ಡಂಬಳ: ಹೋಬಳಿಯ ಭಾಗದಲ್ಲಿ ಕೃಷಿಗೆ ಅಗತ್ಯವಾದ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದ್ದು, ರೈತರು ಪರದಾಡುವಂತಾಗಿದೆ.
ಈ ಭಾಗದಲ್ಲಿ 2025-26ನೇ ಸಾಲಿನಲ್ಲಿ ಕಬ್ಬು 600 ಹೆಕ್ಟೇರ್, ಗೋವಿನ ಜೋಳ 27 ಸಾವಿರ ಹೆಕ್ಟೇರ್, ಈರುಳ್ಳಿ 2800 ಹೆಕ್ಟೇರ್, ಮೆಣಸಿನಕಾಯಿ 1 ಸಾವಿರ ಹೆಕ್ಟೇರ್ ಬೆಳೆಯಲಾಗಿದೆ ಎಂದು ಕೃಷಿ ಮತ್ತು ತೋಟಗಾರಿಕಾ ಕೇಂದ್ರದ ಅಧಿಕಾರಿ ತಿಳಿಸಿದರು.
ಡಿಎಪಿಗೆ ಬೇಡಿಕೆ: ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಆಗದೇ ಇರುವುದರಿಂದ ಪರ್ಯಾಯವಾಗಿ ಕಾಂಪ್ಲೆಕ್ಸ್ ಗೊಬ್ಬರಕ್ಕೆ ರೈತರು ಮೊರೆ ಹೋಗಿದ್ದಾರೆ. ಬೆಳೆಗಳಿಗೆ ಕಾಂಪ್ಲೆಕ್ಸ್ ಹಾಕಿದ ನಂತರ ಯೂರಿಯಾ ಹಾಕಬೇಕಿದ್ದು, ಇದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.ಯೂರಿಯಾ ಗೊಬ್ಬರಕ್ಕೆ ಸರ್ಕಾರದ ಸಬ್ಸಿಡಿ ಹೆಚ್ಚಿದ್ದು 45 ಕಿಲೋ ಯೂರಿಯಾ ಗೊಬ್ಬರದ ಒಂದು ಚೀಲಕ್ಕೆ ₹ 266 ಇದ್ದು ಸಾಗಾಟದ ಖರ್ಚು ಸೇರಿ ₹ 300ವರೆಗೆ ದರ ಇದೆ. ಆದರೆ ಕೆಲ ಅಂಗಡಿಗಳಲ್ಲಿ ₹ 400 ಮಾರಾಟ ಮಾಡಿದರೆ, ಕೆಲ ಅಂಗಡಿಗಳಲ್ಲಿ ₹ 300 ಮಾರಾಟ ಮಾಡುವುದಲ್ಲದೆ ಯೂರಿಯಾ ಗೊಬ್ಬರದ ಜೊತೆ ಲಿಂಕ್ ಆಧಾರಿತವಾಗಿ ₹ 750 ಗೊಬ್ಬರವನ್ನು ತೆಗೆದುಕೊಳ್ಳಬೇಕು. ತಮ್ಮ ಅಂಗಡಿಗಳ ಮುಂದೆ ಸ್ಟಾಕ್, ಸೇಲ್, ದರ, ದಾಸ್ತಾನು ಪಟ್ಟಿಯ ಫಲಕ ಹಾಕಬೇಕು. ಆದರೆ ಇವು ಯಾವುದನ್ನು ಅಳವಡಿಸದೆ ಇರುವುದಕ್ಕೆ ಅಗ್ರೋ ಮಾಲೀಕರ ಮಧ್ಯ ಮತ್ತು ಕೃಷಿ ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದು, ರೈತರಿಗೆ ಅಕ್ಷರಶಃ ನುಂಗಲಾರದ ತುತ್ತಾಗಿದೆ. ಅದಲ್ಲದೆ ಮಧ್ಯವರ್ತಿ ಮಾರಾಟಗಾರರಿಗೆ ಯಾವುದೇ ಲಿಂಕ್ ಇಲ್ಲದೆ 30ರಿಂದ 40 ಚೀಲದವರೆಗೆ ಯೂರಿಯಾ ಗೊಬ್ಬರ ಕೊಡುತ್ತಾರೆ. ಅವರು ಮತ್ತಷ್ಟು ಹೆಚ್ಚಿನ ದರಕ್ಕೆ ಮಾರಾಟಕ್ಕೆ ಮುಂದಾಗುತ್ತಿರುವ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾರೆ ರೈತರು. ಇದರ ಕುರಿತು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಕೃಷಿ ಹಿರಿಯ ಅಧಿಕಾರಿಗಳು ಮುಂದಾಗಬೇಕು ಎನ್ನುತ್ತಾರೆ ರೈತರು.
ಮುಂಡರಗಿ ಮತ್ತು ಡಂಬಳ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮತ್ತು ಹೆಚ್ಚು ರಸಗೊಬ್ಬರ ಅಂಗಡಿಗಳಿದ್ದು, ಕೆಲವು ಅಂಗಡಿಗಳಲ್ಲಿ ಮಾತ್ರ ಯೂರಿಯಾ ಗೊಬ್ಬರ ಸಿಗುತ್ತಿದೆ.ಅಪಾಯಕಾರಿ ರಾಸಾಯನಿಕ ಗೊಬ್ಬರಗಳಾದ ಯೂರಿಯಾ ಮತ್ತು ಫಾಸ್ಪೇಟ್ ಬೇಸಾಯ ಭೂಮಿಗಳಷ್ಟೆ ಅಲ್ಲದೆ, ಅನೇಕ ಜೀವರಾಶಿಗಳಿಗೆ ಹಾನಿಯುಂಟು ಮಾಡುತ್ತವೆ. ಬೆಳೆಯುವ ಹಾಗೂ ನಾಟಿಯಾಗುವ ಹಂತದಲ್ಲಿ ಮಾತ್ರ ಯೂರಿಯಾ ಅಗತ್ಯವಿದೆ. ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವ ಅಪಾಯ ಇದೆ ಎನ್ನುತ್ತಾರೆ ಕೃಷಿ ತಜ್ಞರು.ರೈತರು ನ್ಯಾನೋ ಗೊಬ್ಬರಕ್ಕೆ ಆದ್ಯತೆ ನೀಡಬೇಕು. ಆದರೆ ಮುಂಡರಗಿ, ಡಂಬಳ ಭಾಗದಲ್ಲಿ ರೈತರು ಹೆಚ್ಚಿನ ಯೂರಿಯಾ ಗೊಬ್ಬರದ ಬೇಡಿಕೆ ಇದ್ದು, ಕೃಷಿ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದು ಡಂಬಳ ಹೋಬಳಿ ಭಾಗಕ್ಕೆ ಅಗತ್ಯಕ್ಕೆ ತಕ್ಕಂತೆ ಯೂರಿಯಾ ಗೊಬ್ಬರ ಪೂರೈಸಲಾಗುವುದು. ರೈತರು ಗೊಂದಲಕ್ಕೆ ಒಳಗಾಗಬಾರದು. ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ಹೆಚ್ಚಿನ ದರಕ್ಕೆ ಯೂರಿಯಾ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮುಂಡರಗಿ ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಎಂ. ಹೇಳಿದರು.
ಯೂರಿಯಾ ಗೊಬ್ಬರ ಹಾಕಿದರೆ ಬೆಳೆಗಳು ಚೇತರಿಸಿಕೊಳ್ಳುತ್ತವೆ. ಆದರೆ ರಸಗೊಬ್ಬರ ಮಾರಾಟಗಾರರು ತಮ್ಮ ಇಚ್ಛೆಯಂತೆ ₹ 300ರಿಂದ ₹ 350, ₹ 400 ಬೆಲೆ ನಿಗದಿ ಮಾಡಿ ನಮ್ಮ ಮೇಲೆ ಗದಾಪ್ರಹಾರ ಮಾಡಿ ಯೂರಿಯಾ ಗೊಬ್ಬರ ಕೊಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಗ್ರಾಮೀಣ ಭಾಗದತ್ತ ಪರಿಶೀಲನೆಗೆ ಬರದೆ ಗದಗ ನಗರದಲ್ಲಿಯೆ ಠಿಕಾಣಿ ಹೂಡಿದ್ದಾರೆ. ಇದರ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರುಗಳು ಗಮನ ಕೊಡಬೇಕು ಡೋಣಿ ತಾಂಡಾ, ಕದಾಂಪೂರ ರೈತರಾದ ಮಾಂತೇಶ, ರಾಮಪ್ಪ ಡೋಣಿ ಹೇಳಿದರು.