ಕನ್ನಡಪ್ರಭ ವಾರ್ತೆ ಐಗಳಿ
ಸೈನಿಕ, ಶಿಕ್ಷಕ, ರೈತರ ಪಾತ್ರ ದೊಡ್ಡದು. ಇದರಲ್ಲಿ ಒಬ್ಬರು ಇಲ್ಲದಿದ್ರೂ ನಮ್ಮ ಬದುಕು ಶೂನ್ಯವಾಗಲಿದೆ ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು.ಗ್ರಾಮ ಹೆಮ್ಮೆಯ ಪುತ್ರ ಗುರಪ್ಪ ಬಾಗಲಕೋಟ ಸೇನೆಯಲ್ಲಿ ಹಾನರರಿ ಲೆಪ್ಟಿನೆಂಟ್ ಅಧಿಕಾರಿಯಾಗಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಜನಸಂಖ್ಯೆ 141 ಕೋಟಿಯಾಗಿದ್ದು, ಮೂರು ಸೇನೆಗಳಲ್ಲಿ ಲಕ್ಷ್ಯಾಂತರ ಜನ ಸೇವೆ ಮಾಡುತ್ತಿದ್ದಾರೆ. ದೇಶದ ಗಡಿ ಕಾಯುವ ಕೆಲಸ ಸೈನಿಕರದ್ದು. ಅವರಿಂದ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಅದರಂತೆ ಅನ್ನ ನೀಡುವ ರೈತನು ದೊಡ್ಡವನು. ಹಸಿದವರಿಗೆ ಮಾತ್ರ ಅನ್ನದ ಬೆಲೆ ಗೊತ್ತು ಮತ್ತು ಅಕ್ಷರ ಕಲಿಸಿದ ಗುರು ನಮಗೆಲ್ಲ ಸನ್ಮಾರ್ಗ ತೋರಿಸಿದ್ದಾರೆ. ಈ ಮೂವರನ್ನು ನಾವು ಗೌರವಿಸಬೇಕು ಎಂದು ಹೇಳಿದರು.
ತೆಲಸಂಗದ ಹಿರೇಮಠದ ವಿರೇಶ ದೇವರು ಮಾತನಾಡಿ, ಸೈನಿಕರಲ್ಲಿ ಚೈತನ್ಯ, ದೇಶಪ್ರೇಮ ಮತ್ತು ರಕ್ಷಣೆ ಜೊತೆಗೆ ಉತ್ಸಾಹ ಇಟ್ಟುಕೊಂಡು ಸೇವೆ ಮಾಡುತ್ತಿದ್ದಾರೆ. ಅವರಿಗೊಂದು ಸಲಾಂ. ಪ್ರತಿ ಮನೆಗೊಬ್ಬ ಸೈನಿಕ ಆಗಲಿ. ದೇಶದಲ್ಲಿ ಶರಣರು ಸಂತರು ಶಿವಯೋಗಿಗಳು ಇರುವುದರಿಂದ ಒಳ್ಳೆಯ ಭಾರತ ದೇಶ ಎನಿಸಿಕೊಂಡಿದೆ. ವಿಶ್ವ ಗುರು ಬಸವಣ್ಣನವರು ಹೇಳಿದಂತೆ ನಾವೆಲ್ಲರೂ ಸಮಾನರು ಎಂದರು.ಸತ್ಕಾರ ಸ್ವೀಕರಿಸಿ ಗುರಪ್ಪ ಬಾಗಲಕೋಟ ಮಾತನಾಡಿ, ಬಡತನದಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿ ಐಗಳಿಯಿಂದ 6 ಜನ ಗೆಳೆಯರ ಜೊತೆಗೆ ಬೆಳಗಾವಿಗೆ ಸೈನ್ಯ ಭರ್ತಿಗೆ ಹೋಗಿದ್ದೇವು. ಅಪ್ಪಯ್ಯ ಸ್ವಾಮಿಗಳ ಆಶೀರ್ವಾದದಿಂದ ನಾನೊಬ್ಬನೇ ಸೇವೆಗೆ ಭರ್ತಿಯಾದೆ. ಅಂದಿನಿಂದ ನನ್ನ ಹೊಸ ಅಧ್ಯಯನ ಪ್ರಾರಂಭವಾಯಿತು. ಸೇನೆಯಲ್ಲಿ ನನಗೆ ತಕ್ಕಂತೆ ಒಳ್ಳೆಯ ಅಧಿಕಾರಿ ದೊರಕಿದ್ದರು. ನಾನು ಶಿಸ್ತಿನ ಸಿಪಾಯಿಯಾಗಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದು ಅನೇಕ ಪದಕಗಳನ್ನು ಗಳಿಸಿದ್ದೇನೆ. ದೇಶ ಸೇವೆ ಮಾಡಿದ್ದು ನನಗೆ ತೃಪ್ತಿ ಸಿಕ್ಕಿದೆ. ಗ್ರಾಮಸ್ಥರು ಹಾಗೂ ಮಾಜಿ ಸೈನಿಕರ ಸಂಘದಿಂದ ಸತ್ಕರಿಸಿದ್ದು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕಲ್ಮೇಶ ಆಸಂಗಿ, ಸಿ.ಎಸ್.ನೇಮಗೌಡ, ಅಥಣಿ ಸಂಘದ ಅಧ್ಯಕ್ಷ ಮಗದುಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ಭಾರತ ಬ್ಯಾಂಕ್‌ನ ಅಧ್ಯಕ್ಷ ನೂರಅಹ್ಮದ ಡೊಂಗರಗಾಂವ, ಸಕ್ಕರೆ ಕಾರ್ಖಾನೆಯ ನಿರ್ದೇಶಕ ಪ್ರಲ್ಹಾದ ಪಾಟೀಲ, ಅಮಗೌಡ ಪಾಟೀಲ, ಬಿ.ಎಸ್.ಬಿರಾದಾರ, ಶಿವಾನಂದ ಸಿಂಧೂರ, ರಾಮಗೊಂಡ ಬಿರಾದಾರ, ಬಸನಿಂಗಪ್ಪ ಗಂಗಾಧರ, ಶಿಕ್ಷಕ ಎ.ಎಸ್.ತೆಲಸಂಗ, ಅಲ್ಲದೆ ಅಥಣಿ, ಯಲಿಹಡಲಗಿ, ಕೋಹಳ್ಳಿ, ಫಡತರವಾಡಿ, ತೆಲಸಂಗ, ಬಿಳ್ಳೂರ, ಕಕಮರಿ, ಕೊಟ್ಟಲಗಿ, ಅರಟಾಳ, ಬಾಡಗಿ, ಹಾಲಳ್ಳಿ, ಕೊಕಟನೂರ ಸೇರಿದಂತೆ ಎಲ್ಲ ಗ್ರಾಮಗಳ ಮಾಜಿ ಸೈನಿಕರು ಉಪಸ್ಥಿತರಿದ್ದರು. ಶಿವಾನಂದ ಸಿಂಧೂರ ಸ್ವಾಗತಿಸಿದರು, ಶಿಕ್ಷಕ ಸದಾಶಿವ ಮಾಡಿಗ್ಯಾಳ ನಿರೂಪಿಸಿದರು, ಪತ್ರಕರ್ತ ಅಣ್ಣಾಸಾಬ ತೆಲಸಂಗ ವಂದಿಸಿದರು.