ಪೌರ ಕಾರ್ಮಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ: ಶಾಸಕ ಕೆ. ಎಸ್. ಆನಂದ್

KannadaprabhaNewsNetwork | Published : Oct 13, 2023 12:15 AM

ಸಾರಾಂಶ

ಪೌರ ಕಾರ್ಮಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ: ಶಾಸಕ ಕೆ. ಎಸ್. ಆನಂದ್
ಪೌರ ಕಾರ್ಮಿಕರದ್ದು ಶ್ರೇಷ್ಠ ಕೆಲಸ । ಪೌರ ಕಾರ್ಮಿಕರ ದಿನಾಚರಣೆ ಕನ್ನಡಪ್ರಭ ವಾರ್ತೆ, ಬೀರೂರು ಯಾವುದೇ ಪಟ್ಟಣ, ನಗರದಲ್ಲಿ ಸ್ವಚ್ಚ, ಉತ್ತಮ ವಾತಾವರಣ ನಿರ್ಮಾಣವಾಗಲು ಪೌರಕಾರ್ಮಿಕರ ಪರಿಶ್ರಮವೇ ಕಾರಣ. ರೋಗ ರುಜಿನಗಳಿಂದ ಸಾರ್ವಜನಿಕರನ್ನು ದೂರವಿಡುವ ಪೌರಕಾರ್ಮಿಕರನ್ನು ನಾಗರಿಕರು ಗೌರವದಿಂದ ಕಾಣಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಬೀರೂರು ಪುರಸಭೆ ಮತ್ತು ಪೌರಸೇವಾ ನೌಕರರ ಸಂಘದ ಆಶ್ರಯದಲ್ಲಿ ಪಟ್ಟಣದ ಗುರುಭವನದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ಪೌರ ಕಾರ್ಮಿಕರನ್ನು ಗೌರವಿಸ ಬೇಕಾದುದು ಜನಪ್ರತಿನಿಧಿಗಳೂ ಸೇರಿ ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ. ಬೀರೂರು ಪುರಸಭೆಯಲ್ಲಿ ಕಾರ್ಮಿಕರ ಮತ್ತು ನೌಕರರ ಕೊರತೆ ನೀಗಬೇಕು. ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು ಎಂಬ ಕೂಗಿಗೆ ನನ್ನ ಸಹಮತವಿದೆ. ಜ್ಯೋತಿ ಸಂಜೀವಿನಿ ಯೋಜನೆಗೆ ಪೌರಸೇವಾ ನೌಕರರು- ಹೊರಗುತ್ತಿಗೆ ಕಾರ್ಮಿಕರನ್ನು ಒಳಪಡಿಸುವ ವಿಷಯ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಪುರಸಭೆ ಸದಸ್ಯ ಬಿ.ಆರ್.ಮೋಹನ ಕುಮಾರ್ ಮಾತನಾಡಿ, ಯಾರು ಮಾಡದ ಕಾಯಕವನ್ನು ಶ್ರದ್ಧೆಯಿಂದ ಮಾಡುವ ಮೂಲಕ ನಗರದ ಸ್ವಚ್ಛತೆ ಮತ್ತು ಜನರ ಆರೋಗ್ಯ ಕಾಪಾಡಲು ಪೌರಕಾರ್ಮಿಕರು ಕಾರಣರಾಗಿದ್ದಾರೆ. ಜನರ, ಸಮುದಾಯದ ಸ್ವಚ್ಛತೆ ಮತ್ತು ಆರೋಗ್ಯದ ಪ್ರಮುಖ ಕೊಂಡಿ ಪೌರ ಕಾರ್ಮಿಕರು. ಬೀರೂರು ಪುರಸಭೆಯಲ್ಲಿ ಅಗತ್ಯಕ್ಕಿಂತ ಕಡಿಮೆ ನೌಕರರಿದ್ದು, ನೇಮಕಾತಿ ಬಗ್ಗೆ ಶಾಸಕರು ಸರ್ಕಾರದ ಗಮನ ಸೆಳೆಯಬೇಕು ಎಂದು ಕೋರಿದರು. ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಮಾತನಾಡಿ, ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಮತ್ತು ಆರೋಗ್ಯ ವಂತ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಶ್ರಮ ಸ್ಮರಣೀಯ. ತಮ್ಮ ವೈಯುಕ್ತಿಕ ಆರೋಗ್ಯವನ್ನು ಗಮನಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡುವ ಪೌರಕಾರ್ಮಿಕರು ತ್ಯಾಗಜೀವಿಗಳು. ಸರ್ಕಾರ ಪೌರ ಕಾರ್ಮಿಕರ ದಿನಾಚರಣೆಗೆ ಅವಕಾಶ ಕಲ್ಪಿಸಿ ಶ್ರಮಿಕ ವರ್ಗದ ಮನಸ್ಸುಗಳಿಗೆ ಚೈತನ್ಯ ತುಂಬುವಲ್ಲಿ ನೆರವಾಗಿದೆ ಎಂದರು. ಪೌರಸೇವಾ ನೌಕರರ ಸಂಘದ ವೈ.ಎಂ.ಲಕ್ಷ್ಮಣ್ ಮಾತನಾಡಿ, ಪಟ್ಟಣದ ಪೌರಕಾರ್ಮಿಕರಿಗೆ ಇಲಾಖೆಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ನಿಗದಿತ ಸಮಯಕ್ಕೆ ನೀಡಲಾಗುತ್ತಿದೆ. ಆರೋಗ್ಯ ತಪಾಸಣೆ, ರಕ್ಷಣಾ ಪರಿಕರ ವಿತರಣೆ ಹಾಗೂ ಇನ್ನಿತರ ಸೌಲಭ್ಯ ಒದಗಿಸಲಾಗಿದೆ ಎಂದರು. ಸ್ವಚ್ಛತೆ ಕಾಪಾಡುವ ರೂವಾರಿಗಳನ್ನು ನಾವೆಲ್ಲರೂ ಗೌರವಿಸಬೇಕು ಎಂದರು. ಸದಸ್ಯ ಎಸ್.ಎನ್.ರಾಜು ನೌಕರರ ಸಂಕಷ್ಟದ ಬಗ್ಗೆ ಗಮನ ಸೆಳೆದರು. ನೌಕರರ ಪರವಾಗಿ ಕೆ.ಎಸ್. ಸೋಮಶೇಖರ್ ಮಾತನಾಡಿದರು. ಪಿಎಸ್‌ಐ ಸಚಿತ್ ಕುಮಾರ್, ಆಯುಷ್ ವೈದ್ಯ ಗವಿರಂಗಪ್ಪ, ಪುರಸಭೆ ಸದಸ್ಯರಾದ ಮೀನಾಕ್ಷಮ್ಮ, ಲೋಕೇಶಪ್ಪ, ಶಶಿಧರ್, ವನಿತಾ ಮಧು, ಲಕ್ಷ್ಮಣ್, ಮಾನಿಕ್ ಬಾಷಾ, ಶಾರದಾ ರುದ್ರಪ್ಪ, ಸುಮಿತ್ರಾ, ಸಹನಾ, ಪುರಸಭೆಯ ವ್ಯವಸ್ಥಾಪಕ ಪ್ರಕಾಶ್, ನೂರುದ್ದೀನ್, ದೀಪಕ್, ಕರಿಯಪ್ಪ, ಗಿರಿರಾಜ್ ಮಧುಬಾವಿಮನೆ ಸೇರಿದಂತೆ ಇತರರು ಇದ್ದರು. ೧೧ ಬೀರೂರು ೧ ಬೀರೂರಿನಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್. ಆನಂದ್‌ ಉದ್ಘಾಟಿಸಿದರು. ಮುಖ್ಯಾಧಿಕಾರಿ ಶಾಂತಲಾ, ಸದಸ್ಯರಾದ ಮೀನಾಕ್ಷಮ್ಮ, ಶಶಿಧರ್, ಲೋಕೇಶಪ್ಪ, ಮೋಹನ್ ಕುಮಾರ್, ಪಿಎಸ್‌ಐ ಸಚಿತ್ ಕುಮಾರ್ ಇದ್ದರು.

Share this article