ಗೀತ-ಸಂಗೀತ ಸುಧೆಯಲ್ಲಿ ಮಿಂದೆದ್ದ ಸಾಹಿತ್ಯಾಭಿಮಾನಿಗಳು

KannadaprabhaNewsNetwork |  
Published : Jan 07, 2025, 12:16 AM IST
6ಎಚ್ಎಸ್ಎನ್14 : ಗೀತಸಂಗೀತ ಗೋಷ್ಠಿಯಲ್ಲಿ  ಶ್ರೀನಿವಾಸ ಪ್ರಭು, ಪಂಚಮಿ ಹಳಿಬಂಡಿ ಹಾಗೂ ನಾಗಚಂದ್ರಿಕಾ ಭಟ್‌ ಅವರು ಹಲವು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. | Kannada Prabha

ಸಾರಾಂಶ

ಸಾಹಿತ್ಯೋತ್ಸವದಲ್ಲಿ ಮಧ್ಯಾಸಹ್ನ ನಡೆದ ಗೀತ ಸಂಗೀತ ಗೋಷ್ಠಿ-1ರಲ್ಲಿ ನಾಡಿನ ಖ್ಯಾತ ಗಾಯಕರು ಹಾಡಿದ ಗೀತೆಗಳು ಸಾಹಿತ್ಯ ಪ್ರಿಯರನ್ನು ನಾದ ಲೋಕದಲ್ಲಿ ವಿಹರಿಸುವಂತೆ ಮಾಡಿದವು.

ಕನ್ನಡಪ್ರಭ ವಾರ್ತೆ, ಹಾಸನ

ಸಾಹಿತ್ಯೋತ್ಸವದಲ್ಲಿ ಮಧ್ಯಾಸಹ್ನ ನಡೆದ ಗೀತ ಸಂಗೀತ ಗೋಷ್ಠಿ-1ರಲ್ಲಿ ನಾಡಿನ ಖ್ಯಾತ ಗಾಯಕರು ಹಾಡಿದ ಗೀತೆಗಳು ಸಾಹಿತ್ಯ ಪ್ರಿಯರನ್ನು ನಾದ ಲೋಕದಲ್ಲಿ ವಿಹರಿಸುವಂತೆ ಮಾಡಿದವು.

ನಾಡಿನ ಹಿರಿಯ ಕಲಾವಿದ ಶ್ರೀನಿವಾಸ ಪ್ರಭು ವ್ಯಾಖ್ಯಾನ, ಪಂಚಮ ಹಳಿಬಂಡಿ ಹಾಗೂ ನಾಗಚಂದ್ರಿಕಾ ಭಟ್ ಪ್ರಸಿದ್ಧ ಕವಿಗಳ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ ಪರಿ ನಿಜಕ್ಕೂ ಸೋಜಿಗ ಎನಿಸುವಂತಿತ್ತು. ಸುಮಾರು ಒಂದು ಕಾಲು ಗಂಟೆಗೂ ಹೆಚ್ಚು ಕಾಲ ಗಾಯಕರು ಅಕ್ಷರಶಃ ಸಂಗೀತದ ರಸದೌತಣ ಉಣ ಬಡಿಸಿದರು. ಬಿಎಂಶ್ರೀ ಅವರ ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು, ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಸಿದ್ದಯ್ಯ ಪುರಾಣಿಕರ ಹೊತ್ತಿತೋ ಹೊತ್ತಿತೋ ಕನ್ನಡದ ದೀಪ, ಜಿಎಸ್‌ಎಸ್‌ರ ಉಡುಗಣ ವೇಷ್ಟಿ-ಚಂದ್ರಶೋಭಿತ, ಚನ್ನವೀರ ಕಣವಿ ಹೂ ಹೊರಳುವವು ಸೂರ್ಯನ ಕಡೆಗೆ, ಆನಂದ ಕಂದ ಪಂಚಮಿ ಹಬ್ಬ, ನಾ ಸಂತಗಿ ಹೋಗೀನಿ, ಆಕಿ ತಂದಿದ್ದಳು ಬೆಣ್ಣಿ, ಕುವೆಂಪು ರಚನೆಯ ಅನಂತದಿಂ, ಜಿ.ಪಿ.ರಾಜರತ್ನಂ ಅವರ ಬ್ರಹ್ಮ ನಿಂಗೆ ಜೋಡಿಸ್ತೀನಿ ಹೆಂಡ ಮುಟ್ಟಿದ ಕೈನಾ, ಕೆ.ಎಸ್.ನಿಸಾರ್ ಅಹಮದ್ ಜೋಗದ ಸಿರಿ ಬೆಳಕಿನಲಿ, ದ.ರಾ.ಬೇಂದ್ರೆಯ ಇಳಿದು ಬಾ ತಾಯೆ ಮೊದಲಾದ ಗೀತೆಗಳು ನೆರೆದಿದ್ದ ಸಾವಿರಾರು ಮಂದಿಯನ್ನು ತಲೆದೂಗುವಂತೆ ಮಾಡಿದವು. ಕಾವ್ಯ, ಕವಿತೆಗಳನ್ನು ಸುಲಲಿತ, ಸರಳ, ಜನ ಸಾಮಾನ್ಯರಿಗೆ ತಲುಪೋದು ಕಷ್ಟ, ಆದರೆ ಸುಗಮ ಸಂಗೀತಗಾರರಿಂದ ಕಾವ್ಯಗಳ ಭಾವಕ್ಕೆ ತಕ್ಕಂತೆ ಹಾಡಿಸಿ ಜನ ಸಾಮಾನ್ಯರಿಗೆ ಮುಟ್ಟುವಂತೆ ಮಾಡಿದ್ದು ಸಂಗೀತ ಸಂಯೋಜಕರು. ಸಂಗೀತವು ಹಲವು ಪ್ರಾಕಾರಗಳನ್ನು ಹೊಂದಿದೆ. ಆದರೆ ಹೆಚ್ಚು ಹಿತವಾಗಿರುವುದು ಸುಗಮ ಸಂಗೀತ. ನವೋದಯ ಸಾಹಿತ್ಯ ಉದಯದ ನಂತರ ಬಿ.ಎಂ.ಶ್ರೀಕಂಠಯ್ಯ ಅವರಿಂದ ಮೊದಲು ಗೊಂಡು ಸಾವಿರಾರು ಕವಿಗಳು, ಪ್ರಕೃತಿ, ಭಾವನೆ, ಆಕಾಶ, ಮುಗಿಲು, ನೀರು, ಪ್ರಕೃತಿ, ಹಸಿರು, ನಾಡು-ನುಡಿ ಕುರಿತು ರಚಿಸಿದ ಗೀತೆಗಳಿಗೆ ಮಾಧುರ್ಯ ರೂಪ ನೀಡಿದ ಖ್ಯಾತ ಸಂಗೀತ ಸಂಯೋಜಕರಾದ ಮೈಸೂರು ಅನಂತಸ್ವಾಮಿ, ಪದ್ಮಚರಣ್, ಬಾಳಪ್ಪ ಹುಕ್ಕೇರಿ, ಪಿ.ಕಾಳಿಂಗರಾಯರು, ಸಿ.ಅಶ್ವಥ್ ಮೊದಲಾದವರು ತಮ್ಮ ಗಾಯನದ ಮೂಲಕ ಕೇಳುಗರನ್ನು ಆಹ್ಲಾದಗೊಳಿಸಿದರು ಎಂದು ಶ್ರೀನಿವಾಸ್ ಮೂರ್ತಿ ವಿವರಣೆ ನೀಡಿದರು.ಇಬ್ಬರು ಗಾಯಕರು ಹಾಡಿದ ಹಲವು ಗೀತೆಗಳು ಸಂಗೀತ ಸುಧೆಯನ್ನೇ ಹರಿಸಿದವು. ಹಾಡಿಗೆ ತಕ್ಕಂತೆ ಕೃಷ್ಣ ಉಡುಪ ಅವರ ಕೀಬೋರ್ಡ್ ಮತ್ತು ಎಂ.ಸಿ.ಶ್ರೀನಿವಾಸ್ ಅವರ ತಬಲ ವಾದನ ಸಾಥ್‌ ನೀಡಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ