ಬೇಂದ್ರೆಯವರ ಕವಿತೆ ವಾಚನ ಹಾಗೂ ಗೀತ ಗಾಯನ ಕಾರ್ಯಕ್ರಮ ಉದ್ಘಾಟನೆ
ಬದುಕಿನುದ್ದಕ್ಕೂ ಅನುಭವಿಸಿದ ಅನೇಕ ನೋವು, ಸಂಕಟ, ತಳಮಳಗಳಿಂದ ವಿಚಲಿತರಾಗದೇ ಅದೆಲ್ಲವನ್ನು ಅರೆದುಕೊಂಡ ರಸಪಾಕದಿಂದ ಶಬ್ಧಗಳಲ್ಲಿ ಬದುಕಿನ ಮೌಲ್ಯಗಳನ್ನು ಕಟ್ಟಿಕೊಡುವ ದ.ರಾ. ಬೇಂದ್ರೆಯವರ ಸಾಹಿತ್ಯ ಅನನ್ಯವಾದುದು ಎಂದು ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ. ವಿಜಯಲಕ್ಷ್ಮೀ ತಿರ್ಲಾಪುರ ಹೇಳಿದರು.
ನಗರದ ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ನಡೆದ ದ.ರಾ. ಬೇಂದ್ರೆಯವರ ಜನ್ಮ ದಿನಾಚರಣೆ ಪ್ರಯುಕ್ತ ಕವಿ ದಿನ ಕಲ್ಪನೆ ಅಡಿಯಲ್ಲಿ ಬೇಂದ್ರೆಯವರ ಕವಿತೆ ವಾಚನ ಹಾಗೂ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬದುಕಿನ ಕುಲುಮೆಯಲ್ಲಿ ನೊಂದು ಬೆಂದಿದ್ದರೂ ಬದುಕಿನ ಭವ್ಯತೆ ಮತ್ತು ದಿವ್ಯತೆಯನ್ನು ಅನಾವರಣಗೊಳಿಸಿದರು. ಜೀವನದಲ್ಲಿ ನೊಂದು ಬೆಂದವರಿಗೆ ಬೆಳಕು ಮತ್ತು ಬೆಳದಿಂಗಳನ್ನು ನೀಡುವುದು ಬೇಂದ್ರೆಯವರ ಕಾವ್ಯಶಕ್ತಿಯಾಗಿದೆ. ಪುಸ್ತಕಗಳು ಉತ್ತಮ ಸ್ನೇಹಿತರಿದ್ದಂತೆ. ನಮ್ಮ ಬದುಕಿನ ನೋವು, ಸಂಕಟ, ಗಾಯಗಳಿಗೆ ಚಿಕಿತ್ಸೆ ನೀಡಿ ಸಂತಸ ತರುತ್ತವೆ. ಬೇಂದ್ರೆಯವರು ಸಾಹಿತ್ಯದಲ್ಲಿ ತಮ್ಮ ಬದುಕಿನ ಪ್ರತಿಯೊಂದು ಚಿತ್ರಣ ಮತ್ತು ದೃಶ್ಯಗಳನ್ನ ಕಾವ್ಯಕ್ಕೆ ತಂದು ಶಬ್ದಗಳಲ್ಲಿ ಅಡಗಿಸಿಟ್ಟ ಶಬ್ದಗಾರುಡಿಗರಾಗಿದ್ದಾರೆ ಎಂದರು.
ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿ, ಸಾಹಿತ್ಯ ಲೋಕದ ದಿಗ್ಗಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬೇಂದ್ರೆಯವರ ಬದುಕು ಅಸಹನೀಯ ಸ್ಥಿತಿಯನ್ನು ಪ್ರದರ್ಶಿಸುತ್ತಿದ್ದರೂ ನಕರಾತ್ಮಕವಾಗಿ ಯೋಚಿಸದೇ ಬೆಂಕಿಯಲ್ಲಿ ಅರಳುವ ಹೂವಿನಂತೆ ಸಕರಾತ್ಮಕವಾಗಿ ಪರಿವರ್ತಿಸಿಕೊಂಡರು. ಬದುಕಿನಲ್ಲಿ ಬೆಂದರೆ ಮಾತ್ರ ಬೇಂದ್ರೆಯಾಗಲು ಸಾಧ್ಯ ಎಂಬಂತೆ ಅವರ ಕಾವ್ಯ ಸೃಷ್ಟಿಯೇ ಅದಕ್ಕೆ ಸಾಕ್ಷಿಯಾಗಿದೆ. ಅವರನ್ನು ಮತ್ತೆ ಮತ್ತೆ ನೆನೆಯುವ ಮೂಲಕ ನೊಂದ ಮನಸ್ಸುಗಳಿಗೆ ಕಾವ್ಯದಲ್ಲಿ ಅಡಗಿರುವ ಬೇಂದ್ರೆಯವರ ಕಿವಿಮಾತು, ಪ್ರೀತಿ ಹಂಚುವ ಅವಶ್ಯಕತೆ ಇದೆ ಎಂದರು.
ಇದೇ ವೇಳೆ ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪಡೆದ ಸಮಾಜ ಸೇವಕಿ ಪರಿಮಳ ಜೈನ್, ಕುಲಸಚಿವೆ ವಿಜಯಲಕ್ಷ್ಮೀ ತಿರ್ಲಾಪುರ ಅವರನ್ನು ಗೌರವಿಸಲಾಯಿತು.