ರಟ್ಟೀಹಳ್ಳಿ: ನಮ್ಮೆಲ್ಲರಲ್ಲೂ ಸನಾತನ ಧರ್ಮದ ಪ್ರವೃತ್ತಿ ಬೆಳೆಸುವ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ಹಿಂದೂ ಸನಾತನ ಧರ್ಮದ ಆಚಾರ ವಿಚಾರಗಳು ಸಂಸ್ಕೃತಿ ವಿನಾಶದ ಕಡೆಗೆ ಸಾಗುತ್ತಿದೆ. ಆ ರೀತಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಆದಿ ಗುರು ಶಂಕರಾಚಾರ್ಯರು ನೀಡಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ ಭಾರತ ವಿಶ್ವಗುರುವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಬ್ರಾಹ್ಮಣ ಸಮಾಜದ ಅಧ್ಯಕ್ಷ ಗಿರೀಶ ನಾಡಿಗೇರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಆದಿ ಗುರು ಶಂಕರಾಚಾರ್ಯರರ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 8ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಜನನವಾಗಿದ್ದು, ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ವೇದ ಮಂತ್ರಗಳ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ದೈವಿ ಪುರುಷರ, ಅವರ ಜನನ ಸಂದರ್ಭದಲ್ಲಿ ಜಗತ್ತು ಅಂಧಕಾರದಿಂದ ಕೂಡಿತ್ತು. ವೇದಗಳನ್ನು ವಿರೋಧಿಸುವವರ ಮಧ್ಯ ವೇದಗಳ ಮಹತ್ವವನ್ನು 32 ವರ್ಷದ ಜೀವಿತಾವಧಿಯಲ್ಲಿ ಜಗತ್ತಿನಾದ್ಯಂತ ಓಡಾಡಿ ನಾಸ್ತಿಕವಾದವನ್ನು ಖಂಡಿಸಿ ನಮ್ಮ ಸನಾತನ ಹಿಂದೂ ಸಂಸ್ಕೃತಿಯನ್ನು ಉಳಿಸುವಲ್ಲಿ ಅವರ ಕೊಡುಗೆ ಅಪಾರ. ಅಂತಹ ಮಹಾನ್ ಪುರುಷರ ಜಯಂತಿಯನ್ನು ಕೇವಲ ಜಯಂತಿಗೆ ಸೀಮಿತಗೊಳಿಸದೇ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.ಆದಿ ಗುರು ಶಂಕರಾಚಾರ್ಯರರ ಜಯಂತಿ ಅಂಗವಾಗಿ ಕದಂಬೇಶ್ವರ ದೇವಸ್ಥಾನದಲ್ಲಿ ಇಂದು ಅವರ ಸ್ಥಾಪನ ಪೂಜಾ ಕೈಂಕರ್ಯಗಳೊಂದಿಗೆ 7 ದಿನಗಳ ನಿತ್ಯ ಕದಂಬೇಶ್ವರನಿಗೆ ರುದ್ರಾಭಿಷೇಕ, ಗುರುಗಳಿಗೆ ಅಷ್ಟೋತ್ತರ ಶತನಾಮಾವಳಿ, ಸಂಜೆ ಭಜನೆ ಹಾಗೂ ಇತ್ಯಾಧಿ ಕಾರ್ಯಕ್ರಮಗಳು ಜರುಗುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಎಂ.ಎಸ್. ಜಗತಾಪ, ರಾಜು ಪೂಜಾರ, ಶಿವನಾಗಪ್ಪ ಜೋಗೇರ, ಗಣೇಶ ಬೊಂಗಾಳೆ, ಅರ್ಚಕ ವಾದಿರಾಜ ಕಟ್ಟಿ, ರವೀಂದ್ರ ಮಕರಿ, ಉಷಾ ಮಕರಿ, ಗಿರಿಜಾ ನಾಡಗೇರ, ಲಕ್ಷ್ಮೀ ಆದ್ವಾನಿ, ನರಸಿಂಹ ಆದ್ವಾನಿ, ವಾಸು ಜೋಶಿ, ಗುರುರಾಜ ಕಟ್ಟಿ, ಕೃಷ್ಣರಾಜ ವೇರ್ಣೇಕರ, ಸುಬ್ರಮಣ್ಯ ನಾಡಿಗೇರ, ಪ್ರದೀಪ ಕುಲಕರ್ಣಿ ಮುಂತಾದವರು ಇದ್ದರು.