ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ನೀಲಾಕಾಶದಲ್ಲಿ ಒಮ್ಮಿಂದೊಮ್ಮೆಲೆ ಆವರಿಸಿದ ಕಾರ್ಮೋಡದಿಂದಾಗಿ ದಿಢೀರ್ ಎಂಬಂತೆ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಹಲವೆಡೆ ಹಾನಿಯುಂಟಾದ ಬಗ್ಗೆ ವರದಿಯಾಗಿದೆ.ಮಳೆ ಬರುವ ಲಕ್ಷಣವಿಲ್ಲ ಎಂದು ಒಣಗಿಸಲು ಹಾಕಲಾದ ಕೃಷಿ ಉತ್ಪನ್ನಗಳು ಬುಧವಾರ ರಾತ್ರಿ ಸುರಿದ ದಿಢೀರ್ ಮಳೆಯಿಂದಾಗಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕೃಷಿಕರನೇಕರು ನಷ್ಟಕ್ಕೀಡಾಗಿದ್ದಾರೆ.
ಮಳೆಯುದ್ದಕ್ಕೂ ಅಪ್ಪಳಿಸುತ್ತಿದ್ದ ಸಿಡಿಲಾಘಾತಕ್ಕೆ ಸಿಲುಕಿ 50 ಕ್ಕೂ ಮಿಕ್ಕಿದ ಪಂಪು ಸೆಟ್ ಗಳು, ಇನ್‌ವರ್ಟರ್ ಗಳು ಹಾನಿಗೀಡಾಗಿದ್ದು, ಉಪ್ಪಿನಂಗಡಿ ಪರಿಸರದಲ್ಲಿ ಎರಡು ವಿದ್ಯುತ್ ಪರಿವರ್ತಕಗಳು ಸಿಡಿಲಿಗೆ ಸಿಲುಕಿ ಹಾನಿಗೊಂಡಿದೆ. ಮಾತ್ರವಲ್ಲದೆ ಹಲವೆಡೆ ವಿದ್ಯುತ್ ತಂತಿಗೆ ಅಳವಡಿಸಲಾದ ಇನ್ಸುಲೇಟರ್ ಗಳು ಸಿಡಿಲ ಹೊಡೆತಕ್ಕೆ ಛಿದ್ರವಾಗಿದ್ದು ಇದರಿಂದಾಗಿ ವಿದ್ಯುತ್ ಸರಬರಾಜಿಗೆ ವ್ಯತ್ಯಯವುಂಟಾಗಿದೆ.ಕಳೆದ ಕೆಲ ದಿನಗಳಿಂದ ಸಾಯಂಕಾಲದ ವೇಳೆ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ ಕುಮಾರಧಾರಾ ನದಿಗಳ ನೀರಿನ ಹರಿವಿನಲ್ಲಿ ಹೆಚ್ಚಳವುಂಟಾಗಿದ್ದು, ಮಳೆಗಾಲದಲ್ಲಿ ಮಳೆಯ ಪ್ರಮಾಣ ಕುಸಿತವಾಗಿರುವುದನ್ನು ಈಗ ಸುರಿಯುತ್ತಿರುವ ಅಕಾಲಿಕ ಮಳೆಯು ಸರಿದೂಗಿಸುವಂತಿದೆ.
ಕರಾವಳಿಯಲ್ಲಿ ವಿವಿಧ ಕಡೆಗಳಲ್ಲಿ ಬುಧವಾರ ತಡರಾತ್ರಿಯಿಂದ ಮರುದಿನ ನಸುಕಿನ ಜಾವದ ವರೆಗೆ ಧಾರಾಕಾರ ಮಳೆಯಾಗಿದೆ.ದ.ಕ.ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ರಾತ್ರಿ ಇಡೀ ಗುಡುಗು, ಮಿಂಚಿನ ನಡುವೆ ಮಳೆ ಸುರಿದಿದೆ. ಗುರುವಾರ ಬೆಳಗ್ಗೆ ಮಳೆ ಬಿಟ್ಟಿದ್ದರೂ ಇಡೀ ದಿನ ಮೋಡ, ಬಿಸಿಲಿನ ವಾತಾವರಣ ಕಂಡುಬಂದಿದೆ. ಹವಾಮಾನ ಇಲಾಖೆ ಪ್ರಕಾರ ಕರಾವಳಿಯಲ್ಲಿ ತುಂತುರು ಮಳೆಯಾಗುವ ನಿರೀಕ್ಷೆ ಹೇಳಲಾಗಿದೆ.
ಗುರುವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಸರಾಸರಿ 40.8 ಮಿಲಿ ಮೀಟರ್ ಮಳೆ ದಾಖಲಾಗಿದೆ. ಮಂಗಳೂರು 16.8 ಮಿ.ಮೀ, ಬಂಟ್ವಾಳ 36.4 ಮಿ.ಮೀ, ಬೆಳ್ತಂಗಡಿ 49.2 ಮಿ.ಮೀ, ಪುತ್ತೂರು 57.4 ಮಿ.ಮೀ, ಕಡಬ 29.6 ಮಿ.ಮೀ, ಸುಳ್ಯ 55.1 ಮಿ.ಮೀ. ಮಳೆ ವರದಿಯಾಗಿದೆ.-----------.ಚಿತ್ರಗಳು: ಯುಪಿಪಿ ನವ್ 9- 1 ನೇತ್ರಾವತಿ1,2,3,4,5