ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಿಜಗುಣುಪ್ರಭು ಸ್ವಾಮೀಜಿ ಹೇಳಿಕೆ
ಕನ್ನಡಪ್ರಭ ವಾರ್ತೆ ಧಾರವಾಡಹಿಂದೂ ಶಬ್ಧ ಬಳಸುವ ಲಿಂಗಾಯತರಿಗೆ ಭವಿಷ್ಯವಿಲ್ಲ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭ ಸ್ವಾಮೀಜಿ ಹೇಳಿದರು.ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಘಟಕ ಲಿಂಗಾಯತ ಭವನದಲ್ಲಿ ಗುರುವಾರ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ-ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಲಿಂಗಧಾರಣೆ ಸಮಾರಂಭದ ಸಾನ್ನಿಧ್ಯದಲ್ಲಿ ಮಾತನಾಡಿದ ಅವರು, ಮೊದಲು ಧರ್ಮದ ಬಗ್ಗೆ ಲಿಂಗಾಯತರಲ್ಲಿರುವ ಗೊಂದಲ ನಿವಾರಿಸಬೇಕಿದೆ. ಪ್ರತ್ಯೇಕ ಧರ್ಮ ಬೇಕಾದರೆ,ಲಿಂಗಾಯತರು ಹಿಂದೂ ಪದ ಕೈಬಿಡಲು ಕೂಡ ಕೋರಿದರು.
ಇಸ್ಲಾಂ, ಕ್ರೈಸ್ತ, ಸಿಖ್ ಮತ್ತು ಜೈನ್ ಅಲ್ಪ ಜನಸಂಖ್ಯೆ ಹೊಂದಿದ್ದರೂ ಪ್ರತ್ಯೇಕ ಧರ್ಮಗಳಾಗಿವೆ.ನಾಲ್ಕು ಕೋಟಿ ಜನಸಂಖ್ಯೆ,ವಿಶಿಷ್ಟ ಪರಂಪರೆ ಹೊಂದಿರುವ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡದಿರುವುದಕ್ಕೆ ವಿಷಾದಿಸಿದರು. ವೀರಶೈವ-ಲಿಂಗಾಯತ ಸಮಾಜ ವೈಜ್ಞಾನಿಕ ತಳಹದಿ ಮೇಲೆ ಸ್ಥಾಪಿಸಲ್ಪಟ್ಟಿದೆ.ಇದಕ್ಕೆ ಧರ್ಮ ಮಾನ್ಯತೆ ಸಿಗಬೇಕಿದೆ. ಸಮಾಜ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕ್ ಸ್ಥಾಪಿಸುವ ಚಿಂತನೆ ಇದೆ ಎಂದು ಇದೇ ವೇದಿಕೆಯಲ್ಲಿ ಶಾಸಕ ಬಿ.ಆರ್. ಪಾಟೀಲ ಹೇಳಿದರು.ಮಾಜಿ ಸಚಿವೆ ಡಾ. ಲೀಲಾದೇವಿ ಆರ್. ಪ್ರಸಾದ,ಕರ್ನಾಟಕದಲ್ಲಿ ವೀರಶೈವ ಶಕ್ತಿ ಹೊರತರುವ ಕಾರ್ಯ ವೀರಶೈವ-ಲಿಂಗಾಯತ ಮಹಾಸಭಾ ಮಾಡುತ್ತಿದೆ. ನಮ್ಮ ಯುವಜನಾಂಗ ಸಮಾಜದ ಅಭ್ಯುಧ್ಯೇಯಕ್ಕೆ ಶ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ಮಠಾಧೀಶರು ಹಾಗೂ ರಾಜಕಾರಣಿಗಳು ಲಿಂಗಾಯತ ಸಮಾಜವನ್ನು ಲಿಂಗಾಯತ, ಸಾದರ, ಬಣಜಿಗ,ಗಾಣಿಗ ಹೀಗೆ ಒಡೆದು ಹಾಳು ಮಾಡಿದ್ದಾರೆ ಎಂದು ದೂರಿದರು.ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಮಾಜದ ನೀಲಾ ಕೊಡ್ಲಿ, ನಿಜಗುಣ ಸ್ವಾಮೀಜಿ ಸೇರಿ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು. ಜತೆಗೆ ಶೇ.90ರಷ್ಟು ಅಂಕ ಪಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ 125 ಮಕ್ಕಳಿಗೆ ₹2500 ನಗದು ಪುರಸ್ಕಾರ ನೀಡಲಾಯಿತು.
ಉಪ್ಪಿನಬೆಟಗೇರಿ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಎಂಎಫ್ ಮಾಜಿ ಅಧ್ಯಕ್ಷ ನೀಲಕಂಠ ಅಸೂಟಿ, ಶಿವಶರಣ ಕಲಬಶೆಟ್ಟರ, ರಾಜಶೇಖರ ಉಪ್ಪಿನ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ್, ಸಂಧ್ಯಾ ಅಂಬಡಗಟ್ಟಿ, ಮಂಜುನಾಥ ಇದ್ದರು.