ಅರ್ಹ ಕಲಾವಿದರ ಗುರುತಿಸಿ ಪ್ರಶಸ್ತಿ ನೀಡುವಂತಾಗಲಿ: ತಿಮ್ಮಪ್ಪ ಜೋಳದರಾಶಿ

KannadaprabhaNewsNetwork |  
Published : Aug 15, 2025, 01:00 AM IST
ಬಳ್ಳಾರಿಯ ಸಾಂಸ್ಕೃತಿಕ ಸಮುಚ್ಛಯ ಹೊಂಗಿರಣ ಆವರಣದಲ್ಲಿ ಜರುಗಿದ ರಾಮಾಯಣ ಬಯಲಾಟ ಪ್ರದರ್ಶನಕ್ಕೆ ತಿಮ್ಮಪ್ಪ ಜೋಳದರಾಶಿ ಚಾಲನೆ ನೀಡಿದರು.  | Kannada Prabha

ಸಾರಾಂಶ

ಬಯಲಾಟ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಇತರೆ ಪ್ರಶಸ್ತಿಗಳಿಂದ ಅರ್ಹ ಕಲಾವಿದರು ವಂಚಿತರಾಗುತ್ತಿದ್ದು, ಸರ್ಕಾರ ಅರ್ಹ ಕಲಾವಿದರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುವಂತಾಗಬೇಕು

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಯಲಾಟ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಇತರೆ ಪ್ರಶಸ್ತಿಗಳಿಂದ ಅರ್ಹ ಕಲಾವಿದರು ವಂಚಿತರಾಗುತ್ತಿದ್ದು, ಸರ್ಕಾರ ಅರ್ಹ ಕಲಾವಿದರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುವಂತಾಗಬೇಕು ಎಂದು ಜೆ.ಕೆ. ಫೌಂಡೇಷನ್ ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಜೋಳದರಾಶಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೇವಿಶ್ರೀ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್ ಇವರ ಗಿರಿಜನ ಉಪಯೋಜನೆಯಡಿ ನಗರದ ಸಾಂಸ್ಕೃತಿಕ ಸಮುಚ್ಛಯ ಹೊಂಗಿರಣ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಮಾಯಣ ಬಯಲಾಟ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲೆಗೆ ಮನ ಸೋಲದ ವ್ಯಕ್ತಿಗಳೇ ಇಲ್ಲ. ಅದರಲ್ಲೂ ಬಯಲಾಟ ಕಲೆ ಮತ್ತಷ್ಟೂ ವಿಶೇಷವಾದದ್ದು. ರೋಗ ರುಜಿನಿಗಳನ್ನು ವಾಸಿ ಮಾಡುವ ಶಕ್ತಿ ಬಯಲಾಟಕ್ಕಿದೆ. ನಿಜ ಜೀವನದಲ್ಲಿ ನಡೆಯುವ ಅಂಶಗಳೇ ಬಯಲಾಟದಲ್ಲಿವೆ. ಕಲಾವಿದರು ದೇಶದ ಸಾಂಸ್ಕೃತಿಕ ಶಕ್ತಿಯಾಗಿದ್ದು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಯಲಾಟ ಕಲಾವಿದ ಸಿದ್ದರಾಮಪ್ಪ ಸಿರಿಗೇರಿ ಮಾತನಾಡಿ, ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರನ್ನು ಉಳಿಸುವ ಕೆಲಸ ಸರಕಾರ ಮಾಡಬೇಕು ಎಂದು ಹೇಳಿದರು.

ಯಕ್ಷಗಾನಕ್ಕಿಂತ ಬಯಲಾಟ ಹಿಂದುಳಿದಿದ್ದು, ಬಯಲಾಟಕ್ಕೆ ವಿದ್ಯಾವಂತರು, ಬುದ್ಧಿವಂತರು, ಪ್ರೊಫೆಸರ್‌ಗಳು ಬಯಲಾಟದಲ್ಲಿ ಭಾಗವಹಿಸಿ ಪಾತ್ರ ಅಭಿನಯಿಸುವ ಮೂಲಕ ಬಯಲಾಟವನ್ನು ಸಹ ದೇಶ ವಿದೇಶಗಳಿಗೆ ಕೊಂಡೊಯ್ಯಬಹುದು ಎಂದು ಹೇಳಿದರು.

ಜಾನಪದ ಪರಿಷತ್ ಅಧ್ಯಕ್ಷ ಚಾನಾಳ್ ಅಮರೇಶಪ್ಪ, ಕೆ.ವೀರಾಪುರ ಶ್ರೀನಿವಾಸ,

ನವಕೋಟಿ ರೆಡ್ಡಿ, ಶ್ರೀನಿವಾಸ ಕೆ. ವೀರಾಪುರ ಮಾತನಾಡಿದರು.

ಬಯಲಾಟ ಕಲಾವಿದ ಕರ್ಚೇಡು ನಾಗರಾಜ ಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಭೂಮಿ ಕಲಾವಿದೆ ಬಿ.ಸುಜಾತಮ್ಮ, ದೇವಿಶ್ರೀ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್‌ನ ಅಧ್ಯಕ್ಷ ವೈ.ರಂಗಾರೆಡ್ಡಿ, ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್‌ನ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಮತ್ತಿತರರಿದ್ದರು.

ಕೊನೆಯಲ್ಲಿ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್‌ನಿಂದ ರಾಮಾಯಣ ಬಯಲಾಟ ಪ್ರದರ್ಶನ ಜರುಗಿತು.

ಬಾಲಕೃಷ್ಣನ ಪಾತ್ರದಲ್ಲಿ ಎಂ. ಆಕಾಶ್ ಕೊರ್ಲಗುಂದಿ, ಶ್ರೀರಾಮನ ಪಾತ್ರದಲ್ಲಿ ಗೋನಾಳ್ ಎಸ್. ವೀರಬಸಪ್ಪ, ಲಕ್ಷ್ಮಣನಾಗಿ ಸಿ. ಹೊಸೂರಪ್ಪ ಮುದ್ದಟನೂರು, ಸೀತಾದೇವಿಯಾಗಿ ಕೂಡ್ಲಿಗಿ ಕೋಟೆ ಅಂಜಿನಮ್ಮ, ಮಾಯಾಸ್ತ್ರಿ ಪಾತ್ರದಲ್ಲಿ ನಾಗಮ್ಮ ವಿರುಪಾಪುರ ಅಭಿನಯಿಸಿದರು. ಸಾರಥಿ ಪಾತ್ರದಲ್ಲಿ ಎ. ಪಾಂಡುರಂಗ ಗುಡದೂರು, ಹಾರ್ಮೋನಿಯಂ ವೈ.ರಂಗಾರೆಡ್ಡಿ, ಎಸ್. ವೀರೇಶ್ ತಬಲಾ ಸಾಥ್ ನೀಡಿದರು. ಗೋನಾಳ್ ಸಿದ್ದಯ್ಯ, ಕೊಂಚಗೇರಿ ಷಣ್ಮುಖಪ್ಪ, ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಭಾಗವಹಿಸಿದ್ದರು. ಕೊರಲಗುಂದಿ ಕೆ. ಪರಮೇಶ್ವರ ವಸ್ತ್ರಾಲಂಕಾರ ಮಾಡಿದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ