ಸಾಹಿತಿಗಳು ಕೃತಿಗಳ ಮೂಲಕ ಸದಾ ಜೀವಂತ: ಡಾ. ಮಹೇಶ ಜೋಶಿ

KannadaprabhaNewsNetwork |  
Published : Oct 05, 2024, 01:35 AM IST
ಫೋಟೋಪೈಲ್- ೪ಎಸ್ಡಿಪಿ೨- ಸಿದ್ದಾಪುರದಲ್ಲಿ  ನಾಡೋಜ ಡಾ.ಮಹೇಶ ಜೋಶಿ ಹಾವಿನ ಹಂದರದಿAದ ಹೂವ ತಂದವರು ಕೃತಿ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಸಿದ್ದಾಪುರದಲ್ಲಿ ನಡೆದ ಅಪ್ರತಿಮ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನು ಓದಿದರೆ ಈ ತಾಲೂಕಿನ ಕುರಿತು ಗೌರವ ವೃದ್ಧಿಸುತ್ತದೆ.

ಸಿದ್ದಾಪುರ: ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಮೂಲಕ ಚರಿತ್ರೆಯಲ್ಲಿ ಅಜರಾಮರರಾಗಿದ್ದರೆ, ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಜೀವಂತವಾಗಿರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದರು.ಪಟ್ಟಣದ ಶಂಕರಮಠದಲ್ಲಿ ಧರ್ಮಶ್ರೀ ಫೌಂಡೇಶನ್ ಆಯೋಜಿಸಿದ್ದ ಮಗೇಗಾರಿನ ಶ್ರೀಪಾದ ಹೆಗಡೆ ರಚಿಸಿದ ಹಾವಿನ ಹಂದರದಿಂದ ಹೂವ ತಂದವರು ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿ, ಸಿದ್ದಾಪುರದಲ್ಲಿ ನಡೆದ ಅಪ್ರತಿಮ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನು ಓದಿದರೆ ಈ ತಾಲೂಕಿನ ಕುರಿತು ಗೌರವ ವೃದ್ಧಿಸುತ್ತದೆ. ಪ್ರಸ್ತುತ ಕೃತಿಯಲ್ಲಿ ಹೂವಿನಮನೆ ತಿಮ್ಮಯ್ಯ ಹೆಗಡೆಯವರ ಹೋರಾಟದ ಮಜಲುಗಳು, ಆಧ್ಯಾತ್ಮಿಕ ಹಿನ್ನೆಲೆ, ತ್ಯಾಗ ಮನೋಭಾವ, ನ್ಯಾಯದಾನದ ಪರಿ ಇವುಗಳನ್ನು ಪ್ರಾದೇಶಿಕ ನುಡಿಗಳಲ್ಲಿ, ಅಪ್ಪಟ ಹವಿಗನ್ನಡದಲ್ಲಿ ಕಟ್ಟಿಕೊಡಲಾಗಿದೆ ಎಂದರು. ಖ್ಯಾತ ಹಿರಿಯ ಸಾಹಿತಿ ಶಾ.ಮಂ. ಕೃಷ್ಣರಾವ್ ಮಾತನಾಡಿ, ಕಾದಂಬರಿ ಎನ್ನುವಂತಹುದು ಹೀಗೆ ಇರಬೇಕೆಂಬ ಚೌಕಟ್ಟನ್ನು ಹೊಂದಿಲ್ಲ. ದುರ್ಗಾಸ್ಥಮಾನದಂತಹ ಕಾದಂಬರಿಯಲ್ಲಿಯೂ ಕಾಲ್ಪನಿಕ ಸನ್ನಿವೇಶಗಳಿವೆ. ಸತ್ಯವಲ್ಲದ್ದು ಇತಿಹಾಸವಾಗಬಾರದು. ಕೃತಿಕಾರರು ವಾಸ್ತವ ಸಂಗತಿಗಳನ್ನು ಬಳಸಿಕೊಂಡು ಉತ್ತಮ ನಾಣ್ಣುಡಿಗಳನ್ನು ಪೋಣಿಸುವ ಮೂಲಕ ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ ಎಂದರು. ಶಂಕರಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ ಅವರು, ನಾವಿಂದು ಸ್ವಾತಂತ್ರ್ಯದ ಸುಖ ಅನುಭವಿಸುವಲ್ಲಿ ಹಿರಿಯರ ತ್ಯಾಗವೇ ಕಾರಣ. ಮುಂದಿನ ತಲೆಮಾರಿಗೆ ಹಿರಿಯರ ಹೋರಾಟದ ಚಿತ್ರಣ ನೀಡಲು ಪಠ್ಯಪುಸ್ತಕಗಳಲ್ಲಿ ವಿಷಯಗಳನ್ನು ಅಳವಡಿಸಬೇಕು ಎಂದರು.

ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ಗೌರವ ಉಪಸ್ಥಿತಿ ನೀಡಿ ಮಾತನಾಡಿದರು. ಆಕಾಶವಾಣಿ ಕೇಂದ್ರದ ನಿವೃತ್ತ ಅಧಿಕಾರಿ ದಿವಾಕರ ಹೆಗಡೆ ಕೆರೆಹೊಂಡ ಕೃತಿಯನ್ನು ಪರಿಚಯಿಸಿದರು. ಕೃತಿಕಾರ ಶ್ರೀಪಾದ ಹೆಗಡೆ ಕೃತಿಯನ್ನು ಹೊರತರುವಲ್ಲಿ ಮಾಹಿತಿ ನೀಡಿದವರನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಕರ ನಿರಾಕರಣೆ ಚಳವಳಿಯಲ್ಲಿ ಪ್ರಮುಖವಾಗಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಗೌರವಿಸಲಾಯಿತು.

ಕೃತಿಕಾರ ಶ್ರೀಪಾದ ಹೆಗಡೆ ಮಗೇಗಾರ ಹಾಗೂ ಸಿದ್ದಾಪುರದ ಸ್ವಾತಂತ್ರ್ಯ ಸಂಗ್ರಾಮ ಕುರಿತು ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು ಕೃತಿ ಬರೆದ ಕೆಕ್ಕಾರ ನಾಗರಾಜ ಭಟ್ಟ ಅವರನ್ನು ಧರ್ಮಶ್ರೀ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.ಅಧ್ಯಕ್ಷತೆಯನ್ನು ಧರ್ಮಶ್ರೀ ಫೌಂಡೇಶನ್ ಗೌರವಾಧ್ಯಕ್ಷ ರಾಮಮೋಹನ ಹೆಗಡೆ ವಹಿಸಿದ್ದರು. ಮುರುಘರಾಜೇಂದ್ರ ಅಂಧರ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಧರ್ಮಶ್ರೀ ಫೌಂಡೇಶನ್ ಕಾರ್ಯಾಧ್ಯಕ್ಷ ಡಾ. ರವಿ ಹೆಗಡೆ ಹೂವಿನಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇ. ಪರಮೇಶ್ವರಯ್ಯ ಕಾನಳ್ಳಿಮಠ ಸ್ವಾಗತಿಸಿದರು. ಧರ್ಮಶ್ರೀ ಫೌಂಡೇಶನ್ ಕಾರ್ಯದರ್ಶಿ ಶ್ಯಾಮಲಾ ಹೆಗಡೆ ವಂದಿಸಿದರು. ಎಂ.ಕೆ. ನಾಯ್ಕ ಹೊಸಳ್ಳಿ ಹಾಗೂ ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ