ಕನ್ನಡಪ್ರಭ ವಾರ್ತೆ ಮಂಡ್ಯ
ಸೋಮವಾರ ನಗರದ ಹೊರ ವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಹಿತಿಗಳ ಸಭೆಯಲ್ಲಿ ಸಮ್ಮೇಳನ ಯಾವ ರೀತಿ ನಡೆಯಬೇಕು, ಗೋಷ್ಠಿಗಳ ವಿಚಾರಗಳು ಹೇಗಿರಬೇಕು, ಸಮ್ಮೇಳನ ನಗರದ ಒಳಗೆ-ಹೊರಗೆ ನಡೆಯುವುದರಿಂದ ಆಗುವ ಸಾಧಕ-ಬಾಧಕಗಳೇನು, ಸಮ್ಮೇಳನದಲ್ಲಿ ಸಾಹಿತಿಗಳಾದವರ ಜವಾಬ್ದಾರಿಗಳೇನು, ಸಮ್ಮೇಳನದ ರೂಪು-ರೇಷೆಗಳು ಹೇಗಿರಬೇಕು, ಆಕರ್ಷಣೆಗೆ ಏನೇನು ಮಾಡಬೇಕು ಎಂಬೆಲ್ಲಾ ವಿಚಾರಗಳಿಗಿಂತ ಹೆಚ್ಚಾಗಿ ಸಾಹಿತ್ಯ ಪರಿಷತ್ ಅಧ್ಯಕ್ಷರು ಮತ್ತು ಸಾಹಿತಿಗಳ ನಡುವಿನ ಭಿನ್ನಮತ ಮತ್ತೊಮ್ಮೆ ಸ್ಫೋಟಗೊಂಡಿತು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಹಾಗೂ ಜಿಲ್ಲೆಯ ಸಾಹಿತಿಗಳ ನಡುವಿನ ವಿರಸ, ಭಿನ್ನಾಭಿಪ್ರಾಯಗಳನ್ನು ದೂರ ಮಾಡುವ ವೇದಿಕೆಯಾದಂತೆ ಸಭೆ ಕಂಡು ಬಂದಿತ್ತಾದರೂ ಅಂತಿಮವಾಗಿ ಡಾ.ಮಹೇಶ್ ಜೋಶಿ ಆಡಿದ ಮಾತುಗಳು ಹೊಳೆಯಲ್ಲಿ ಹುಣಸೆಹಣ್ಣನ್ನು ತೊಳೆದಂತೆ ಮಾಡಿತು.
ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಅವರು ಸಭೆಯ ಕೊನೆಯಲ್ಲಿ ಆಗಮಿಸಿದರೂ ಮೌಲ್ಯಯುತ ಮಾತುಗಳಿಂದ ಎಲ್ಲರ ಗಮನ ಸೆಳೆದರು. ಸಾಹಿತಿಗಳಾದವರು ಸಾಹಿತ್ಯದ ಪರಿಭಾಷೆಯನ್ನು ಮೀರದೆ ವಿನಯದ ಪರಿಧಿಯೊಳಗೆ ಮಾತನಾಡಬೇಕು. ನಮ್ಮೊಳಗೆ ಏನೇ ಭಿನ್ನಮತಗಳಿದ್ದರೂ ಹೊರಗಿನ ಜನರಿಗೆ ಅದು ಕಾಣಿಸದಂತಿರಬೇಕು ಎಂಬ ಮಾತುಗಳ ನಡುವೆಯೂ ಸಭೆ ಅಪಸ್ವರ, ಗದ್ದಲದಲ್ಲಿ ಕೊನೆಗೊಳ್ಳುವಂತೆ ಆಗಿದ್ದು ವಿಪರ್ಯಾಸದ ಸಂಗತಿ.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಮಾತನ್ನು ಮೊಟಕುಗೊಳಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಾಹಿತಿಗಳ ಸಭೆಗೆ ತೆರೆ ಎಳೆಯುವ ಮೂಲಕ ಮಾತುಗಳು ಅತಿರೇಕಕ್ಕೆ ತಲುಪದಂತೆ ತಡೆಯುವಲ್ಲಿ ಯಶಸ್ವಿಯಾದರು.ಯಾರ್ಯಾರು ಏನೇನು ಹೇಳಿದರು?
- ನರಹಳ್ಳಿ ಬಾಲಸುಬ್ರಹ್ಮಣ್ಯ, ಹಿರಿಯ ಸಾಹಿತಿಸಾಹಿತಿಗಳಾದವರು ರಾಜಕೀಯದ ಪರಿಭಾಷೆಗೆ ಹೋಗಬಾರದು. ನಮ್ಮೊಳಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಮಾತುಗಳು ವಿನಯದ ಪರಿಧಿಯನ್ನು ದಾಟಬಾರದು. ಟೀಕೆಗಳು, ಸಲಹೆ, ಅಭಿಪ್ರಾಯಗಳನ್ನು ಗೌರವದಿಂದ ಸ್ವೀಕರಿಸುವ ಮುಕ್ತ ಮನಸ್ಸಿರಬೇಕು. ನಮ್ಮ ನಡುವೆ ಏನೇ ವೈರುದ್ಯಗಳಿದ್ದರೂ ಹೊರಗಿನ ಪ್ರಪಂಚಕ್ಕೆ ಕಾಣಿಸಬಾರದು. ಸಾಹಿತ್ಯ ಸಮ್ಮೇಳನಗಳು ಸಾಹಿತ್ಯ ಪರಿಷತ್ತಿನ ವ್ಯಾಪ್ತಿಯೊಳಗೆ ನಡೆಯುತ್ತಿದ್ದ ಕಾಲವಿತ್ತು. ಈಗ ಸರ್ಕಾರ ಸಮ್ಮೇಳನಗಳನ್ನು ನಡೆಸುವ ಪರಿಸ್ಥಿತಿಗೆ ನಾವೇ ತಂದುಕೊಂಡಿದ್ದೇವೆ. ಮತ್ತೆ ಅದನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲಾಗುವುದಿಲ್ಲ. ಆದರೆ, ಸಾಹಿತಿಗಳು ನಮ್ಮ ಸಾಹಿತ್ಯದ ಪರಿಭಾಷೆಯನ್ನು ಉಳಿಸಿಕೊಂಡಿದ್ದೇವೆ ಎನ್ನುವುದನ್ನು ತೋರ್ಪಡಿಸಬೇಕಿದೆ. ಇಲ್ಲದಿದ್ದರೆ ಸಾಹಿತಿಗಳಿಗೂ ರಾಜಕಾರಣಿಗಳಿಗೂ ವ್ಯತ್ಯಾಸವೇ ಇರುವುದಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ನಾವು ಎಷ್ಟು ಜನಕ್ಕೆ ಊಟ ಹಾಕಿದೆವು, ಎಷ್ಟು ದೂರ ಚಪ್ಪರ ಹಾಕಿದೆವು ಎನ್ನುವುದು ಮುಖ್ಯವಾಗಬಾರದು. ಎಷ್ಟು ಸುಸಂಸ್ಕೃತವಾಗಿ ನಡೆಯಿತು. ಭಿನ್ನಾಭಿಪ್ರಾಯಗಳಿಲ್ಲದೆ ಅಚ್ಚುಕಟ್ಟಾಗಿ ನಡೆಸಿ ಯಶಸ್ವಿಗೊಳಿಸಿದ ಸಂದೇಶ ರಾಜ್ಯಕ್ಕೆ ರವಾನೆಯಾಗಬೇಕು.
- ಪ್ರೊ.ಬಿ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘಮಾತುಗಳು ಕಠಿಣವಾಗಬಾರದು, ಧೋರಣೆಗಳು ಬದಲಾಗಬೇಕು. ಒಂದು ಸ್ಥಾನದಲ್ಲಿದ್ದ ಮಾತ್ರಕ್ಕೆ ಎಲ್ಲರೂ ನನ್ನಂತೆಯೇ ನಡೆಯಬೇಕು ಎಂಬ ಮನಸ್ಥಿತಿ ಬದಲಾಗಬೇಕು. ಎಲ್ಲರನ್ನೂ ಸೌಜನ್ಯದಿಂದ ನಡೆಸಿಕೊಂಡು, ಗೌರವಯುತವಾಗಿ ಮುನ್ನಡೆಸಿದಾಗ ಎಲ್ಲರಿಂದಲೂ ಎಲ್ಲ ರೀತಿಯ ಸಹಕಾರಗಳು ದೊರೆಯುತ್ತವೆ. ಯಾರೋ ಒಬ್ಬರಿಂದ ಸಮ್ಮೇಳನ ಯಶಸ್ವಿಯಾಗುವುದಿಲ್ಲ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಮ್ಮೇಳನ ಯಶಸ್ಸು, ಸಾರ್ಥಕತೆ ಪಡೆಯುತ್ತದೆ.
ಪತ್ರಕರ್ತರ ಸಂಘದವರು ಸಂವಾದಕ್ಕೆ ಕರೆದಾಗ ನಾನು ಹೋಗಿ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಡಾ.ಜೋಶಿ ಎಂದು ಕರೆದಿದ್ದೇನೆ. ಅಷ್ಟಕ್ಕೇ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರೆ ಏನರ್ಥ. ನಾನೇನು ತಪ್ಪು ಮಾತನಾಡಿದ್ದೇನೆ. ನಮಗೂ ಗೌರವವಿರುವುದಿಲ್ಲವೇ?
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರೊ.ಕೃಷ್ಣೇಗೌಡರ ಮಾತಿನ ಬಳಿಕ ಕೊನೆಯಲ್ಲಿ ಮಾತಿಗಿಳಿದ ಡಾ.ಮಹೇಶ್ ಜೋಶಿ ಅವರು, ನನಗೂ ಮಂಡ್ಯ ಮೇಲೆ ಅಪಾರ ಗೌರವವಿದೆ. ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿನಂತೆ ಸಾಹಿತ್ಯ ಸಮ್ಮೇಳನವನ್ನು ಮಂಡ್ಯಕ್ಕೆ ತಂದಿದ್ದೇನೆ. ಚಲುವರಾಯಸ್ವಾಮಿ ಅವರ ಮತ್ತು ನನ್ನ ಸ್ನೇಹ ೩೦ ವರ್ಷಗಳಷ್ಟು ಹಳೆಯದು. ಅವರು ಮಂತ್ರಿಯಾದಾಗ ನಾನೇ ಅವರ ಮನೆಗೆ ಹೋಗಿ ಸ್ವಾಗತಿಸಿದ್ದೇನೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮುಖ್ಯಮಂತ್ರಿಗಳ ಮನೆಗೇ ಹೋಗಿರಲಿಲ್ಲ. ಮುಖ್ಯಮಂತ್ರಿಗಳೇ ಕಾರು ಕೊಟ್ಟು ಕರೆಸಿಕೊಳ್ಳುತ್ತಿದ್ದರು ಎಂದು ನಿಜಲಿಂಗಪ್ಪ, ದೇವರಾಜ ಅರಸು ಕಾಲದ ಅಧ್ಯಕ್ಷರನ್ನು ನೆನಪಿಸಿಕೊಂಡು, ಮಂಡ್ಯಕ್ಕೆ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ ತರುವ ಬಗ್ಗೆ ಮಾತನಾಡುವಾಗ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಸೇರಿದಂತೆ ಹಲವರು ಈ ಮಾತುಗಳು ಇಲ್ಲಿ ಅಪ್ರಸ್ತುತ ಎಂದು ಹೇಳಿ ಅಡ್ಡಿಪಡಿಸಿದರು.
ಕನ್ನಡಪ್ರಭ ವಾರ್ತೆ, ಮಂಡ್ಯ
ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. ನಾನೇ ನಿಭಾಯಿಸುತ್ತೇನೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಏನೇ ಮಾತನಾಡಿದ್ದರೂ ಎಲ್ಲವೂ ಕಾರ್ಯರೂಪಕ್ಕೆ ಬರುವುದಿಲ್ಲ. ಕಾರ್ಯಕಾರಿ ಸಮಿತಿಯಲ್ಲಿ ಆಗುವ ತೀರ್ಮಾನವೇ ಅಂತಿಮ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಾಹಿತಿಗಳ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮಾತನಾಡಿ, ಅಧ್ಯಕ್ಷರು ಕೆಲವೊಂದು ವಿಷಯಗಳನ್ನು ಪ್ರಸ್ತ್ತಾಪಿಸುವ ಅವಶ್ಯಕತೆ ಇರಲಿಲ್ಲ. ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಮಾಡುವುದ ಪರಂಪರಾನುಗತವಾಗಿ ಬೆಳೆದುಬಂದಿದೆ. ಅದನ್ನು ಮೊಟಕುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಯಾರನ್ನೂ ದ್ವೇಷ ಮಾಡುವುದಿಲ್ಲ. ಬೇರೆಯವರನ್ನು ಟೀಕಿಸುವ ಸಂಸ್ಕೃತಿಯೂ ನನ್ನದಲ್ಲ. ಕಠಿಣವಾಗಿ, ಮೃದುವಾಗಿ ಹೇಳಿದಾಗಲೂ ಒಂ ದೇ ರೀತಿಯಲ್ಲಿ ಸ್ವೀಕರಿಸುವ ಮನೋಭಾವ ನನ್ನದು. ಅದರಂತೆ ನಿಮ್ಮೆಲ್ಲರ ಸಲಹೆ-ಸಹಕಾರವನ್ನು ಮುಕ್ತವಾಗಿ ಸ್ವೀಕರಿಸಿದ್ದೇನೆ. ಅವೆಲ್ಲವನ್ನೂ ಪ್ರಾಮಾಣಿಕವಾಗಿ ಜಾರಿಗೊಳಿಸಲು ಶ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.ನಾಲ್ವಡಿ ಪ್ರತಿಷ್ಠಾನ ಮತ್ತು ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದೇನೆ. ಅದು ಕೂಡ ಈಡೇರಲಿದೆ. ಎಲ್ಲವೂ ಒಂದೇ ಬಾರಿಗೆ ಆಗುವುದಿಲ್ಲ. ನಿಂತಿದ್ದ ಮೈಷುಗರ್‌ಗೆ ಚಾಲನೆ ದೊರಕಿಸಿದ್ದೇವೆ. ಸ್ವಂತ ಹಣದಿಂದ ನಡೆಯುವಂತೆ ಮಾಡಿದ್ದೇವೆ. ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ. ಮೈಷುಗರ್ ಪುನಶ್ಚೇತನದ ಪ್ರಕ್ರಿಯೆಯೂ ಕಾರ್ಯರೂಪದಲ್ಲಿದೆ. ಅಭಿವೃದ್ಧಿ ಎನ್ನುವುದು ನಿರಂತರವಾಗಿರುತ್ತದೆ. ಅದಕ್ಕೂ ಸಮ್ಮೇಳನಕ್ಕೂ ಸಂಬಂಧವಿಲ್ಲ ಎಂದು ನೇರವಾಗಿ ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಶೇಖ್ ತನ್ವೀರ್ ಆಸಿಫ್, ವಿಧಾನಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಸಾಹಿತ್ಯ ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ ಇತರರಿದ್ದರು.