ಬದುಕು ಋಣಗಳ ಗಣಿ: ಶಿಕ್ಷಣ ತಜ್ಞ ಮಾಗಳದ

KannadaprabhaNewsNetwork |  
Published : May 30, 2025, 12:43 AM ISTUpdated : May 30, 2025, 12:44 AM IST
ಪೋಟೊ:ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆಯಲ್ಲಿ ಗುರುವಂದನಾ ಸಮಾರಂಭ ಜರುಗಿತು. | Kannada Prabha

ಸಾರಾಂಶ

ಬದುಕನ್ನು ಗೌರವಿಸುವುದು ಎಂದರೆ ಅದನ್ನು ಸಾಧನೆಗಳಿಂದ ಸಾರ್ಥಕಗೊಳಿಸುವುದು. ನಮ್ಮ ವೃತ್ತಿ ಕೇವಲ ನಮ್ಮ ಜೀವನೋಪಾಯಕ್ಕಾಗಿ ಅಲ್ಲ, ಅದು ನಮ್ಮ ಜೀವನ ವಿಕಾಸಕ್ಕಾಗಿ ಮಾಧ್ಯಮವಾಗಿದೆ.

ಕೊಪ್ಪಳ:

ಬದುಕು ಋಣಗಳ ಗಣಿಯಾಗಿದ್ದು ಬದುಕಿಗಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಬದುಕಿಗೆ ಮರು ಅವಕಾಶವಿಲ್ಲ. ಆದ್ದರಿಂದ ಶೂನ್ಯತೆಯಲ್ಲಿ ಮಾನ್ಯತ್ವ ಕಾಣಬೇಕು ಎಂದು ಶಿಕ್ಷಣ ತಜ್ಞ ಟಿ.ವಿ. ಮಾಗಳದ ಹೇಳಿದರು.

ನಗರದ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ 1984-85ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬದುಕನ್ನು ಗೌರವಿಸುವುದು ಎಂದರೆ ಅದನ್ನು ಸಾಧನೆಗಳಿಂದ ಸಾರ್ಥಕಗೊಳಿಸುವುದು. ನಮ್ಮ ವೃತ್ತಿ ಕೇವಲ ನಮ್ಮ ಜೀವನೋಪಾಯಕ್ಕಾಗಿ ಅಲ್ಲ, ಅದು ನಮ್ಮ ಜೀವನ ವಿಕಾಸಕ್ಕಾಗಿ ಮಾಧ್ಯಮವಾಗಿದೆ ಎಂದರು.

ಮಾಡುವ ವೃತ್ತಿಗಿಂತ ಮಿಗಿಲಾದ ಪ್ರಾರ್ಥನೆ ಬೇರೊಂದಿಲ್ಲ. ಸ್ನೇಹ ಬದುಕಿನ ಬಹು ದೊಡ್ಡ ಸಂಪತ್ತು. ಸಹೋದರರು ಇಲ್ಲದೆ ಬದುಕಬಹುದು. ಆದರೆ, ಸ್ನೇಹಿತರಿಲ್ಲದೇ ಬದುಕಲು ಸಾಧ್ಯವಾಗದು ಎಂದ ಅವರು, ಗವಿಮಠದ ಗುರು-ಶಿಷ್ಯರ ಪರಂಪರೆ ಜಗತ್ತಿಗೆ ಮಾದರಿಯಾದುದು. ಇಂಥ ದಿವ್ಯ ತಪೋಬಲದ ಪವಿತ್ರ ಶಿಕ್ಷಣ ಸಂಸ್ಥೆ 75 ವರ್ಷಗಳಿಂದ ಜ್ಞಾನದಾಸೋಹ ಗೈಯುತ್ತ ಬಂದಿದೆ. ಈ ಭಾಗದ ಅಸಂಖ್ಯಾತ ಅಭಾಗ್ಯ ಮಕ್ಕಳ ಭಾಗ್ಯದ ಬಾಗಿಲು ತರೆದಿದೆ. ಇಂಥ ಮಾತೃ ಸಂಸ್ಥೆಯಲ್ಲಿ 40 ವರ್ಷಗಳ ನಂತರ ಶಿಷ್ಯಂದಿರು ಸಮಾವೇಶಗೊಂಡಿದ್ದು ಅಪರೂಪದ ಕ್ಷಣವಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ವೀರೇಶ ದೇವರು ಮಾತನಾಡಿ, ಗುರುಗಳಿಗೆ ವಂದನೆ ಸಲ್ಲಿಸುತ್ತಿದ್ದರೆ ನಿಂದನೆಗಳು ನಿಲ್ಲುತ್ತವೆ. ಅನ್ನ, ಆಶ್ರಯ ಬದುಕನ್ನೇ ಕಟ್ಟಿಕೊಡಲು ಶ್ರಮಿಸಿದ ಗುರುಗಳಿಗೆ ಎಷ್ಟು ವಂದಿಸಿದರು ಸಾಲದು ಎಂದರು.

ಗುರುಗಳಿಂದ ಕಲಿತ ಕಲೆಯೇ ನಿಜವಾದ ಸಂಪತ್ತು. ಆ ಕಲೆಯೇ ಬದುಕಿನ ಭವಿಷ್ಯ, ಆ ಕಲೆಯನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ಪಾವಿತ್ರ್ಯತೆಯಿಂದ ಬದುಕಬೇಕಾದರೆ ನಮ್ಮ ಹೃದಯದ ಪಾತ್ರೆ ಪವಿತ್ರವಾಗಿರಬೇಕು. ಆಪತ್ತು ಬರಲಾರದ್ದೇ ನಿಜವಾದ ಸಂಪತ್ತು ಎಂದು ಅಭಿಪ್ರಾಯಪಟ್ಟರು.

ಮುಖ್ಯೋಪಾಧ್ಯಾಯ ಅಮರೇಶ ಕರಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿ.ಕೆ. ಜಾಗಟಗೇರಿ, ಬಿ.ವಿ. ರಾಮರೆಡ್ಡಿ, ಮಹೇಶ, ಗವಿಸಿದ್ಧಪ್ಪ ಚಲವಾದಿ, ಎಸ್‌.ಸಿ. ಹಿರೇಮಠ, ಎಸ್.ಎಂ. ಕಂಬಾಳಿಮಠ ಅವರನ್ನು ಸನ್ಮಾನಿಸಲಾಯಿತು. ದಿನೇಶಕುಮಾರ ಜೈನ್ ಪ್ರಾಸ್ತಾವಿಕ ಮಾತನಾಡಿದರು. ಗವಿಶ ಹೊಸಮನಿ ಸ್ವಾಗತಿಸಿದರು.

ಈ ವೇಳೆ ವಿಶೇಷ ಸಾಧಕರಾದ ವೀರೇಶ ಸಾಲಿಮಠ, ದಾನಪ್ಪ ಕವಲೂರು, ಮಹೇಂದ್ರ ಕೆ.ಕೆ., ಪ್ರಭು ತಂಬ್ರಳ್ಳಿ, ಸತೀಶ ಕೊತಬಾಳ, ಪಂಡಿತ ಹಡಗಲಿ ಅವರನ್ನು ಸನ್ಮಾನಿಸಲಾಯಿತು. ಮನೋಜ್ ವಸ್ತ್ರದ ಗೆಳೆಯರೊಂದಿಗೆ ಪ್ರಾರ್ಥಿಸಿದರು. ಸಂಗಮೇಶ್ವರ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಪಂಪಾಪತಿ ದಿನ್ನಿ ವಂದಿಸಿದರು.

PREV

Recommended Stories

ದರ್ಶನ್‌ ಅಶ್ಲೀಲ ಫ್ಯಾನ್ಸ್‌ ವಿರುದ್ಧ ರಮ್ಯ ಸಮರ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ನಾಲ್ವರು ಐಪಿಎಸ್‌ ಸಸ್ಪೆಂಡ್‌ ವಾಪಸ್‌