ಬಳ್ಳಾರಿ: ಕನಿಷ್ಠ ವೇತನ ಜಾರಿಗಾಗಿ ಹೋರಾಟ ಸಮಿತಿ ನೀಡಿದ ಕರೆಯ ಮೇರೆಗೆ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಗುತ್ತಿಗೆ ಕಾರ್ಮಿಕರ ಪತ್ರ ಚಳವಳಿಗೆ ನಗರದಲ್ಲಿ ಚಾಲನೆ ನೀಡಲಾಯಿತು.
ಪತ್ರದಲ್ಲಿ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕನಿಷ್ಠ ವೇತನ ಪರಿಷ್ಕರಣೆ ಕೊನೆಗೂ ಮೇ 22ರಂದು ಜಾರಿಗೊಂಡಿದ್ದರಿಂದ ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಲ್ಲಿ ಸಂತಸ ಮೂಡಿತ್ತು. ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದೇವು. ಆದರೆ, ಸರ್ಕಾರವು ಪರಿಷ್ಕೃತ ವೇತನದ ಕುರಿತು ಕ್ಯಾಬಿನೆಟ್ ಉಪಸಮಿತಿ ರಚಿಸಿರುವುದರಿಂದ ವೇತನ ಜಾರಿಗೆ ತಡೆ ಉಂಟಾಗಿದೆ. ತೀವ್ರ ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಶಾಸನಬದ್ಧವಾಗಿ ದೊರೆಯಬೇಕಾದ ವೇತನ ಹೆಚ್ಚಳ ತಡೆ ಹಿಡಿದಿರುವುದು ದುರದೃಷ್ಟಕರ. ಕೂಡಲೇ ಪರಿಷ್ಕೃತ ವೇತನ ಜಾರಿಗೆ ಕ್ರಮಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಇದೇ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಾ. ಪ್ರಮೋದ, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಸರ್ಕಾರ ವೇತನ ಹೆಚ್ಚಳ ಕಿತ್ತುಕೊಂಡಿದೆ.ಇದನ್ನು ಕಾರ್ಮಿಕರು ಎಂದಿಗೂ ಸಹಿಸುವುದಿಲ್ಲ.ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟಕ್ಕೆ ಎಲ್ಲ ಗುತ್ತಿಗೆ ಕಾರ್ಮಿಕರು ಸಜ್ಜಾಗಬೇಕು. ಪ್ರಸ್ತುತ ನಡೆಯುತ್ತಿರುವ ಪತ್ರ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಲಕ್ಷಾಂತರ ಪತ್ರಗಳು ಮುಖ್ಯಮಂತ್ರಿಗೆ ತಲುಪುವಂತಾಗಬೇಕು ಎಂದು ಕರೆ ನೀಡಿದರು.ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಎ.ದೇವದಾಸ್, ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಜಿ.,ಕಿರಣಕುಮಾರ, ಮುರಳಿ ಕೃಷ್ಣ, ಚೇತನ್, ಅಶ್ವಿನಿ, ಖಜಾಸಾಬ್, ಲಕ್ಷ್ಮಿ, ಶಾರದಾ, ನಾಗೇಶಯ್ಯ ಮತ್ತಿತರರು ಪಾಲ್ಗೊಂಡಿದ್ದರು.