರಿಗೆ ಸಾಥ್ ನೀಡಿದೆ. ಜೊತೆಗೆ ಕೆಲ ವಿದೇಶಿ ಪ್ರವಾಸಿಗರು ಕೂಡ ಇವರ ಜೊತೆಗೆ ಕೈಜೋಡಿಸಿದ್ದು, ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ.ಹಂಪಿಯಂತಹ ಐತಿಹಾಸಿಕ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂಬುದನ್ನು ಮನದಟ್ಟು ಮಾಡುವ ಕಾಯಕದಲ್ಲಿ ಈ ಪ್ರವಾಸಿಗ ನಿರತನಾಗಿದ್ದು, ನದಿ ತೀರ ಹಾಗೂ ನದಿಯಲ್ಲಿ ಬಿದ್ದ ತ್ಯಾಜ್ಯ ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾರೆ. ನದಿಯಲ್ಲಿ ಈ ರೀತಿ ತ್ಯಾಜ್ಯ ಬಿಸಾಡಬಾರದು. ಸ್ನಾನ ಮಾಡಿ ಹಳೇ ಬಟ್ಟೆಗಳನ್ನು ಬಿಸಾಡಬಾರದು ಎಂದು ಹೇಳುವ ಪ್ರವಾಸಿಗ ಟೊಬಿ, ಪ್ರವಾಸಿ ತಾಣ ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ಶುಚಿತ್ವ ಕಾಪಾಡಬೇಕು ಎಂಬ ಸಂದೇಶ ರವಾನಿಸಿದ್ದಾರೆ.