ತಂದೆ-ತಾಯಿ ಜೋಪಾನ ಮಾಡದಿದ್ದರೆ ಜೀವನ ವ್ಯರ್ಥ: ಶಂಕರಣ್ಣ ಮುನವಳ್ಳಿ

KannadaprabhaNewsNetwork |  
Published : Jul 22, 2025, 12:15 AM IST
21ಉಳಉ1,2 | Kannada Prabha

ಸಾರಾಂಶ

ಗಂಗಾವತಿ ನಗರದ ಶ್ರೀ ಚೆನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದಿಂದ ಸೋಮವಾರ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ನಡೆಯಿತು.

ಗಂಗಾವತಿ: ಜನ್ಮ ನೀಡಿದ ತಂದೆ, ತಾಯಿ ಮತ್ತು ಸಮಾಜ ನೋಡದಿದ್ದರೆ ಜೀವನ ವ್ಯರ್ಥ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಹಾಗೂ ಬಣಜಿಗ ಸಮಾಜದ ಮುಖಂಡ ಶಂಕರಣ್ಣ ಮುನವಳ್ಳಿ ಹೇಳಿದರು.

ನಗರದ ಶ್ರೀ ಚೆನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕ ಸೋಮವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಣಜಿಗ ಸಮಾಜ ರಾಜಕೀಯವಾಗಿ ಪ್ರಗತಿ ಸಾಧಿಸಿದೆ. ಇಲ್ಲಿಯ ವರೆಗೆ 7 ಮುಖ್ಯಮಂತ್ರಿಗಳು ಸಮಾಜದಿಂದ ಆಯ್ಕೆಯಾಗಿದ್ದಾರೆ. ಸಾಹಿತಿಗಳು, ವೈದ್ಯರು, ಶಿಕ್ಷಕರು ಸೇರಿದಂತೆ ಎಲ್ಲ ರಂಗಗಳಲ್ಲಿ ಸಮಾಜದವರು ಗುರುತಿಸಿಕೊಂಡಿದ್ದಾರೆ. ಬಣಜಿಗ ಸಮಾಜ ಆರ್ಥಿಕವಾಗಿ ಮುಂದುವರಿದಿದೆ. ಎಲ್ಲ ರಂಗಗಳಲ್ಲಿ ಪ್ರಾಧಾನ್ಯ ಸಿಗಬೇಕಾದರೆ ಸಮಾಜದಲ್ಲಿ ಒಗ್ಗಟ್ಟು ಅವಶ್ಯವಾಗಿದೆ ಎಂದರು.

ತಂದೆ, ತಾಯಿ ಜೋಪಾನ ಮಾಡಿ ಎಂದು ಕರೆ ನೀಡಿದ ಅವರು, ವೃದ್ಧಾಪ್ಯ ಸಮಯದಲ್ಲಿ ಅವರನ್ನು ವೃದ್ಧಾಶ್ರಮಕ್ಕೆ ತಳ್ಳುವುದು ಸರಿಯಲ್ಲ ಎಂದರು.

ಹುಬ್ಬಳ್ಳಿಯಲ್ಲಿ ಕೆಎಲ್‌ಇ ಸಂಸ್ಥೆಯಿಂದ ವೈದ್ಯಕೀಯ ಶಿಕ್ಷಣ ಪ್ರಾರಂಭಿಸಲಾಗಿದೆ. 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಮಾತನಾಡಿ, ಸಮಾಜದ ಯಾವುದೇ ಕಾರ್ಯಕ್ರಮ ನಡೆಯಬೇಕಾದರೆ ಸ್ವಂತ ಕಟ್ಟಡ ಅವಶ್ಯಕತೆ ಇದ್ದು, ಮಾಜಿ ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ಸಮಾಜಕ್ಕೆ ನೀಡಿದ ಸಿಎ ಸೈಟ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ₹1 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಬಣಜಿಗ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿದೆ ಎಂದರು. ಬಣಜಿಗ ಸಮಾಜ ಕಾಯಕವೇ ಕೈಲಾಸ ಎಂದು ಕೆಲಸದಲ್ಲಿ ಸೇವೆ ಮಾಡುವುದರಲ್ಲಿ ಮುಂದಿದೆ. ಎಲ್ಲರೂ ಬಸವಣ್ಣನ ತತ್ವಗಳನ್ನು ಪಾಲಿಸಬೇಕು ಎಂದು ಹೇಳಿದರು.

ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಸೋಮನಾಥ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸವನ ಬಾಗೇವಾಡಿಯ ಉಪನ್ಯಾಸಕ ಅಶೋಕ ಹಂಚಲಿ, ಬೈಲಹೊಂಗಲದ ಪ್ರೇಮಕ್ಕ ಅಂಗಡಿ ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಬಣಜಿಗ ಸಮಾಜದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ, ಶಿವಾನಂದ ಬಿದರಿ, ವಿಶ್ವನಾಥ ಬಳ್ಳೊಳ್ಳಿ, ಗಾಳಿ ರುದ್ರಪ್ಪ, ಗಾಳಿ ರುದ್ರಪ್ಪ, ಅಕ್ಕಿ ಕೊಟ್ರಪ್ಪ, ಅರ್ಲೂರು ಶಿವಕುಮಾರ, ಸಂಗಮೇಶ ಕೋಟಿ, ಬಸವರಾಜ ಕಡ್ಲಿ ಯಲಬುರ್ಗಾ, ಶಾಂತಪ್ಪ, ರೇಖಾ ಅಂಗಡಿ, ಮಂಜುನಾಥ ಸೋಮನಾಳ, ಹರ್ಷಿತಾ ಪಟ್ಟಣಶೆಟ್ಟಿ, ಸುಮಾ ಮಸ್ಕಿ, ಗಾಳಿ ಶಿವಪ್ಪ, ಸತೀಶ ಅಂಗಡಿ, ಶರಣಪ್ಪ ಭತ್ತದ ಭಾಗವಹಿಸಿದ್ದರು.

PREV

Latest Stories

ಜಾಗತಿಕ ತಂತ್ರಜ್ಞಾನ ಶ್ರೇಷ್ಠತೆಗೆ ನೋವಿಗೋ ಸೊಲ್ಯೂಷನ್ಸ್
ಡಿಸಿ ಖಾತೆಯಲ್ಲಿ ಬಳಕೆಯಾಗದ ಮೊತ್ತ ವಾಪಸಿಗೆ ಗಡಿ ಪ್ರಾಧಿಕಾರ ಸಿಎಸ್‌ಗೆ ದೂರು
ಜಲ ಜೀವನ್ ಮಿಷನ್, ನರೇಗಾ ಕಾಮಗಾರಿ ಪರಿಶೀಲನೆ