ಪ್ರಾಮಾಣಿಕತೆಯಿಂದ ಜನಸಾಮಾನ್ಯರಿಗೆ ನ್ಯಾಯ ಒದಗಿಸೋಣ: ನೀಲಗುಂದ

KannadaprabhaNewsNetwork | Published : Apr 4, 2025 12:48 AM

ಸಾರಾಂಶ

ಪೊಲೀಸ್‌ ಅಂದರೆ ಶಿಸ್ತಿನ ಇಲಾಖೆ. ನಮಗೆ ಸಿಕ್ಕಿರುವ ಅವಕಾಶವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡಬಹುದು. ಜಿಲ್ಲಾ ಪೊಲೀಸ್‌ ಅಂದರೆ ಹೆಮ್ಮೆಯ ಪೊಲೀಸ್‌ ಎಂದಾಗಬೇಕು. ಆ ರೀತಿಯಲ್ಲಿ ನಮ್ಮ ಕಾರ್ಯನಿರ್ವಹಣೆ ಇರಬೇಕು ಎಂದು ನಿವೃತ್ತ ಪಿಎಸ್‌ಐ ಎಚ್‌.ಎಚ್. ನೀಲಗುಂದ ಹೇಳಿದರು.

ಗದಗ: ಪೊಲೀಸ್‌ ಅಂದರೆ ಶಿಸ್ತಿನ ಇಲಾಖೆ. ನಮಗೆ ಸಿಕ್ಕಿರುವ ಅವಕಾಶವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡಬಹುದು. ಜಿಲ್ಲಾ ಪೊಲೀಸ್‌ ಅಂದರೆ ಹೆಮ್ಮೆಯ ಪೊಲೀಸ್‌ ಎಂದಾಗಬೇಕು. ಆ ರೀತಿಯಲ್ಲಿ ನಮ್ಮ ಕಾರ್ಯನಿರ್ವಹಣೆ ಇರಬೇಕು ಎಂದು ನಿವೃತ್ತ ಪಿಎಸ್‌ಐ ಎಚ್‌.ಎಚ್. ನೀಲಗುಂದ ಹೇಳಿದರು. ಮಲ್ಲಸಮುದ್ರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್‌ ಧ್ವಜ ದಿನಾಚರಣೆ, ನಿವೃತ್ತ ಪೊಲೀಸರ ಸೇವಾ ಸ್ಮರಣೆ ಹಾಗೂ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಾರೆ. ಅಪರಾಧ ತಡೆಗಟ್ಟಲು ಹಾಗೂ ಅಪರಾಧ ಪತ್ತೆ ಹಚ್ಚಲು ಬದ್ಧತೆಯಿಂದ ಕೆಲಸ ನಿರ್ವಹಿಸುವ ಪೊಲೀಸ್‌ ಸಿಬ್ಬಂದಿಗೆ ಸರ್ಕಾರ ಇನ್ನೂ ಹೆಚ್ಚಿನ ಸವಲತ್ತುಗಳನ್ನು ಒದಗಿಸಬೇಕು. ಪೊಲೀಸರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, 1965ರಿಂದ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದ್ದು, ಪ್ರಸಕ್ತ ವರ್ಷವೂ ಏ.2ರಂದು ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಲ್ಲಿ ಧ್ವಜ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಪೊಲೀಸ್ ಸಿಬ್ಬಂದಿ ಹಗಲು-ರಾತ್ರಿ ಎನ್ನದೇ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಶ್ರಮಿಸುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಈ ಸಮಯದಲ್ಲಿ ಸ್ಮರಿಸಿಕೊಳ್ಳಲು ಹಾಗೂ ನಿವೃತ್ತಿ ನಂತರ ಅವರಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿ ವರ್ಷ ಪೊಲೀಸ್‌ ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಶೇ.50ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮನಿಧಿಗೆ ಮತ್ತು ಶೇ 50ರಷ್ಟು ಹಣವನ್ನು ಕೇಂದ್ರ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡ‌ಲಾಗುತ್ತದೆ. ಈ ನಿಧಿಯನ್ನು ಸೇವೆಯಲ್ಲಿರುವ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವೈದ್ಯಕೀಯ ವೆಚ್ಚಕ್ಕೆ ವಿನಿಯೋಗಿಸಲಾಗುತ್ತದೆ ಎಂದರು.

ಪ್ರತಿ ಮೂರು ತಿಂಗಳಿಗೊಮ್ಮೆ ನಿವೃತ್ತ ಪೊಲೀಸ್‌ ಅಧಿಕಾರಿಗಳ ಕ್ಷೇಮನಿಧಿ ಸಮಿತಿ ಸಭೆ ಕರೆದು, ಕುಂದು ಕೊರತೆಗಳನ್ನು ಆಲಿಸಲಾಗುವುದು. ಪ್ರಸಕ್ತ ವರ್ಷ3.28 ಲಕ್ಷ ಹಣವನ್ನು ವೈದ್ಯಕೀಯ ಧನಸಹಾಯ ಹಾಗೂ ಮರಣ ಹೊಂದಿದ ನಿವೃತ್ತ ಪೊಲೀಸ್‌ ಅಧಿಕಾರಿಗಳ ಅಂತ್ಯ ಸಂಸ್ಕಾರಕ್ಕೆ ₹1.10 ಲಕ್ಷ ನೀಡಲಾಗಿದೆ.

ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಗದಗ ಜಿಲ್ಲಾ ಪೊಲೀಸ್‌ ಮುಂಚೂಣಿಯಲ್ಲಿದೆ. ಜಿಲ್ಲಾ ಪೊಲೀಸ್‌ ಸಿಬ್ಬಂದಿ ಇದೇ ರೀತಿ ಹೆಚ್ಚಿನ ಕೆಲಸ ಮಾಡಿ ಸಾರ್ವಜನಿಕರಿಂದ ಗೌರವ ಗಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಉತ್ತಮ ಕಾರ್ಯನಿರ್ವಹಣೆ ತೋರಿದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ. ಸಂಕದ ವೇದಿಕೆಯಲ್ಲಿದ್ದರು. ಡಿವೈಎಸ್‌ಪಿ ಪ್ರಭುಗೌಡ ಕಿರೆದಳ್ಳಿ ವಂದಿಸಿದರು. ಎಂ.ಟಿ.ಭಟ್ ನಿರೂಪಿಸಿದರು.

Share this article