ದಿಗ್ವಿಜಯ್ ಬೋಡ್ಕೆ ಸಲಹೆ । ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ರಾಮನಗರವಿಧವೆಯರಿಗೆ, ನಿರ್ಗತಿಕ ಹೆಣ್ಣು ಮಕ್ಕಳಿಗೆ, ಶಿಕ್ಷೆಗೆ ಒಳಗಾದ ಮಹಿಳೆಯರಿಗೆ, ಅಲೆಮಾರಿ ಮಹಿಳೆಯರಿಗೆ, ಪರಿತ್ಯಕ್ತರಿಗೆ ಸ್ವಾದಾರ್ ಯೋಜನೆಯಡಿ ವಸತಿ ಸೌಲಭ್ಯ ಒದಗಿಸಿ ವೃತ್ತಿಪರ ತರಬೇತಿಯನ್ನು ನೀಡಲಾಗುವುದು ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಹೇಳಿದರು.
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಮನಗರದ ವಡೇರಹಳ್ಳಿಯ ಸ್ಪೂರ್ತಿನಗರದಲ್ಲಿ ಧ್ವನಿ ಗ್ರಾಮೀಣಾಭಿವೃದ್ಧಿ ಸ್ವಾಧಾರ ಸಂಸ್ಥೆಯಲ್ಲಿ 30 ಮಹಿಳೆಯರು ಹಾಗೂ 09 ಮಕ್ಕಳು ಒಳಗೊಂಡಂತೆ ಪ್ರಸ್ತುತ 39 ಫಲಾನುಭವಿಗಳು ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಕೌಟುಂಬಿಕ ಹಿಂಸೆಗೊಳಗಾದ ಮಹಿಳೆಯರಿಗೆ ರಕ್ಷಣೆ ನೀಡುವುದು, ಕಾನೂನು ಸೌಲಭ್ಯ ಒದಗಿಸುವುದು, ರಕ್ಷಣಾಧಿಕಾರಿಗಳ ಮೂಲಕ ದೂರು ದಾಖಲಿಸುವುದು, ನ್ಯಾಯಾಲಯದ ಮೂಲಕ ಪರಿಹಾರ ಒದಗಿಸುವುದು ಇದರ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ-2006, ನಿಯಮ-2008ರ ಪ್ರಕಾರ ಹೆಣ್ಣು ಮಕ್ಕಳಿಗೆ 18 ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿಗೆ ಮದುವೆ ಮಾಡಿದರೆ ಶಿಕ್ಷಾರ್ಹ ಅಪರಾಧ. ಈ ಕಾಯ್ದೆಯನ್ನು 2008 ಮತ್ತು 2014ರಲ್ಲಿ ತಿದ್ದುಪಡಿ ಮಾಡಿದ್ದು ಅದರನ್ವಯ ಬಾಲ್ಯವಿವಾಹ ಪ್ರಕರಣದಲ್ಲಿ ಭಾಗಿಯಾದವರಿಗೆ 2 ವರ್ಷಗಳ ಜೈಲುವಾಸ ಮತ್ತು 1 ಲಕ್ಷ ರು.ಗಳ ದಂಡ ವಿಧಿಸಬಹುದಾಗಿದೆ ಎಂದು ಹೇಳಿದರು.ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ನೊಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ನೆರವು ನೀಡಲಾಗುತ್ತಿದೆ, ಒಂದೇ ಸೂರಿನಡಿ ವೈದ್ಯಕೀಯ, ಪೊಲೀಸ್, ಕಾನೂನು ನೆರವು, ಆಪ್ತ ಸಮಾಲೋಚನೆ, ಪುನರ್ವಸತಿಯನ್ನು ಕಲ್ಪಿಸಿಕೊಡುವುದು ಸಖಿ ಕೇಂದ್ರದ ಮೂಲ ಉದ್ದೇಶವಾಗಿದೆ ಎಂದರು.
ಹಾರೋಹಳ್ಳಿಯ ರುಡ್‌ಸೆಟ್ ಕೇಂದ್ರದಿಂದ ಇನ್ನು ಮುಂದೆ ಸ್ವಾಧಾರ ಯೋಜನೆಯಡಿ ತರಬೇತಿಗಳನ್ನು ನೀಡಬೇಕು. ಕೌಟುಂಬಿಕ ಹಿಂಸೆಯಿಂದ ಬಂದ ಮಹಿಳೆಯರಿಗೆ ಆಪ್ತ ಸಮಾಲೋಚನೆಯ ಮೂಲಕ 3 ವಾರಗಳಲ್ಲಿ ಪ್ರಕರಣ ಇತ್ಯರ್ಥಪಡಿಸುವುದು. ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯುವಂತೆ ಸಹಾಯವಾಣಿ ಸಂಖ್ಯೆ 181 ಅನ್ನು ಜಿಲ್ಲೆಯಲ್ಲಿಯೇ ತೆರೆಯಲು ಕ್ರಮವಹಿಸುವಂತೆ ಹಾಗೂ ಬಾಲ್ಯ ವಿವಾಹ ಪತ್ತೆ ಹಚ್ಚಲು ಜಿಲ್ಲೆಯಲ್ಲಿರುವ ಕಲ್ಯಾಣ ಮಂಟಪಗಳು ಹಾಗೂ ನೋಂದಣಾಧಿಕಾರಿಗಳಿಂದ ಮದುವೆಯಾದ ಬಗ್ಗೆ ಮಾಹಿತಿ ಪಡೆಯಬೇಕು. ಜಿಲ್ಲೆಯಲ್ಲಿ ಒಟ್ಟು 12 ಲಕ್ಷ ಜನ ಸಂಖ್ಯೆ ಇರುವುದರಿಂದ ಬಾಲ್ಯ ವಿವಾಹ ತಡೆಗೆ ಅಧಿಕಾರಿಗಳು ಕ್ರಮವಹಿಸುವಂತೆ ದಿಗ್ವಿಜಯ್ ಬೋಡ್ಕೆ ಹೇಳಿದರು.ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಅನಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಸವರಾಜು, ವಿಕಲಚೇತನರ ಕಲ್ಯಾಣಾಧಿಕಾರಿ ನಾಗವೇಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಸನ್ನ ಕುಮಾರ್, ಸುರೇಂದ್ರ, ಕಾಂತರಾಜು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
-------------------6ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.-----------------------------