ದೇಶದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ: ಡಾ. ಗಂಗಾಬಿಕಾ ಅಕ್ಕ

KannadaprabhaNewsNetwork | Published : Jan 17, 2024 1:47 AM

ಸಾರಾಂಶ

ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರದ ವತಿಯಿಂದ ಧರ್ಮೋದಯ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ದೇಶದಲ್ಲಿ ಅನೇಕ ಧರ್ಮಗಳು ಇವೆ. ಅವುಗಳಲ್ಲಿ ಲಿಂಗಾಯತ ಒಂದು ಸ್ವತಂತ್ರ ಧರ್ಮವಾಗಿದೆ. ಈ ಧರ್ಮವು 12ನೇ ಶತಮಾನದಲ್ಲಿ ಗುರು ಬಸವಣ್ಣನವರಿಂದ ಸ್ಥಾಪಿತವಾದ, ಸಮಾನತೆ ಸಾರಿದ, ಬಹು ಪ್ರಗತಿಶೀಲ, ಸ್ವಾತಂತ್ರ, ಸ್ವಾವಲಂಬಿ, ಪರಿಪೂರ್ಣ ಧರ್ಮವಾಗಿದೆ ಎಂದು ಹರಳಯ್ಯ ಗವಿಯ ಡಾ. ಗಂಗಾಬಿಕಾ ಅಕ್ಕ ನುಡಿದರು.

ಇಲ್ಲಿನ ಹರಳಯ್ಯನವರ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಬಸವಕಲ್ಯಾಣ ವತಿಯಿಂದ ನಡೆದ ಲಿಂಗಾಯತ ಧರ್ಮೋದಯ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪುರೋಹಿತ ಶಾಹಿಗಳಿಂದ ಸಮಾಜದಲ್ಲಿ ನಡೆದ ಶೋಷಣೆ, ಅಸಮಾನತೆ ತಪ್ಪಿಸುವುದಕ್ಕಾಗಿ ಈ ದಿನ ಲಿಂಗಾಯತ ಧರ್ಮ ಉದಯಿಸಿದ ದಿನವಾಗಿದೆ. ಈ ಧರ್ಮವು ಸಾಮಾಜಿಕ, ನ್ಯಾಯಕ್ಕಾಗಿ, ಸಮಾನ ಹಕ್ಕುಗಳನ್ನು ತತ್ವಗಳನ್ನು ಎತ್ತಿ ಹಿಡಿಯುವ ಮೂಲಕ ತುಳಿತಕ್ಕೊಳಗಾದವರಿಗೆ ದೀನದಲಿತರಿಗೆ ಅವಕಾಶ ನೀಡುವ ಮೂಲಕ ಕ್ರಾಂತಿಕಾರಕ ಧರ್ಮವಾಗಿದೆ ಎಂದರು.

ನಿವೃತ್ತ ಡೀನ್ ಡಾ. ಅಮರನಾಥ ಸೋಲಪುರೆ ಉದ್ಘಾಟಿಸಿ ಮಾತನಾಡಿ, ಶರಣರು ಹಾಕಿಕೊಟ್ಟ ಮಾರ್ಗ ಸೃಷ್ಟಿಯ ಮಾರ್ಗ, ವಚನಗಳ ಮೂಲಕ ಮೂಡಿ ಬಂದ ಚಿರಂತನ ಮೌಲ್ಯಗಳು ಎಲ್ಲಾ ಕಾಲಕ್ಕೂ ಇರುತ್ತವೆ. ಶರಣ ಮಾರ್ಗ ಜೀವನದ ಮಾರ್ಗವಾಗಿದೆ. ನಮ್ಮ ಜೀವನ ಪರಿಪೂರ್ಣ ಪ್ರಸಾದಿಕವಾಗಬೇಕಾದರೆ ಎಲ್ಲರೂ ನಮ್ಮವರು ಎಂಬ ಭಾವನೆ ಇರಬೇಕು. ಎಲ್ಲರನ್ನೂ ತನ್ನಂತೆ ಪ್ರೀತಿಸಬೇಕು. ಸತ್ಯ ಶುದ್ಧ ಕಾಯಕದಿಂದ ಬಂದದ್ದನ್ನು ಉಳ್ಳವರು ಇಲ್ಲದವರಿಗೆ ದಾಸೋಹ ಮಾಡುವುದು ಧರ್ಮವಾಗಿದೆ. ಲಿಂಗಾಯತ ಧರ್ಮೋದಯ ದಿನಾಚರಣೆ ಮನೆ-ಮನೆಗಳಲ್ಲಿ ಆಚರಿಸಬೇಕೆಂದರು.

ಅಕ್ಕಮಹಾದೇವಿ ಗವಿಯ ಸತ್ಯಕ್ಕತಾಯಿ, ಕಲಬುರಗಿಯ ಚಿಂತಕರಾದ ಜಗನ್ನಾಥ ರಾಚೋಟಿ, ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಸಿ.ಬಿ. ಪ್ರತಾಪೂರೆ, ಕಾರ್ಯದರ್ಶಿ ಶಂಕರ ಕರಣೆ, ಅಂಬರಾಯ ಸೇರಿದಂತೆ ಇತರರಿದ್ದರು. ವೆಂಕಟರೆಡ್ಡಿ ಧ್ವಜಾರೋಹಣಗೈದರು. ಅಕ್ಕನ ಬಳಗದವರು ವಚನ ಪ್ರಾರ್ಥಣೆ ಮಾಡಿದರು. ಜಯಶ್ರೀ ಬಿರಾದಾರ ನಿರೂಪಿಸಿದರೆ ಸಿದ್ರಾಮ ಯಳವಂತಗಿ ವಚನ ಗಾಯನ ನಡೆಸಿಕೊಟ್ಟರು.

Share this article