ಕುಷ್ಟಗಿ:
ನವದಂಪತಿ ಆದರ್ಶ ಗುಣ ಅಳವಡಿಸಿಕೊಂಡು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.ಪಟ್ಟಣದ ಡಂಬರ ಓಣಿಯ ನವಲಹಳ್ಳಿ ದುರ್ಗಾದೇವಿ ದೇವಸ್ಥಾನದಲ್ಲಿ ಬಸವ ಜಯಂತಿ ನಿಮಿತ್ತ ನಡೆದ 13ನೇ ವರ್ಷದ ನಂದಾದೀಪೋತ್ಸವದ ಅಂಗವಾಗಿ ದುರ್ಗಾದೇವಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಸಹಯೋಗದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮೂಹಿಕ ವಿವಾಹದಂತಹ ಸಾಮಾಜಿಕ ಕಾರ್ಯ ಆಯೋಜಿಸಿರುವುದು ಶ್ಲಾಘನೀಯ ಎಂದರು.
ನೇತೃತ್ವ ವಹಿಸಿದ ಸಮಾಜ ಸೇವಕ ರವಿಕುಮಾರ ಹಿರೇಮಠ ಮಾತನಾಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿ ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಕಷ್ಟ-ಸುಖದಲ್ಲಿ ಒಬ್ಬರನ್ನೊಬ್ಬರು ಅರಿತುಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.ನಂದಾದೀಪೋತ್ಸವದ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆ ದುರ್ಗಾದೇವಿಗೆ ವಿಶೇಷ ಪೂಜೆ, ಹೋಮ-ಹವನ, ಅಲಂಕಾರ, ತೀರ್ಥ ಪ್ರಸಾದ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆದವು. ನಂತರ ಉಚಿತ ಸಾಮೂಹಿಕ ಮದುವೆ ಕಾರ್ಯಕ್ರಮ ಮಾಂಗಲ್ಯಧಾರಣೆ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಈ ವೇಳೆ ನಿಡಶೇಸಿ ಚನ್ನಬಸವ ಸ್ವಾಮೀಜಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕಾದ್ಯಕ್ಷ ಮರಿಯಪ್ಪ ಹಕ್ಕಲ್, ಜಿ.ಕೆ. ಹಿರೇಮಠ, ಮುತ್ತಣ್ಣ ಹಕ್ಕಲ್, ನಾಗಪ್ಪ ಚೂರಿ, ಪವಾಡೆಪ್ಪ ಚೌಡ್ಕಿ, ಯಮನಪ್ಪ ಚೂರಿ, ಕರಿಯಪ್ಪ ಹುಣಸಿಹಾಳ, ಯಮನಪ್ಪ ಡಂಬರ, ರಮೇಶ ಓತಗೇರಿ, ಸಿದ್ದಪ್ಪ ಅಂಗಡಿ, ರುದ್ರಗೌಡ ಗೌಡ್ರ, ಕರಿಸಿದ್ದಪ್ಪ ಹೊಸವಕ್ಕಲ, ಮದ್ದಾನಪ್ಪ, ಶರಣಪ್ಪ ಕಲಕಬಂಡಿ, ಶರಣಪ್ಪ ಹಡಪದ, ರುದ್ರಪ್ಪ ಹಡಪದ, ಮಾರುತಿ ಇಂಗಳಗಿ, ರಮೇಶ ಇಂಗಳಗಿ, ಲಕ್ಷ್ಮಣ ಹಕ್ಕಲ್, ದುರಗಪ್ಪ ಹಕ್ಕಲ್ ಸೇರಿದಂತೆ ನವಲಹಳ್ಳಿ ದುರ್ಗಾದೇವಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಒಟ್ಟು ಏಳು ಜೋಡಿ ನವಜೀವನಕ್ಕೆ ಕಾಲಿಟ್ಟರು.