ಉಡುಪಿ: ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ಕಾರ್ಯತಂಡ ನೀಡಿರುವ ಅಧ್ಯಯನ ವರದಿ ಆಧಾರದ ಮೇಲೆ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿರುವ ಕರಡು ಅಧಿಸೂಚನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ, ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಭರವಸೆ ನೀಡಿದ್ದಾರೆ.
ಕರಡು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕಾರ್ಕಳದ 13 ಹಾಗೂ ಕುಂದಾಪುರದ 22 ಸೇರಿದಂತೆ ಒಟ್ಟು 35 ಹಳ್ಳಿಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡಲಿವೆ. ಈ ಪ್ರದೇಶಗಳ ಮಧ್ಯದಲ್ಲೂ ವಸತಿ ಪ್ರದೇಶವಿರುವುದರಿಂದ ಕೂಲಂಕಷವಾಗಿ ಪರಿಶೀಲಿಸಬೇಕಿದೆ ಎಂದರು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಸ್ತೂರಿ ರಂಗನ್ ಕರಡು ಅಧಿಸೂಚನೆಯನ್ನು ನಾವು ವಿರೋಧಿಸುತ್ತೇವೆ. ಜನರ ಪ್ರತಿರೋಧವನ್ನು ಸರ್ಕಾರದ ಗಮನಕ್ಕೆ ತರಬೇಕು. ಪರಿಸರ ಸೂಕ್ಷ್ಮ ವಲಯವು ವಸತಿ ಪ್ರದೇಶದಿಂದ ಹೊರಗಿರಬೇಕು. ಜಿಲ್ಲೆಯ 35 ಗ್ರಾಮಗಳ ಜನರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಸರಿಯಾದ ಭೌತಿಕ ಸರ್ವೆ ಮಾಡಿ, ವರದಿಯನ್ನು ಕಳುಹಿಸಬೇಕು ಎಂದು ಆಗ್ರಹಿಸಿದರು. ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಪರಿಸರ ಸೂಕ್ಷ್ಮ ಪ್ರದೇಶವು ಯಾವ ಗ್ರಾಮಗಳಲ್ಲಿ, ಯಾವ ಸರ್ವೆ ನಂಬರ್ ಒಳಗೊಂಡಿವೆ ಎಂಬ ನಿಖರ ಮಾಹಿತಿ ಜನರಿಗೆ ತಿಳಿಸಬೇಕು. ಕಂದಾಯ ಹಾಗೂ ಅರಣ್ಯ ಇಲಾಖೆಯು ಜಂಟಿ ಸರ್ವೆಯನ್ನು ಮಾಡಿ ಗಡಿ ಗುರುತಿಸಬೇಕು, ಪ್ರತಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಚರ್ಚಿಸಿ ಸರ್ಕಾರಕ್ಕೆ ವರದಿ ನೀಡಬೇಕು ಎಂದರು.
ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ಕಾಡಂಚಿನ ಜನರಿಗೆ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಥವಾ ವರದಿ ಜಾರಿ ಮಾಡಲು ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತರಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿರುತ್ತದೆ. ಈ ಕಾರ್ಯವನ್ನು ತಪ್ಪದೆ ಮಾಡಬೇಕು ಎಂದರು.ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿದರು.