ಮಳಿಗೆಗಳಲ್ಲಿ ಸುರಕ್ಷಿತವಿದ್ದರೆ ಮಾತ್ರ ಪರವಾನಗಿಗೆ ಅನುಮತಿ, ಸುರಪುರ ಠಾಣೆಯಲ್ಲಿ ಪಟಾಕಿ ಮಾರುವವರ ಸಭೆಯಲ್ಲಿ ಜಾವೀದ್ ಸೂಚನೆ
ಸುರಪುರ: ಭವಿಷ್ಯದಲ್ಲಿ ಸಂಭವಿಸಬಹುದಾದ ಪಟಾಕಿ ಅವಘಡಗಳನ್ನು ತಡೆಯಲು ಜಿಲ್ಲಾಡಳಿತದಿಂದ ಪರವಾನಗಿ ಹೊಂದಿದವರು ಮಾತ್ರ ಪಟಾಕಿ ಮಾರಾಟ ಮಾಡಲು ಅನುಕೂಲ ಕಲ್ಪಿಸಿಕೊಡಲಾಗುವುದು. ಅನಧಿಕೃತವಾಗಿ ಮಾರಾಟ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಸುರಪುರ ಪೊಲೀಸ್ ಉಪ ವಿಭಾಗದ ಅಧೀಕ್ಷಕ ಜಾವೀದ್ ಇನಾಮದಾರ್ ಹೇಳಿದರು. ನಗರದ ಸುರಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಟಾಕಿ ಮಾರುವವರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬರುವ ಹಬ್ಬ ಹರಿದಿನಗಳಲ್ಲಿ ಪಟಾಕಿಯಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕೈಗೊಳ್ಳುವುದು ಅವಶ್ಯಕವಾಗಿದೆ. ತಾಲೂಕಿನಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ಮತ್ತು ಗೋದಾಮುಗಳು ಸುರಕ್ಷಿತವಾಗಿವೆ ಇಲ್ಲವೆ ಎಂಬುದನ್ನು ಪರಿಶೀಲಿಸಿ ಪರವಾನಗಿಯನ್ನು ಡಿಸಿಯವರು ನೀಡುತ್ತಾರೆ ಎಂದರು. ಹೊಸ ಲೈಸೆನ್ಸ್ ಮತ್ತು ನವೀಕರಣ ಪ್ರಕರಣಗಳಿಗೆ ಅನುಮೋದಿಸುವ ಮೊದಲು ಕಡ್ಡಾಯವಾಗಿ ಸ್ಥಳ ಪರಿಶೀಲಿಸುವುದು. ಮಳಿಗೆ ಹಾಗೂ ಗೋದಾಮುಗಳಲ್ಲಿ ಪಟಾಕಿಗಳನ್ನು ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಲೈಸನ್ಸ್ ಪಡೆದಿದ್ದಾರೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕಿದೆ. ಅಗ್ನಿ ನಿರೋಧಕವೂ ಪ್ರತಿಯೊಬ್ಬರ ಅಂಗಡಿಯಲ್ಲೂ ಇರಬೇಕು ಎಂದು ತಿಳಿಸಿದರು. ಸರ್ಕಾರದ ಆದೇಶದಂತೆ ಹಸಿರು ಪಟಾಕಿಗಳನ್ನು ಹೊರತು ಪಡಿಸಿ ಯಾವುದೇ ಇತರೆ ಪಟಾಕಿಗಳನ್ನು ಮಾರಿದರೆ ಪರವಾನಗಿ ರದ್ದುಪಡಿಸಿ ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಲಾಗುವುದು. ತಾಲೂಕುಗಳ ವ್ಯಾಪ್ತಿಯಲ್ಲಿ ಪಟಾಕಿಗಳನ್ನು ಮಾರಾಟ ಮಾಡಲು ನಿರ್ಮಿಸಲಾಗುವ ಮಳಿಗೆಗಳು ಸುರಕ್ಷಿತವಾಗಿ ಇವೆಯೇ ಎಂಬುದನ್ನು ಭೇಟಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮಾರಾಟಗಾರರು ದಿನಕ್ಕೆ ಎಷ್ಟು ಮಾರಾಟವಾಗುತ್ತದೆಯೋ ಅಷ್ಟನ್ನು ಮಾತ್ರ ಖರೀದಿಸಬೇಕು. ಅಲ್ಲದೆ ಲೈಸನ್ಸ್ ಪಡೆಯುವರು ನಗರದ ಹೊರಭಾಗದಲ್ಲಿ ಗೋದಾಮು ಇರುವುದು ಕಡ್ಡಾಯ. ನಗರಸಭೆ, ಪೊಲೀಸ್ ಇಲಾಖೆ, ಜೆಸ್ಕಾಂ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್‌ಒಸಿ ತರಲೇಬೇಕಿದೆ. ಇದು ಇದ್ದರೆ ಡಿಸಿ ಕಚೇರಿಯಲ್ಲಿ ಪರವಾನಗಿ ಕೊಡುತ್ತಾರೆ. ಇಲ್ಲದಿದ್ದರೆ ಪರವಾನಗಿ ನೀಡುವುದಿಲ್ಲ ಎಂದು ತಿಳಿಸಿದರು. ತಹಸೀಲ್ದಾರ್ ಕೆ. ವಿಜಯಕುಮಾರ, ತಾಪಂ ಇಒ ಬಸವರಾಜ ಸಜ್ಜನ್ ಮಾತನಾಡಿದರು. ಸಿಪಿಐ ಆನಂದ ವಾಗ್ಮೋಡೆ, ಪೌರಾಯುಕ್ತ ಪ್ರೇಮ್ ಚಾರ್ಲ್ಸ್, ಪಿಡಬ್ಲ್ಯುಡಿ ಅಧಿಕಾರಿ ಎಸ್.ಜಿ. ಪಾಟೀಲ್, ಕೆಂಭಾವಿ ಪಿಎಸ್‌ಐ ವೆಂಕಣ್ಣ ಶಹಾಪುರಕರ್, ರಾಜಶೇಖರ ಕೆ.ಆರ್., ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಹನುಮಪ್ಪ, ಮಾರಾಟಗಾರರಾದ ಗೋವಿಂದ ನಾಯಕ ಟಣಕೆದಾರ, ಲಕ್ಷ್ಮಣ ಬಾಳೆಕಾಯಿ, ಮಹೇಶ ರೆಡ್ಡಿ, ಚಂದ್ರು ವಂಟಿ, ಕೆಂಭಾವಿ ವಲಯದ ನವೀನ, ರಾಜ್‌ಮಹ್ಮದ್, ಶಿವಕುಮಾರ, ಧನರಾಮ್ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.