ಕಾರ್ಮಿಕರ ಕಾರ್ಡ್‌ ದುರುಪಯೋಗವಾಗದಂತೆ ಕ್ರಮವಹಿಸಿ

KannadaprabhaNewsNetwork |  
Published : Jan 07, 2025, 12:16 AM IST
ಪೋಟೋ: 06ಎಸ್‌ಎಂಜಿಕೆಪಿ01ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಮಿಕ ಇಲಾಖೆಯ ವತಿಯಿಂದ ಅನುಷ್ಠಾನದಲ್ಲಿರುವ ಯೋಜನೆಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಜಿಲ್ಲೆಯ ಕೈಗಾರಿಕಾ ಘಟಕಗಳಲ್ಲಿ ಕಾಯಂ ಹಾಗೂ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕುರಿತು ವಿಸ್ತೃತ ಮಾಹಿತಿಯನ್ನು ಆಯಾ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹೊಂದಿರಬೇಕು ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು.

ಶಿವಮೊಗ್ಗ: ಜಿಲ್ಲೆಯ ಕೈಗಾರಿಕಾ ಘಟಕಗಳಲ್ಲಿ ಕಾಯಂ ಹಾಗೂ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕುರಿತು ವಿಸ್ತೃತ ಮಾಹಿತಿಯನ್ನು ಆಯಾ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹೊಂದಿರಬೇಕು ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು.ಇಲ್ಲಿನ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್‌ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಮಿಕ ಇಲಾಖೆಯ ವತಿಯಿಂದ ಅನುಷ್ಠಾನದಲ್ಲಿರುವ ಯೋಜನೆಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಈಗಾಗಲೇ 58 ಲಕ್ಷ ಕಾರ್ಮಿಕರಿಗೆ ಕಾರ್ಮಿಕ ನೋಂದಣಿ ಕಾರ್ಡುಗಳನ್ನು ವಿತರಿಸಲಾಗಿದೆ. ಕಳೆದ 3-4 ವರ್ಷಗಳಲ್ಲಿ ನೋಂದಾಣಿಯಾಗಿರುವ ಕಾರ್ಮಿಕರ ಸಂಖ್ಯೆಯ ಹೆಚ್ಚಳವಾಗಿರುವುದನ್ನು ಗಮನಿಸಿದಾಗ ಅನರ್ಹರೂ ಈ ಪಟ್ಟಿಯಲ್ಲಿ ಸೇರಿರಬಹುದಾದ ಆತಂಕವಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ, ಕಾರ್ಮಿಕ ಕಾರ್ಡನ್ನು ವಿತರಿಸುವಲ್ಲಿ ಅಧಿಕಾರಿಗಳು ಅನರ್ಹರಿಗೂ ಕಾರ್ಡ್‍ನ್ನು ನೀಡಲು ಮುಂದಾದಲ್ಲಿ ಅಂತಹ ಅಧಿಕಾರಿ-ಸಿಬ್ಬಂಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಮುಂದಿನ ಎಲ್ಲಾ ಅಕ್ರಮಗಳಿಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಸಿದರು.ಕೈಗಾರಿಕಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಈಗಾಗಲೇ ಸರ್ಕಾರ ನಿಗದಿಪಡಿಸಿರುವ ಮೊತ್ತ ಹಾಗೂ ಇತರೆ ಸೌಲಭ್ಯಗಳನ್ನು ಸಂಸ್ಥೆಯ ಮುಖ್ಯಸ್ಥರು ಪಾವತಿಸಬೇಕು. ನಿಯಮಾನುಸಾರ ನಿಗದಿಪಡಿಸಿದ ವೇತನ-ಭತ್ಯೆಗಳನ್ನು ಪಾವತಿಸದಿರುವ ಸಂಸ್ಥೆಗಳಿಗೆ ನೋಟಿಸ್ ನೀಡಿ, ನೀಡಿರುವ ಪರವಾನಿಗೆಯನ್ನು ರದ್ದುಪಡಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಬಾಲಕಾರ್ಮಿಕ ಕಾರ್ಯಕ್ರಮಗಳು ಮತ್ತು ಕಾರ್ಮಿಕರಿಗೆ ದೊರಕಿಸಿಕೊಡಲಾಗಿರುವ ಗ್ರಾಚ್ಯುವಿಟಿ ಮತ್ತಿತರ ಸೌಲಭ್ಯಗಳ ಕುರಿತು ಪ್ರತಿ ಮಾಹೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಶೀಲಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ ನೋಂದಾಯಿತ ಕಾರ್ಮಿಕರ 38,190 ಮಕ್ಕಳಿಗೆ 8.93 ಕೋಟಿ ರು. ಮೊತ್ತದ ವಿದ್ಯಾರ್ಥಿವೇತನ ವಿತರಿಸಿ, ಕಾರ್ಮಿಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಎಸ್ಸಿ, ಎಸ್ಟಿ ಅಭ್ಯರ್ಥಿಗಳ ಮಾಲೀಕತ್ವದ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಪ್ರತಿ ಮಾಹೆ 7,000 ರು.ಗಳ ಸಹಾಯಧನವನ್ನು ನೀಡಲಾಗುತ್ತಿದೆ. ಅಲ್ಲದೇ ಅದೇ ಕೈಗಾರಿಕೆಯಲ್ಲಿ ಖಾಯಂ ನೌಕರನಾಗಿ ನೇಮಕಗೊಂಡಿದ್ದಲ್ಲಿ ಅವರ ಕಾರ್ಯನಿರ್ವಹಣಾ ಅವಧಿಯ ಪಿ.ಎಫ್ ಸೇರಿದಂತೆ ಇತರೆ ಸೌಲಭ್ಯಗಳ ಶುಲ್ಕಗಳನ್ನು ಇಲಾಖೆಯಿಂದಲೇ ಭರಿಸಲಾಗುವುದು ಎಂದು ತಿಳಿಸಿದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿವಮೊಗ್ಗ ನಗರದ ಹೊರವಲಯದಲ್ಲಿ ಕಾರ್ಮಿಕರ ಹಿತಸುಖ ಕಾಯುವ ನಿಟ್ಟಿನಲ್ಲಿ 100 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಇಎಸ್‍ಐ, ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಿದೆ. ಈ ಕಟ್ಟಡ ಕಾಮಗಾರಿಯು ತ್ವರಿತವಾಗಿ ಪೂರ್ಣಗೊಳ್ಳಲು ಅಗತ್ಯ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಕಟ್ಟಡದ ನಿರ್ವಹಣೆ ಕೇಂದ್ರದಿಂದಲೇ ನಡೆಸುವಂತೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಕೋರಿಕೆ ಪತ್ರವನ್ನು ಸಲ್ಲಿಸುವಂತೆ ಮನವಿ ಮಾಡಿದರು.ಅಲ್ಲದೇ ಅತ್ಯಂತ ಹೆಚ್ಚಿನ ಸಂಖ್ಯೆಯ ಕಾರ್ಮಿಕರಿರುವ ಭದ್ರಾವತಿ ಪಟ್ಟಣದಲ್ಲಿ 5 ಕೋಟಿ ರು.ಗಳ ವೆಚ್ವದಲ್ಲಿ ಕಾರ್ಮಿಕ ಭವನ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಿಕೊಡಬೇಕು. ಜಿಲ್ಲೆಯಲ್ಲಿ ದಿನೇದಿನೇ ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬರುತ್ತಿದ್ದು, ಕಾರ್ಮಿಕರ ಮತ್ತು ಅವರ ಕುಟುಂಬದ ಅವಲಂಬಿತರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ವೈದ್ಯರ ಸಂಖ್ಯೆ ಹೆಚ್ಚಿಸಬೇಕು. ಜಿಲ್ಲೆಯ ಶಿಕಾರಿಪುರ ಮತ್ತು ಸಾಗರ ಪಟ್ಟಣಗಳಲ್ಲಿಯೂ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿದ್ದು, ಅಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಅಲ್ಲಿಯೂ ಕಾರ್ಮಿಕ ಕ್ಷೇಮಕ್ಕಾಗಿ ಪ್ರತ್ಯೇಕ ಆಸ್ಪತ್ರೆಗಳನ್ನು ತೆರೆಯಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಿದರು.ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕಾರ್ಮಿಕರ ಸಂಖ್ಯೆಗನುಗುಣವಾಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ನಿರೀಕ್ಷಕರ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ಕನಿಷ್ಠ ತಾಲೂಕಿಗೆ ಓರ್ವರಂತೆ ಆದರೂ ಕಾರ್ಮಿಕ ನಿರೀಕ್ಷಕರನ್ನು ನೇಮಿಸುವಂತೆ ಅವರು ಇದೇ ಸಂದರ್ಭದಲ್ಲಿ ಸಚಿವರಿಗೆ ಒತ್ತಾಯಿಸಿದರು. ಸಭೆಯಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಶಾರದಾ ಪೂರ್ಯಾನಾಯ್ಕ್, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಬಲ್ಕಿಶ್‍ಬಾನು, ಡಾ.ಧನಂಜಯ ಸರ್ಜಿ, ಭೋವಿ ಸಮಾಜದ ಅಧ್ಯಕ್ಷ ರವಿಕುಮಾರ್, ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ, ಕಟ್ಟಡ ಕಾರ್ಮಿಕ ಮತ್ತು ಇತರೆ ಕಾರ್ಮಿಕ ನಿರ್ಮಾಣ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಸೇರಿದಂತೆ ಇಲಾಖೆಯ ಜಂಟಿ ಕಾರ್ಮಿಕ ಆಯುಕ್ತ, ಉಪ ಕಾರ್ಮಿಕ ಆಯುಕ್ತರು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರುಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಸಭೆ ಆರಂಭಕ್ಕೂ ಮುನ್ನ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಸೌಲಭ್ಯದ ಕಿಟ್ಟುಗಳನ್ನು, ಸೌಲಭ್ಯದ ಚೆಕ್ಕನ್ನು ಸಚಿವರು ಹಾಗೂ ಗಣ್ಯರು ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ