ಮಲಿಯಮ್ಮ ಕೆರೆಯ ಮೂಕ ವೇದನೆ ಕೇಳೋರಿಲ್ಲ

KannadaprabhaNewsNetwork |  
Published : Sep 09, 2026, 02:30 AM IST
ಹೂವಿನಹಡಗಲಿ ತಾಲೂಕಿನ ಹ್ಯಾರಡದ ಮಲಿಯಮ್ಮನ ಕೆರೆ ನೀರಿಲ್ಲದೇ ಬತ್ತಿರುವುದು. ಕೆರೆಯಲ್ಲಿ ನೀರಿಲ್ಲದೇ ರೈತರ ಕೃಷಿ ಹೊಂಡದಲ್ಲಿ ನೀರು ಕಡಿಯುತ್ತಿರುವ ಮೇಕೆಗಳು, ಅಳಿದುಳಿದ ನೀರನ್ನೇ ಕುಡಿಯುತ್ತಿರುವ ಜಾನುವಾರುಗಳು.  | Kannada Prabha

ಸಾರಾಂಶ

ಸುತ್ತಲೂ ಹತ್ತಾರು ಹಳ್ಳಿಗಳ ರೈತರು, ಜಾನುವಾರು, ಕುರಿ, ಮೇಕೆ ಮತ್ತು ಅರಣ್ಯದ ವನ್ಯಜೀವಿಗಳಿಗೆ ಈ ಕೆರೆಯ ಜಲವೇ ಜೀವನಾಧಾರ

ಚಂದ್ರು ಕೊಂಚಿಗೇರಿ ಹೂವಿನಹಡಗಲಿ

ಮೂರೂವರೆ ಸಾವಿರ ಹೆಕ್ಟೇರ್‌ ಪ್ರದೇಶದ ಹಚ್ಚ ಹಸುರಿನ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಸುತ್ತುವರಿದಿರುವ ಹ್ಯಾರಡ ಗ್ರಾಮದ ಮಲಿಯಮ್ಮನ ಕೆರೆ ನೀರಿಲ್ಲದೇ, ಕೆರೆಯಂಗಳ ನೆಲ ಬಾಯಿ ತೆರೆದು ನಿಂತಿದೆ. ಮೂಕಪ್ರಾಣಿಗಳ ರೋದನ ಕೇಳುವವರಿಲ್ಲ, ಕಾಡುಪ್ರಾಣಿಗಳ ನೀರಿನ ದಾಹ ತೀರಿಸುವವರಿಲ್ಲ ಎಂಬಂತಾಗಿದೆ.

ತಾಲೂಕಿನ ಹ್ಯಾರಡ ಗ್ರಾಮದ ಹೊಸ ಮಲಿಯಮ್ಮನ ಕೆರೆ ಬಹು ವಿಸ್ತಾರವಾಗಿದೆ. ಈ ವರೆಗೂ ಸರ್ಕಾರಿ ದಾಖಲೆಗಳಲ್ಲಿ ಕೆರೆಯಂಗಳ ಎಷ್ಟು ಎಕರೆ ಪ್ರದೇಶವಿದೆ ಎಂಬುದು ನಮೂದು ಆಗಿಲ್ಲ. ಸಿಕ್ಕ ಸಿಕ್ಕ ಕಡೆಗಳಲ್ಲಿ ಕೆರೆ ಒತ್ತುವರಿಯಾಗಿದೆ. ಈ ಕುರಿತು ಗ್ರಾಮಸ್ಥರು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ, ಸ್ಪಂದನೆ ಮಾತ್ರ ಸಿಕ್ಕಿಲ್ಲ.

ಸುತ್ತಲೂ ಹತ್ತಾರು ಹಳ್ಳಿಗಳ ರೈತರು, ಜಾನುವಾರು, ಕುರಿ, ಮೇಕೆ ಮತ್ತು ಅರಣ್ಯದ ವನ್ಯಜೀವಿಗಳಿಗೆ ಈ ಕೆರೆಯ ಜಲವೇ ಜೀವನಾಧಾರವಾಗಿತ್ತು. ಆದರೆ ಹನಿ ಮಳೆಯೂ ಸುರಿಯದೇ ಕೆರೆಯಂಗಳ ಸಂಪೂರ್ಣ ಬರಿದಾಗಿದೆ. ಇತ್ತ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಶಾಕಾರ ಬಳಿ ಜಾಕ್‌ವೆಲ್‌ನಿಂದ 13 ಕಿಮೀ ದೂರದಿಂದ ಪೈಪ್‌ಲೈನ್‌ ಮಾಡಿ ನೀರು ತುಂಬಿಸುವ ಯೋಜನೆಗೆ ಗ್ರಹಚಾರವೇ ನೆಟ್ಟಿಗಿಲ್ಲ. ನದಿಯಲ್ಲಿ ನೀರಿದ್ದಾಗ ಮೋಟಾರ್‌ ಪಂಪ್‌ಸೆಟ್‌ ಕೈ ಕೊಡುತ್ತಿದೆ. ಮೋಟಾರ್‌ ದುರಸ್ತಿ ಆನಂತರ ನದಿಯಲ್ಲಿ ನೀರು ಕಡಿಮೆಯಾಗುವ ಪರಿಸ್ಥಿತಿ ಎದುರಾಗುತ್ತಿವೆ.

ಕಳೆದ 10 ವರ್ಷದಲ್ಲಿ ಈ ಭಾಗದ ಹೊಸ ಮಲಿಯಮ್ಮನ ಕೆರೆ, ಹಳೆ ಮಲಿಯಮ್ಮನ ಕೆರೆ ಮತ್ತು ದಾಸನಹಳ್ಳಿ ಕೆರೆಗಳು ಸಂಪೂರ್ಣ ತುಂಬಿರುವ ಉದಾಹರಣೆಯೇ ಇಲ್ಲ. ಈ ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ನಮಗೇನು ಬೇಕಾಗಿಲ್ಲ, ನೀರು ಕೊಟ್ಟರೆ ಸಾಕು ಎನ್ನುತ್ತಾರೆ ಗ್ರಾಮಸ್ಥರು.

ಹ್ಯಾರಡ ಗ್ರಾಮದ ವ್ಯಾಪ್ತಿಯಲ್ಲಿ 26,138, ಹೊಳಲು ವ್ಯಾಪ್ತಿಯಲ್ಲಿ 11,339, ಮೈಲಾರ ವ್ಯಾಪ್ತಿಯಲ್ಲಿ 6,500 ಸೇರಿದಂತೆ ಒಟ್ಟು 43,977 ಜಾನುವಾರು, ಕುರಿ ಮತ್ತು ಮೇಕೆಗಳಿವೆ. ಕೆರೆ ಸುತ್ತುವರಿದಿರುವ ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಇರುವ ಚಿರತೆ, ಕರಡಿ, ಮಳ್ಳು ಹಂದಿ, ಕಾಡು ಹಂದಿ, ತೋಳ, ನರಿ, ಚಿಪ್ಪು ಹಂದಿ, ಹತ್ತಾರು ಜಾತಿ ಹಾವುಗಳು, ನವಿಲು, ಮೊಲ, ಮಂಗಗಳಿಗೆ ಈ ಕೆರೆಯ ನೀರೇ ಆಧಾರ. ಜತೆಗೆ 24 ಹಳ್ಳಿಗಳ ರೈತರ ಸಾವಿರಾರು ಕೊಳವೆಬಾವಿಗಳ ಅಂತರ್ಜಲ, ಹೆಚ್ಚಳಕ್ಕೆ ಈ ಕೆರೆ ನೀರೇ ಜೀವಜಲವಾಗಿದೆ. ಆದರೆ ಕೆರೆ ತುಂಬಿಸುವ ಯೋಜನೆಯಿಂದ ನೀರು ಹರಿಯದೇ ಕೆರೆ ಬಟಾಬಯಲು, ಮೂಕಪ್ರಾಣಿಗಳು ಗುಂಡಿಗಳಲ್ಲಿನ ರಾಡಿ ನೀರನ್ನೇ ಕುಡಿಯುತ್ತಿವೆ. ಕಾಡುಪ್ರಾಣಿಗಳು ರೈತರ ಜಮೀನುಗಳ ಕೊಳವೆಬಾವಿ ನೀರನ್ನು ಅರಸಿ ಬರುತ್ತಿವೆ. ಕೆರೆಯಲ್ಲಿ ನೀರಿಲ್ಲದ ಕಾರಣ ರೈತರ ಜಮೀನಿನ ಕೃಷಿ ಹೊಂಡದ ನೀರು ಕುಡಿಯುತ್ತಿವೆ.

ಶಾಕಾರ ಜಾಕ್‌ವೆಲ್‌ನಲ್ಲಿ ಪಂಪ್‌ ದುರಸ್ತಿಯಲ್ಲಿದೆ. ವಾರದೊಳಗೆ ರಿಪೇರಿ ಮಾಡಿ, ಹ್ಯಾರಡದ 2 ಕೆರೆಗಳು, ದಾಸನಹಳ್ಳಿ ಕೆರೆಗೆ ನೀರು ಹರಿಸುತ್ತೇವೆ ಎಂದು

ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಇಇ ಶಿವಮೂರ್ತಿ ತಿಳಿಸಿದ್ದಾರೆ.

ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಹ್ಯಾರಡ ಸುತ್ತ ಹತ್ತು ಹಳ್ಳಿ ಜನ ಸೇರಿ ಜೈಲ್‌ ಭರೋ ಹೋರಾಟಕ್ಕೂ ಸಿದ್ಧರಿದ್ದೇವೆ. ಬರದಲ್ಲಿ ಜಾನುವಾರುಗಳ ನೀರಿನ ಬವಣೆ ಹೇಳತೀರದಾಗಿದೆ ಎಂದು ಕೆರೆ ಹೋರಾಟ ಸಮಿತಿಯ ಮುದ್ದಣ್ಣನವರ್‌ ಬಸಣ್ಣ, ಹರವಿ ಪ್ರಕಾಶ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೂಲಿ ಹಣ ಜಮೆಗೆ ಆಗ್ರಹಿಸಿ ಕೂಲಿ ಕಾರ್ಮಿಕರ ಪ್ರತಿಭಟನೆ
ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಪತ್ರ ಚಳವಳಿ