ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಮಕ್ಕಳ ಸಾಹಿತ್ಯ ಸಂಭ್ರಮ
ಕಲೆ ಮತ್ತು ಸಾಹಿತ್ಯಕ್ಕೆ ಇರುವ ದೊಡ್ಡ ಶಕ್ತಿ ಎಂದರೆ ಅದು ಎಲ್ಲವನ್ನು ಒಳಗೊಳ್ಳುವ ಗುಣ. ಅದಕ್ಕೆ ಹೆಣ್ಣು ಗಂಡು ಭೇದವಿಲ್ಲ. ಬಡವ ಶ್ರೀಮಂತ ಎನ್ನುವ ಭೇದವಿಲ್ಲ, ದೇಶ ಭಾಷೆಗಳ ಗಡಿಗಳಿಲ್ಲ ಹಾಗಾಗಿ ಕಲೆ ಮತ್ತು ಸಾಹಿತ್ಯ ಮನುಷ್ಯ ಕುಲವನ್ನು ಸೌಹಾರ್ದದ ನೆರಳಿನಲ್ಲಿ ಕಟ್ಟಬಲ್ಲ ಅತಿ ದೊಡ್ಡ ಆಕರಗಳಾಗಿವೆ. ಈ ಆಕರಗಳನ್ನು ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಬೇರೂರಿಸಿದರೆ ನೆಲಕ್ಕೊಂದು ಸಾಂಸ್ಕೃತಿಕ ಪ್ರತಿಭೆಯನ್ನು ಕೊಟ್ಟಂತಾಗುತ್ತದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು ಹೇಳಿದರು.
ನಗರದ ಭಾರತ ಜ್ಞಾನ ವಿಜ್ಞಾನ ಸಮಿತಿಯು ಎವಿಕೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಯಶಸ್ವಿಗೊಳಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು.ಫೆಬ್ರವರಿ - ಮಾರ್ಚ್ ತಿಂಗಳ ೨೦ ದಿನಗಳ ಅವಧಿಯಲ್ಲಿ ಇಡೀ ರಾಜ್ಯಾದ್ಯಂತ ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಅಧ್ಯಾಯ ರಚಿಸಲಾಯಿತು. ಅದೇ ಮಕ್ಕಳ ಸಾಹಿತ್ಯ ಸಂಭ್ರಮ. ಈ ಪರಿಕಲ್ಪನೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆರ್.ಡಿ.ಪಿ.ಆರ್. ಜತೆಗೂಡಿ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ನಡೆಸಿದ ಬೃಹತ್ ಮಕ್ಕಳ ಹಬ್ಬವೇ ಮಕ್ಕಳ ಸಾಹಿತ್ಯ ಸಂಭ್ರಮ ಎಂದು ವಿಶ್ಲೇಷಿಸಿದರು.
ಕೇವಲ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯ ಎಂಟು ತಾಲೂಕಿನ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಸುಮಾರು ೯೦೦ ಮಕ್ಕಳಿಗೆ ಸಾಹಿತ್ಯದ ಬೇರೆ ಬೇರೆ ಮಜಲುಗಳಲ್ಲಿ ಬರೆಯುವ ಕೌಶಲ್ಯ ಮೂಡಿಸಿ ಸಾಹಿತ್ಯ ಸೃಷ್ಟಿಸಲು ಕಾರಣಕರ್ತರಾದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಿದರು.ಮಕ್ಕಳ ಸಾಹಿತ್ಯ ಸಂಭ್ರಮದ ಜಿಲ್ಲಾ ಸಂಚಾಲಕಿ ಪ್ರಮೀಳಾ, ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ, ರಾಜ್ಯ ಸಂಪನ್ಮೂಲ ವ್ಯಕ್ತಿ ತನ್ವೀರ್, ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು, ಶಿಕ್ಷಕ ಬಿ.ಎಸ್.ದೇಸಾಯಿ, ಖ್ಯಾತ ಸಾಹಿತಿ, ಕಲಾವಿದ ಗ್ಯಾರಂಟಿ ರಾಮಣ್ಣ, ಎವಿಕೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಇದ್ದರು. ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಸೌಭಾಗ್ಯ ನಿರೂಪಿಸಿದರು, ಬಿಜಿವಿಎಸ್ ಹಾಸನ ತಾಲೂಕು ಕಾರ್ಯದರ್ಶಿ ವನಜಾಕ್ಷಿ ಸ್ವಾಗತಿಸಿ, ಬಿಜಿವಿಎಸ್ ತಾಲೂಕು ಅಧ್ಯಕ್ಷೆ ಆರ್. ರಾಧಾ ವಂದಿಸಿದರು.ಹಾಸನದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಯಶಸ್ವಿಗೊಳಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಅಭಿನಂದಿಸಲಾಯಿತು.