ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಪಂಚಾಯಿತಿ ಹಳೆ ಕೆ.ಡಿ.ಪಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಪಂ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಜಂಟಿ ಸಹಯೋಗದಲ್ಲಿ ಅನುಷ್ಠಾನಗೊಳಿಸುತ್ತಿರುವ ಪ್ರಾಣಸಖಿ ಕಾರ್ಯಕ್ರಮ ಕುರಿತು ವಿವಿಧ ಶಾಲಾ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೧೦ರಿಂದ ೧೯ರ ವಯೋಮಾನದ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಆರೋಗ್ಯ ಕುರಿತ ಸೀಮಿತ ಅರಿವು, ಪೌಷ್ಟಿಕಾಂಶದ ತಿಳಿವಳಿಕೆಯ ಕೊರತೆ, ಬಾಲ್ಯವಿವಾಹದ ಒತ್ತಡ ಹಾಗೂ ತಮ್ಮ ಭಾವನೆಗಳನ್ನು ಸುರಕ್ಷಿತವಾಗಿ ಅಭಿವ್ಯಕ್ತಪಡಿಸಲು ಅವಕಾಶಗಳ ಸವಾಲನ್ನು ಎದುರಿಸುತ್ತಿರುವುದು ಕಂಡುಬಂದಿದೆ. ಪ್ರಾಣಸಖಿ ಕಾರ್ಯಕ್ರಮವು ಈ ಅಂತರವನ್ನು ಕಡಿಮೆ ಮಾಡಿ ಸಮಗ್ರ ಹಾಗೂ ಮಾನವ ಕೇಂದ್ರಿತ ವಿಧಾನಗಳ ಮೂಲಕ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಲಿದೆ ಎಂದರು.ಹೆಣ್ಣುಮಕ್ಕಳಿಗೆ ಸರಿಯಾದ ಮಾರ್ಗದರ್ಶನದಿಂದ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಹದಿಹರೆಯವು ನಿರ್ಣಾಯಕ ಹಂತವಾಗಿದೆ. ಶಾಲೆಗಳಲ್ಲಿ ಸುರಕ್ಷಿತ ಹಾಗೂ ಪೂರಕ ವಾತಾವರಣ ಒದಗಿಸಿ ಅವರ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಜ್ಞಾನ, ಕೌಶಲ ಮತ್ತು ಆತ್ಮವಿಶ್ವಾಸ ವೃದ್ಧಿಗೆ ಪ್ರಾಣಸಖಿ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ವಾರಕ್ಕೊಮ್ಮೆ ಒಂದು ಗಂಟೆ ಶಾಲಾ ಅವಧಿಯಲ್ಲಿ ತರಬೇತಿ ಪಡೆದ ಶಿಕ್ಷಕರು ಮಕ್ಕಳಿಗೆ ಸಂವಾದಾತ್ಮಕ ಪಾತ್ರಾಭಿನಯ, ಚಿತ್ರಕಲೆ ಇನ್ನಿತರ ಚಟುವಟಿಕೆಗಳ ಮೂಲಕ ಪೌಷ್ಟಿಕತೆ, ಮಾನಸಿಕ, ದೈಹಿಕ ಆರೋಗ್ಯ, ಮುಟ್ಟಿನ ನೈರ್ಮಲ್ಯ, ಜೀವನ ಕೌಶಲ್ಯಗಳ ಕುರಿತು ಮುಕ್ತ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲು ಅವರು ಸಲಹೆ ಮಾಡಿದರು.
ನರೇಗಾ, ಸ್ವಚ್ಛ ಭಾರತ್ ಮಿಷನ್ ಸೇರಿದಂತೆ ಇತರೆ ಯೋಜನೆಗಳಡಿ ಎಲ್ಲಾ ಶಾಲೆಗಳಲ್ಲಿಯೂ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಆದರೂ ಕೆಲ ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ. ಹಾಸ್ಟೆಲ್‌ಗಳಲ್ಲಿ ಓದುವ ಕೆಲ ಹೆಣ್ಣುಮಕ್ಕಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ತಾಯಿ ಇರುವುದಿಲ್ಲ. ಪ್ರಾಣಸಖಿ ಎಂದರೆ ಪ್ರಾಣ ಸ್ನೇಹಿತೆ ಎಂದರ್ಥ. ಮಹಿಳಾ ಶಿಕ್ಷಕರೇ ಮಕ್ಕಳಿಗೆ ಸ್ನೇಹಿತರಾಗುವ ಮೂಲಕ ಮಕ್ಕಳಿಗೆ ತಂದೆ- ತಾಯಿಯಾಗಬೇಕು. ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಬೇಕು. ಅದಕ್ಕಾಗಿ ಈಗಿನಿಂದಲೇ ಶಿಕ್ಷಕರು ಪರಿಶ್ರಮ ಹಾಕಬೇಕು. ಕಾರ್ಯಕ್ರಮದಿಂದ ಸಾಕಷ್ಟು ಹೆಣ್ಣುಮಕ್ಕಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಕಾಂತ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಐಎಚ್ ಸಿಆರ್ ಎಫ್ ಸಂಸ್ಥೆಯ ಮಲ್ಲಿಕಾರ್ಜುನ, ವಿಘ್ನೇಶ್, ಕಾರ್ತಿಕೇಯ ಗೋಪಿನಾಥನ್, ಪಲ್ಲವಿ, ಧನಲಕ್ಷ್ಮೀ, ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
‘ಪ್ರಾಣಸಖಿ ಕಾರ್ಯಕ್ರಮ ಅನುಷ್ಠಾನದಿಂದ ಶಾಲೆಗಳಲ್ಲಿ ನಿರ್ಮಿಸಲಾದ ಸುರಕ್ಷಿತ ಸ್ಥಳಗಳಲ್ಲಿ ಹದಿಹರೆಯದ ಬಾಲಕಿಯರಿಗೆ ಮುಟ್ಟಿನ ನೈರ್ಮಲ್ಯ, ವಿಶ್ರಾಂತಿ, ಆರೋಗ್ಯ ಸಂಬಂಧಿತ ಮಾಹಿತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಶಾಲೆಗಳು, ವಿದ್ಯಾರ್ಥಿ ನಿಲಯಗಳಲ್ಲಿ ಶುಚಿ ಪ್ಯಾಡ್ ಒದಗಿಸಲಾಗುತ್ತದೆ. ಮುಟ್ಟಿನ ದಿನಗಳಲ್ಲಿ ಹೆಣ್ಣುಮಕ್ಕಳು ೪- ೫ ದಿನ ಶಾಲೆಗೆ ಗೈರಾಗುತ್ತಾರೆ. ಇದರಿಂದ ಶಾಲಾ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆ ಕುಂಠಿತವಾಗಿ ಕಲಿಕೆಗೆ ತೊಂದರೆಯಾಗಲಿದೆ. ಹೆಣ್ಣುಮಕ್ಕಳು ಪ್ರತಿದಿನವು ಶಾಲೆಗೆ ಬರುವಂತಾಗಬೇಕು. ಪ್ರಾಣಸಖಿ ಕಾರ್ಯಕ್ರಮದಿಂದ ನೈರ್ಮಲ್ಯ ಅಭ್ಯಾಸಗಳ ಅರಿವಿನಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗಲಿದೆ.’