‘ಭಾವ ಸಂಗಮ’ ಕವನ ಸಂಕಲನ ಲೋಕಾರ್ಪಣೆ ಕಾರ್‍ಯಕ್ರಮ
ಕವಿಗಳಾದವರು ಸಾಹಿತ್ಯ, ಕವಿತೆ ಮತ್ತು ಕತೆಗಳನ್ನು ಬರೆಯಬಹುದು. ಆದರೆ ಅವುಗಳನ್ನು ಓದುವ ಸಹೃದಯರ ಕೊರತೆಯಾದರೆ ಸಾಹಿತ್ಯ ವ್ಯರ್ಥವಾಗುತ್ತದೆ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಸಮೀಪದ ಸಾಣೇಹಳ್ಳಿ ಶ್ರೀಮಠದ ಲತಾ ಮಂಟಪದಲ್ಲಿ ಲತಾ ಧರಣೇಶ್ ಅವರ ‘ಭಾವ ಸಂಗಮ’ ಕವನ ಸಂಕಲನ ಲೋಕಾರ್ಪಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.೧೨ನೆಯ ಶತಮಾನದ ಶರಣರು ಯಾವುದೇ ಪದವಿಯನ್ನು ಪಡೆದವರಲ್ಲ. ಭಾವ ಶ್ರೀಮಂತಿಕೆಯನ್ನು ಬೆಳೆಸಿಕೊಂಡು ಹೃದಯ ಶ್ರೀಮಂತಿಕೆಯಿಂದ ಬದುಕನ್ನು ಕಟ್ಟಿಕೊಂಡವರು. ಮನುಷ್ಯ ಮೊದಲು ಅಂತರಂಗ ಬಹಿರಂಗ ಶುದ್ಧಿಯನ್ನು ಮಾಡಿಕೊಳ್ಳಬೇಕು. ಬಸವಣ್ಣನವರ ಸಪ್ತಸೂತ್ರಗಳಿಗನುಗುಣವಾಗಿ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಕವನ ಹೊಸ ಚಿಂತನೆಗೆ ತೊಡಗಿಸಿದರೆ ಶಕ್ತಿಯುತ ಸಾಹಿತ್ಯ ಆಗಲಿಕ್ಕೆ ಸಾಧ್ಯ ಎಂದರು.
ನಮ್ಮ ಮಕ್ಕಳಿಗೆ ಸ್ಪರ್ಧಾಮನೋಭಾವ ಬೆಳೆಸುತ್ತಿವೆಯೋ ಹೊರತು ನೈತಿಕ ನೆಲೆಗಟ್ಟಿನ ಮೇಲೆ ಶಿಕ್ಷಣ ಕೊಡುತ್ತಿಲ್ಲ. ನಮ್ಮ ಕುಟುಂಬಗಳಿಗೆ ಗೋಡೆಗಳನ್ನು ಕಟ್ಟಿಕೊಂಡು ಸ್ವಾರ್ಥಜೀವನ ನಡೆಸುತ್ತಿದ್ದೇವೆ. ಒಂದು ಕವನ ಓದುವುದಕ್ಕಿಂತ ಹಾಡಿದಾಗ ಹೊಸ ಅರ್ಥ ಬಿಚ್ಚಿಕೊಳ್ಳುವುದು ಬುದ್ಧಿವಂತಿಕೆಗಿಂತ ಹೃದಯವಂತಿಕೆಯಿಂದ ಬರೆದ ಕವನ ಮನಸ್ಸನ್ನು ಮುಟ್ಟಿ ತಟ್ಟುವುದು.
ಜೀವನದಲ್ಲಿ ಮಾಡುವ ನಾಟಕಗಳು ಅರ್ಥ ಮಾಡಿಕೊಳ್ಳಬೇಕೆಂದರೆ ರಂಗಭೂಮಿಯ ಮೇಲೆ ನಡೆಯುವ ನಾಟಕವನ್ನು ನೋಡಬೇಕು. ನವೋದಯ ಕವಿತೆಗಳು ಹಾಡುವಂಥವು. ಲತಾ ಮಕ್ಕಳ ಮನಸ್ಸಿನ ಭಾವನೆಗಳನ್ನು ಅರ್ಥೈಸಿಕೊಂಡು ಕವಿತೆಗಳನ್ನು ಬರೆದರೆ ಉತ್ತಮ ಎಂದರು.
ಅಣ್ಣೀಗೆರೆಯ ವಿರೂಪಾಕ್ಷಪ್ಪ ಸ್ವಾಗತಿಸಿದರೆ ಸುಧಾ ಎಂ ನಿರೂಪಿಸಿ ವಂದಿಸಿದರು.