ಜಗತ್ತಿನಲ್ಲಿ ಲಿಂಗಾಯತ ಧರ್ಮ ಜಾರಿ ಉದ್ದೇಶ

KannadaprabhaNewsNetwork |  
Published : Jun 21, 2025, 12:49 AM IST
೨೦ಬಿಎಸ್ವಿ೦೧- ಬಸವನಬಾಗೇವಾಡಿಯ ವಿರಕ್ತಮಠದಲ್ಲಿ ಗುರುವಾರ ಸಂಜೆ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಬಸವನಬಾಗೇವಾಡಿಯಲ್ಲಿ ಜನಿಸಿದ ಬಸವೇಶ್ವರರನ್ನು ಪುರಾಣ ಪುರುಷರನ್ನಾಗಿಸದೇ ಅವರ ವೈಚಾರಿಕ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅರಿಯುವ ಮೂಲಕ ಜಗತ್ತಿನಲ್ಲಿ ಲಿಂಗಾಯತ ಧರ್ಮವನ್ನು ಎಲ್ಲೆಡೆ ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ. ಅದಕ್ಕಾಗಿ ಈ ನೆಲದಿಂದ ಸೆ.೧ ರಿಂದ ಅ.೧ರವರೆಗೆ ರಾಜ್ಯಾದ್ಯಂತ ಬಸವ ಸಂಸ್ಕೃತಿಯ ಅಭಿಯಾನದಂಗವಾಗಿ ರಥಯಾತ್ರೆ ಜರುಗಲಿದೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಬಸವನಬಾಗೇವಾಡಿಯಲ್ಲಿ ಜನಿಸಿದ ಬಸವೇಶ್ವರರನ್ನು ಪುರಾಣ ಪುರುಷರನ್ನಾಗಿಸದೇ ಅವರ ವೈಚಾರಿಕ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅರಿಯುವ ಮೂಲಕ ಜಗತ್ತಿನಲ್ಲಿ ಲಿಂಗಾಯತ ಧರ್ಮವನ್ನು ಎಲ್ಲೆಡೆ ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ. ಅದಕ್ಕಾಗಿ ಈ ನೆಲದಿಂದ ಸೆ.೧ ರಿಂದ ಅ.೧ರವರೆಗೆ ರಾಜ್ಯಾದ್ಯಂತ ಬಸವ ಸಂಸ್ಕೃತಿಯ ಅಭಿಯಾನದಂಗವಾಗಿ ರಥಯಾತ್ರೆ ಜರುಗಲಿದೆ. ಈ ಅಭಿಯಾನಕ್ಕೆ ರಾಜ್ಯದ ಎಲ್ಲ ಮಠಾಧೀಶರು, ಬಸವ ಪರ ಸಂಘಟನೆಗಳು ಸೇರಿ ಎಲ್ಲ ಪಂಗಡದ ಲಿಂಗಾಯತರು ಸಹಕಾರ ನೀಡಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಪರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆ ಯಂಗವಾಗಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ಲಿಂಗಾಯತರು ತಮ್ಮ ನಿಜವಾದ ಇತಿಹಾಸವನ್ನು ಮರೆತ್ತಿದ್ದರಿಂದ ಮಡಿದ ಶರಣರಿಗೆ ಸಂಬಂಧಪಟ್ಟ ಕ್ಷೇತ್ರಗಳನ್ನು ಖಾಸಗಿಯವರು ಅನುಭವಿಸುತ್ತಿದ್ದಾರೆ. ಈ ಕ್ಷೇತ್ರಗಳನ್ನು ನಾವು ಮರಳಿ ಪಡೆಯಬೇಕಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಕೆಲ ಶರಣ ಕ್ಷೇತ್ರಗಳನ್ನು ಅಧ್ಯಯನ ಮಾಡಿ ಅವುಗಳನ್ನು ಸ್ವಾಧೀನ ಪಡೆದು ಸ್ಮಾರಕಗಳಾಗಿ ನಿರ್ಮಿಸಲಾಗಿದೆ. ಅದೇ ರೀತಿಯಲ್ಲಿ ಬಸವೇಶ್ವರ ಜನಿಸಿದ ಈ ನೆಲದಲ್ಲಿ ಬಸವ ಜನ್ಮಸ್ಮಾರಕ ನಿರ್ಮಿಸಿ ಅವರ ಚರಿತ್ರೆಯನ್ನು ಜನಮಾನಸಕ್ಕೆ ಮುಟ್ಟಿಸುವ ಕಾರ್ಯ ಮಾಡಲಾಗಿದೆ. ಅವರ ಜನನದ ಅವಧಿಯ ಕುರಿತು ವಿದ್ವಾಂಸರಲ್ಲಿ ಭಿನ್ನಾಪ್ರಾಯವಿದ್ದ ಕಾರಣದಿಂದ ಎಲ್ಲಿಯೂ ಅವರು ಜನಿಸಿದ ಅವಧಿಯ ಬಗ್ಗೆ ಮಾಹಿತಿ ನೀಡಲಿಲ್ಲ. ಅವರ ಸಂದೇಶ ಮಾತ್ರ ಜನರು ಅರಿಯುವ ಅಗತ್ಯವಿದೆ ಎಂದು ಹೇಳಿದರು.

ಇಂದು ಬಸವ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯ ಸಂಗತಿ. ಕೆಲ ಸ್ವಾಮೀಜಿಗಳು ಇದೀಗ ಬಸವ ಸಂಸ್ಕೃತಿಯ ಕುರಿತು ಎಚ್ಚೆತ್ತಿದ್ದಾರೆ. ಎಲ್ಲ ಸ್ವಾಮೀಜಿಗಳು ಲಿಂಗಾಯತರಿಗಾಗಿ ಬರಬೇಕಿದ್ದು, ಬರದಿರುವ ಮಠಾಧೀಶರ ಅಸ್ತಿತ್ವ ಇಲ್ಲದಂತಾಗುತ್ತದೆ. ಬಸವ ತತ್ವ ಎಲ್ಲಕ್ಕಿಂತಲೂ ದೊಡ್ಡದ್ದು. ಈ ಭಾವನೆ ಎಲ್ಲರಲ್ಲಿ ಬರಲಿ. ಲಿಂಗಾಯತರು ವೈಧಿಕ ಪರಂಪರೆಯಿಂದ ಹೊರಗೆ ಬರಬೇಕಿದೆ. ನಮ್ಮ ಹಿರಿಯರಾದ ಸ.ಸ.ಬಸವನಾಳ, ಆರ್.ಸಿ.ಹಿರೇಮಠ, ಎಂ.ಎಂ.ಕಲಬುರ್ಗಿ, ಫ.ಗು.ಹಳಕಟ್ಟಿ ಸೇರಿ ಅನೇಕ ವಿದ್ವಾಂಸರು ಬಸವಾದಿ ಶರಣರ ವಚನಗಳನ್ನು ಪರಿಷ್ಕರಿಸಿದ್ದಾರೆ. ಈ ವಚನಗಳು ಲಿಂಗಾಯತ ಧರ್ಮದ ಕುರಿತು ಹೇಳುತ್ತವೆ. ಇದನ್ನು ನಾವೆಲ್ಲರೂ ಅರಿಯಬೇಕು. ಲಿಂಗಾಯತರಲ್ಲಿರುವ ಎಲ್ಲ ಒಳಪಂಗಡಗಳು ಸಂಬಂಧವನ್ನು ಬೆಳೆಸುವ ಮೂಲಕ ಜಾಗೃತರಾಗುವ ಅಗತ್ಯವಿದೆ ಎಂದು ಎಚ್ಚರಿಸಿದರು.

ಇತ್ತೀಚೆಗೆ ಕೆಲವರು ವಚನಗಳು ವೇದಗಳ ಭಾಷಾಂತರ, ಅನುಭವ ಮಂಟಪ ಇಲ್ಲ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಇವರಿಗೆ ಉತ್ತರ ನೀಡಿ ಸಂಚನ್ನು ವಿಫಲಗೊಳಿಸಲಾಗಿದೆ. ಎಲ್ಲ ಲಿಂಗಾಯತರು ಒಗ್ಗೂಡಿ ಬಸವ ಯುಗ ಆರಂಭಿಸಬೇಕಿದೆ. ಬಸವ ಸಂಸ್ಕೃತಿಯ ಅಭಿಯಾನದ ರಥಯಾತ್ರೆ ದಿನ ಸುಮಾರು ೬-೭ ಸಾವಿರ ಜನ ಭಾಗವಹಿಸುತ್ತಾರೆ. ಈ ಅಭಿಯಾನದ ಚಾಲನೆ ವೇಳೆ ಸ್ಥಳೀಯರು ಐದು ಸಮಿತಿಗಳನ್ನು ರಚನೆ ಮಾಡಿ, ಸಂವಾದ, ವಚನ ಸಂಗೀತ, ಉಪನ್ಯಾಸ, ವಚನ ಕಟ್ಟುಗಳ ಮೆರವಣಿಗೆ, ದಾಸೋಹವನ್ನು ಹಮ್ಮಿಕೊಳ್ಳಬೇಕು. ಈ ಅಭಿಯಾನದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಿ ಬಸವ ಯುಗಕ್ಕೆ ನಾಂದಿ ಹಾಡಬೇಕು ಎಂದರು.

ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನಕ್ಕೆ ಬಸವ ನಾಡಿನ ಜನರು ಸಂಪೂರ್ಣ ಕೈಜೋಡಿಸುವ ಅಗತ್ಯವಿದೆ. ಸಚಿವ ಶಿವಾನಂದ ಪಾಟೀಲರ ಸಹಕಾರ ಪಡೆಯಲಾಗುವುದು. ಅಭಿಯಾನದ ಯಶಸ್ವಿಗೆ ನಾವು ಸದಾ ಬದ್ಧ ಎಂದರು.

ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಮನಗೂಳಿಯ ವಿರತೀನಾನಂದ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಚಿಂತನೆಗಳನ್ನು ಜಗತ್ತಿಗೆ ಮುಟ್ಟಿಸುವ ಅಗತ್ಯವಿದೆ. ಇದಕ್ಕೆ ಎಲ್ಲ ಲಿಂಗಾಯತರು ತನು-ಮನ-ಧನದಿಂದ ಸಹಕಾರ ನೀಡಿ ಲಿಂಗಾಯತ ಧರ್ಮದ ಜಾಗೃತಿ ಮೂಡಿಸಬೇಕು. ಬಸವ ಸಿದ್ಧಾಂತ ಎಲ್ಲೆಡೆ ಹರಡಬೇಕು ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ರೊಟ್ಟಿ, ವಿಜಯಪುರದ ಬಸನಗೌಡ ಹರನಾಳ ಮಾತನಾಡಿದರು.

ಮಸಬಿನಾಳದ ಸಿದ್ದರಾಮ ಶಿವಯೋಗಿಗಳು, ಸಾಹಿತಿ ಲ.ರು.ಗೊಳಸಂಗಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಎಫ್.ಡಿ.ಮೇಟಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವ್ಹಿ.ಬಿ.ಮರ್ತುರ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಕದಳಿ ವೇದಿಕೆಯ ಸಾವಿತ್ರಿ ಕಲ್ಯಾಣಶೆಟ್ಟಿ, ಮುಖಂಡರಾದ ಬಿ.ಕೆ.ಕಲ್ಲೂರ, ಬಸವರಾಜ ಹಾರಿವಾಳ, ಎಸ್.ಆರ್‌.ಹೂಗಾರ, ಸಂಗನಗೌಡ ಚಿಕ್ಕೊಂಡ, ಎಸ್.ಎ.ದೇಗಿನಾಳ, ಮಲ್ಲಿಕಾರ್ಜುನ ಹಡಪದ ಇತರರು ಇದ್ದರು. ಶರಣು ಬಸ್ತಾಳ ವಚನ ಗೀತೆ ಪ್ರಸ್ತುತ ಪಡಿಸಿದರು. ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಮಹಾಂತೇಶ ಆದಿಗೊಂಡ ಸ್ವಾಗತಿಸಿದರು. ಮಹಾಂತೇಶ ಸಂಗಮ ನಿರೂಪಿಸಿದರು. ಸಂಗನಗೌಡ ಚಿಕ್ಕೊಂಡ ವಂದಿಸಿದರು.

-----ಬಾಕ್ಸ್‌

ನಮ್ಮನ್ನ ಕಡಿಮೆ ತೋರಿಸಿದ್ದಾರೆ

ಸರ್ಕಾರ ಜಾತಿ ಗಣತಿ ಮಾಡಲು ಮುಂದಾಗಿದೆ. ಈ ಗಣತಿ ಕಾರ್ಯದಲ್ಲಿ ಲಿಂಗಾಯತರು ಜಾಗೃತರಾಗಿ ಲಿಂಗಾಯತವೆಂದು ಬರೆಸಬೇಕು. ಲಿಂಗಾಯತ ಎಂದು ಬರೆಸಿದರೆ ಮೀಸಲಾತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇತ್ತೀಚೆಗೆ ಸರ್ಕಾರ ನೀಡಿದ ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚಿದ್ದರೂ ನಮ್ಮ ಲಿಂಗಾಯತರ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಇದರ ಬಗ್ಗೆ ಲಿಂಗಾಯತರು ಜಾಗೃತರಾಗುವ ಅಗತ್ಯವಿದೆ.

ಡಾ.ಎಸ್.ಎಂ.ಜಾಮದಾರ, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ