ಹುಬ್ಬಳ್ಳಿ: ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದು, ಭಾರತದ ಲಿಂಗಾಯತ ಧರ್ಮ. ಈ ಲಿಂಗಾಯತ ಧರ್ಮದಿಂದ ಮಾತ್ರ ಜಗತ್ತಿಗೆ ಸಹಬಾಳ್ವೆ, ಶಾಂತಿ ಸಿಗಲು ಸಾಧ್ಯ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ಬುದ್ಧ ಸ್ತ್ರೀಯರಿಗೆ ದೀಕ್ಷೆ ನೀಡಲಿಲ್ಲ. ಜೈನರು ಮಹಿಳೆಯನ್ನು ನಿತ್ಯ ನರಕಿ ಎನ್ನುತ್ತ, ಮೋಕ್ಷ ಪಡೆಯಲು ಆಕೆ ಮುಂದಿನ ಜನ್ಮದಲ್ಲಿ ಪುರುಷನಾಗಿಯೇ ಹುಟ್ಟಬೇಕು ಎನ್ನುತ್ತಾರೆ. ಇಸ್ಲಾಂ ಧರ್ಮದಲ್ಲಿ ಪುರುಷನ ಸಮಾನ ನಿಂತು ನಮಾಜ ಮಾಡಲು ಸ್ತ್ರೀಗೆ ಅವಕಾಶವಿಲ್ಲ. ಬುರಕಾ ಇತ್ಯಾದಿ ಕಟ್ಟುಪಾಡುಗಳಿವೆ. ಕ್ರೈಸ್ತರಲ್ಲಿ ಧರ್ಮಗುರು ಪೋಪ್ ಆಗಲು ಮಹಿಳೆಗೆ ಅವಕಾಶವೇ ಇಲ್ಲ. ಹೀಗೆ ಆಯಾ ಧರ್ಮಗಳಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಮಹಿಳೆ ಎರಡನೇ ದರ್ಜೆಯ ನಾಗರೀಕಳಾಗಿದ್ದಾಳೆ ಎಂದು ವಿಶ್ಲೇಷಿಸಿದರು.
ಮಹಿಳೆಗೆ ಗುರು ಸ್ಥಾನವೈದಿಕ ಧರ್ಮದಲ್ಲಂತೂ ಹೆಣ್ಣು ಎಂದರೆ ಕೀಳು ಎನ್ನುವ ಮಾತಿದೆ. ಅಲ್ಲಿ ಅವಳಿಗೆ ಯಾವುದೇ ಸ್ವಾತಂತ್ರ್ಯ ಇಲ್ಲ. ಎಲ್ಲ ಅನಿಷ್ಟಗಳಿಗೆ ಆಕೆಯೇ ಕಾರಣ. ಕೆಲವು ಧಾರ್ಮಿಕ ಆಚರಣೆ, ಅಧ್ಯಾತ್ಮ ಮತ್ತು ಮೋಕ್ಷಕ್ಕೆ ಅವಳು ಅನರ್ಹಳು ಎಂದು ಶಾಸ್ತ್ರ-ಪುರಾಣ ಬರೆದಿಟ್ಟಿದ್ದರು. ಇವನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸಿದ ಬಸವಣ್ಣ, ಮಹಿಳೆಯ ಕೈಯಲ್ಲಿ ಇಷ್ಟಲಿಂಗ ಇಡುವ ಮೂಲಕ ಆಕೆಯನ್ನು ಆ ಎಲ್ಲ ಕಟ್ಟುಪಾಡುಗಳಿಂದ ಬಿಡುಗಡೆ ಮಾಡಿದರು. ಅನುಭವ ಮಂಟಪದಲ್ಲಿ ಪುರುಷನ ಸಮಾನ ಕುಳಿತು ಚರ್ಚಿಸಲು, ವಚನ ರಚಿಸಲು ಹಚ್ಚಿದರು. ಅಷ್ಟೇ ಅಲ್ಲ ಇಷ್ಟಲಿಂಗದಲ್ಲಿ ಸಾಧನೆ ಮಾಡಿದ ಮಹಿಳೆಗೆ ಗುರುವಿನ ಸ್ಥಾನ ನೀಡಿ ಗೌರವಿಸುವ ಮೂಲಕ ಮಾನವೀಯತೆಗೆ ಹೊಸ ವ್ಯಾಖ್ಯಾನ ಬರೆದರು ಎಂದು ಶ್ರೀಗಳು ವಿವರಿಸಿದರು.
ಶರಣರ ಚಿತ್ರಗಳ ಗ್ಯಾಲರಿ
ಜ್ಞಾನ ಕೆಲವರ ಸ್ವತ್ತು ಆಗಿದ್ದ ಕಾಲದಲ್ಲಿ ಶರಣರು ಮಹಿಳೆಯರು, ತುಳಿತಕ್ಕೆ ಒಳಗಾದವರು, ಅಕ್ಷರ ವಂಚಿತರನ್ನೆಲ್ಲ ಕರೆದು ಸಮಾನವಾಗಿ ಕುಳ್ಳಿಸಿಕೊಂಡು ವಚನ ರಚಿಸಿಲು ಹಚ್ಚಿದರು. ಲಿಂಗತಾರತಮ್ಯ ಹೊಡೆದೋಡಿಸಿದರು. ಇಂಥ ವಚನ, ಶರಣ ತತ್ವ ಹೇಳುವುದು ಸರಳ. ಆಚರಣೆ ಕಷ್ಟವಾಗಿದೆ. ಆದರೆ, ನಿಜಗುಣಾನಂದ ಮಹಾಸ್ವಾಮಿಗಳ ಇಂಥ ಪ್ರವಚನ ಆಲಿಸುವುದರಿಂದ ಆ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.