ಭಟ್ಕಳದ ವಡೇರ ಮಠದಲ್ಲಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನಕನ್ನಡಪ್ರಭ ವಾರ್ತೆ ಭಟ್ಕಳ
ಪಟ್ಟಣದ ವಡೇರ ಮಠದಲ್ಲಿ ಅಧಿಕ ಜ್ಯೇಷ್ಠ ಮಾಸ ಮತ್ತು ಮಠದ ೫೫೦ನೇ ವರ್ಷದ ಸ್ಮರಣಾರ್ಥ ನಡೆಯುತ್ತಿರುವ ಶ್ರೀಗಳ ವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಮನುಷ್ಯ ಜನ್ಮದ ಮುಖ್ಯ ಉದ್ದೇಶ ಭಕ್ತಿ, ಧ್ಯಾನ ಹಾಗೂ ವೈರಾಗ್ಯ ಸಾಧನೆಯಾಗಿದ್ದು, ದೇವರ ಸೇವೆಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡಬೇಕು. ಸುಖ, ಸಂತೋಷ ಮತ್ತು ನೆಮ್ಮದಿಗಾಗಿ ಪ್ರತಿಯೊಬ್ಬರೂ ದೇವರ ಸಾನ್ನಿಧ್ಯವನ್ನು ಅರಸುತ್ತಾರೆ. ದೇವರ ಬಳಿ ಪ್ರೀತಿ ಮತ್ತು ಅನುಗ್ರಹವನ್ನು ಬೇಡಿಕೊಂಡರೆ ಜೀವನದ ಎಲ್ಲಾ ಅಗತ್ಯತೆಗಳು ಪೂರ್ಣಗೊಳ್ಳುತ್ತವೆ ಎಂದ ಅವರು, ಅತಿ ಸುಖ, ಸಂಪತ್ತು ದೊರೆತಾಗ ಮನುಷ್ಯ ದೇವರನ್ನು ಮರೆಯುವ ಸಾಧ್ಯತೆ ಇರುತ್ತದೆ. ಕುರುಡನಿಗೆ ಕಣ್ಣು ಬಂದ ಬಳಿಕ ಕೈಯಲ್ಲಿದ್ದ ಕೋಲನ್ನು ಎಸೆದಂತೆ ನಾವು ದೇವರ ಅನುಗ್ರಹವನ್ನು ಮರೆಯಬಾರದು. ಅದಕ್ಕಾಗಿಯೇ ಈ ಹಿಂದೆ ಹಿರಿಯರು ನಿರಂತರ ಕುಲದೇವರ ಪೂಜೆ ಹಾಗೂ ಸ್ವಾಮೀಜಿಗಳ ಮೊಕ್ಕಾಂಗಳು ನಡೆಯುತ್ತಿರಬೇಕು ಎಂದು ಬಯಸುತ್ತಿದ್ದರು ಎಂದರು.
ಮಹಾಭಾರತದ ಕುಂತಿದೇವಿಯ ಉದಾಹರಣೆ ನೀಡಿದ ಶ್ರೀಗಳು, ಕುಂತಿದೇವಿ ಶ್ರೀಕೃಷ್ಣನಲ್ಲಿ ಕಷ್ಟಗಳನ್ನು ಬೇಡಿಕೊಂಡಿದ್ದು ಸಂಕಷ್ಟದ ಸಮಯದಲ್ಲಿ ದೇವರ ಸ್ಮರಣೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕಾಗಿ. ಗೋಪಿಕೆಯರು ಕೃಷ್ಣನ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಂತೆ ನಾವೂ ದೇವರ ಸೇವೆಯನ್ನು ನಿಸ್ವಾರ್ಥ ಭಾವದಿಂದ ಮಾಡಬೇಕು. ನಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗಲೂ ಕೃಷ್ಣನ ನಾಮಸ್ಮರಣೆ ಇರಬೇಕು ಎಂದು ತಿಳಿಸಿದರು. ಸಭೆಯಲ್ಲಿ ಮಾತನಾಡಿದ ಉದ್ಯಮಿ ಪ್ರದೀಪ ಪೈ, ಸೆಂಟ್ರಲ್ ಕಮಿಟಿಯ ಜೀವೋತ್ತಮ ಪ್ರಶಸ್ತಿ ಪುರಸ್ಕೃತ ಅನೀಲ ಬಾಬ ಪೈ ಮಾತನಾಡಿದರು.ವೇದಮೂರ್ತಿ ಕಿಶೋರ ಭಟ್ ಹಾಗೂ ಸಂಗಡಿಗರು ವೇದಘೋಷ ನಡೆಸಿದರು. ಹತ್ತು ಸಮಸ್ತರ ಉಪಾಧ್ಯಕ್ಷ ನರೇಂದ್ರ ನಾಯಕ ಸ್ವಾಗತಿಸಿದರು. ಪ್ರಸನ್ನ ಪ್ರಭು ನಿರೂಪಿಸಿದರು. ಈ ಸಂದರ್ಭ ಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ ದಂಪತಿ, ರಾಜೇಶ್ ಕಾಮತ ದಂಪತಿ, ವೇದಮೂರ್ತಿ ಕಿಶೋರ ಭಟ್ ದಂಪತಿ ಹಾಗೂ ವಿದ್ವಾನ್ ರಾಮಕೃಷ್ಣ ಭಟ್ ಅವರನ್ನು ಶ್ರೀಗಳು ಮಂತ್ರಾಕ್ಷತೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಅನೀಲ ಬಾಬ ಪೈ, ನಾಗೇಶ ಕಾಮತ, ನರೇಂದ್ರ ನಾಯಕ ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.