ರೋಣ: ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವದು, ಸದಾ ಸಮಾಜದ ಏಳ್ಗೆಗೆ ಶ್ರಮಿಸಿದಲ್ಲಿ ಬದುಕು ಸಾರ್ಥಕವಾಗುವುದು. ಈ ದಿಶೆಯಲ್ಲಿ ಪ್ರತಿಯೊಬ್ಬರೂ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ನಾವು ಮಾಡುವ ಸಮಾಜಮುಖಿ ಉತ್ತಮ ಕಾರ್ಯಗಳು, ನಿಸ್ವಾರ್ಥ ಸೇವೆಗಳು ನಮಗೆ ಶಾಂತಿ, ನೆಮ್ಮದಿಯನ್ನು ತಂದು ಕೊಡುವುದರ ಜತೆಗೆ ವ್ಯಕ್ತಿತ್ವವನ್ನು ದ್ವಿಮುಖಗೊಳಿಸಿ, ಇತರರಿಗ ಮಾದರಿಯಾಗುವಂತೆ ಮಾಡುತ್ತವೆ. ಸದಾ ಜನಸಾಮಾನ್ಯರ ಶ್ರೇಯೋಭಿವೃದ್ದಿಗೆ, ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಯಾವ ವ್ಯಕ್ತಿ ತೊಡಗಿಕೊಳ್ಳುತ್ತಾನೋ ಅಂತವರನ್ನು ಸಮಾಜ ಒಪ್ಪಿಕೊಳ್ಳುತ್ತದೆ. ಈ ದಿಶೆಯಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಬಾವಾಸಾಬ ಆರ್. ಬೆಟಗೇರಿ ಅಭಿಮಾನಿಗಳ ಬಳಗದವರು, ಬಾವಾಸಾಬ ಬೆಟಗೇರಿ ಅವರ ಜನ್ಮದಿನ ನೆಪವಾಗಿಸಿಕೊಂಡು ಜನಸಾಮಾನ್ಯರಿಗೆ ಉಚಿತವಾಗಿ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ, ಶಾಲಾ ಮಕ್ಕಳಿಗೆ ಮಳೆಗಾಲದಲ್ಲಿ ಅನುಕೂಲವಾಗಲು ಛತ್ರಿ, ಬೀದಿ ಬದಿ ವ್ಯಾಪಾರಸ್ಥರಿಗೆ ಬಿಸಿಲಿನಿಂದ ಅನುಕೂಲವಾಗಲು ದೊಡ್ಡ ಛತ್ರಿ ವಿತರಿಸಿದ್ದಾರೆ. ಅಲ್ಲದೇ ತುರ್ತು ಸಂದರ್ಭದಲ್ಲಿ ಮತ್ತೊಬ್ಬರ ಜೀವ ಕಾಪಾಡಲು ನೆರವಾಗಲು ರಕ್ತದಾನ ಶಿಬಿರ ಏರ್ಪಡಿಸಿದ್ದು ಅತ್ಯಂತ ಔಚಿತ್ಯಪೂರ್ಣ ಕಾರ್ಯವಾಗಿದೆ ಎಂದರು.
42 ದಾನಿಗಳಿಂದ ರಕ್ತದಾನ: ಶಿಬಿರದ ಮೂಲಕ 42 ದಾನಿಗಳು ತಲಾ 350 ಎಂ.ಎಲ್. ರಕ್ತದಾನ ಮಾಡಿದರು. 18 ಜನರ ಎಲಬು, ಕೀಲು ತಪಾಸಣೆ, 99 ಜನರ ಕಣ್ಣಿನ ತಪಾಸಣೆ, 46 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ, 28 ಗರ್ಭಿಣಿಯರ ಆರೋಗ್ಯ ತಪಾಸಣೆ, 43 ಜನರ ಕಿವಿ, ಗಂಟಲು ತಪಾಸಣೆ, 29 ಚಿಕ್ಕಮಕ್ಕಳ ಆರೋಗ್ಯ ತಪಸಣೆ ಹಾಗೂ ಬಿ.ಪಿ., ಶುಗರ್ ಕಾಯಿಲೆ ತಪಾಸಣೆ ನುರಿತ ತಜ್ಞ ವೈದ್ಯರಿಂದ ಜರುಗಿತು.ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಹಜರತ್ ಸೈಯದ್ ಶಾವಲಿ ಸುಲೇಮಾನ ದರಗಾದ ಅಜ್ಜನವರು ವಹಿಸಿದ್ದರು. ಮಹಮ್ಮದಪಾರು ಖತೀಬ ಪ್ರಾಸ್ತಾವಿಕವಾಗಿ ಮಾತನಾಡಿದರು.