ಗಂಗಾವತಿ: ಕನ್ನಡ ಮತ್ತು ಸಾಹಿತ್ಯ ಉಳಿಯಬೇಕು ಎಂದರೆ ಕೇವಲ ಪರಿಷತ್, ಸರ್ಕಾರ ಪ್ರಯತ್ನ ಮಾಡಿದರೆ ಸಾಲದು. ಬದಲಿಗೆ ಜನರ ಸಹಕಾರದಿಂದ ಮಾತ್ರ ಕನ್ನಡ ಉಳಿಯಲು ಸಾಹಿತ್ಯ ಸಂರಕ್ಷಣ ಸಾಧ್ಯ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾರ್ವಜನಿಕರು ಸಹಕಾರ ನೀಡಿದರೆ ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳೆಯಲು ಸಾಧ್ಯವಾಗುತ್ತದೆ. ಕಸಾಪ ಶಾಲಾ-ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಎಲ್ಇ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಹೊಸ್ಕೇರಿ ಗಿರಿಯಪ್ಪ ಮಾತನಾಡಿ, ಕನ್ನಡ ಉಳಿದರೆ ಮಾತ್ರ ನಮ್ಮ ಆಸ್ಮಿತೆ ಇರಲಿದೆ. ಈ ನಿಟ್ಟಿನಲ್ಲಿ ನಾವು ಪ್ರತಿ ಸಾಹಿತ್ಯದ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಲೆ ಬಂದಿದ್ದೇವೆ. ಇತರೆ ಶಿಕ್ಷಣ ಸಂಸ್ಥೆಗಳು ಮುಂದೆ ಬಂದು ಕನ್ನಡ ಕಾರ್ಯಕ್ರಮಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪದ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ವರ್ಷದುದ್ದಕ್ಕೂ ಕನ್ನಡದ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಭಾಷೆಗೆ ಆದ್ಯತೆ ನೀಡಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಕಸಾಪದ ತಾಲೂಕಾಧ್ಯಕ್ಷ ರುದ್ರೇಶ ಆರಾಳ ಮಾತನಾಡಿದರು. ಕೆಎಲ್ಇ ಕಾಲೇಜಿನ ಪ್ರಾಂಶುಪಾಲೆ ಡಾ. ಮಾನಸ ಡಿ.ಎ.ಕಸಾಪದ ಜಿಲ್ಲಾ ಕೋಶಾಧಿಕಾರಿ ರಮೇಶ ಕುಲಕರ್ಣಿಲ್ಲಿದ್ದರು.
ವಚನ ಸಾಹಿತ್ಯದಲ್ಲಿ ಸ್ತ್ರಿ ಸಂವೇದನೆ ಎಂಬ ವಿಷಯದ ಕುರಿತು ಸಾಹಿತಿ ಅರಳಿ ನಾಗಭೂಷಣ, ಶೋಷಣೆ ರಹಿತ ಸಮಾಜ ನಿರ್ಮಾಣದಲ್ಲಿ ಬಸವಣ್ಣನ ಪಾತ್ರ ಎಂಬ ವಿಷಯದ ಬಗ್ಗೆ ಹಿರಿಯ ಉಪನ್ಯಾಸಕ ಎ.ಕೆ.ಮಹೇಶ ಕುಮಾರ ಹಾಗೂ ಜಾನಪದ ಸಾಹಿತ್ಯದ ಬಗ್ಗೆ ಜಾನಪದ ಹಾಡುಗಾರ ಸುಖಮುನಿ ಉಪನ್ಯಾಸ ನೀಡಿದರು.