ಕೊಪ್ಪಳ: ನವಜೋಡಿಗಳು ದಾಂಪತ್ಯ ಜೀವನದಲ್ಲಿ ಬಿರುಕು ಬಾರದಂತೆ ಮಾದರಿ ಜೀವನ ನಡೆಸಬೇಕು ಎಂದು ಇಟಗಿ ಭೂ ಕೈಲಾಸ ಮೇಲುಗದ್ದುಗೆಮಠದ ಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಚಾಮಲಾಪುರ ಗ್ರಾಮದ ಶ್ರೀಕರಿಬಸವೇಶ್ವರ ಗದ್ದುಗೆಯಲ್ಲಿ ಜರುಗಿದ ೧೦ನೇ ವರ್ಷದ ಸಾಮೂಹಿಕ ವಿವಾಹ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಧರ್ಮ ಎಂಬುದು ಜನರನ್ನು ಜಾತಿಗಳ ಆಧಾರದ ಮೇಲೆ ಬೇರೆ ಮಾಡುವುದಲ್ಲ. ಧರ್ಮ ಜನರನ್ನು ಸನ್ಮಾರ್ಗದ ಹಾದಿಯಲ್ಲಿ ಸಮಾನರಾಗಿ ಬದುಕಲು ಇರುವ ದಾರಿದೀಪ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಅನ್ಯೋನ್ಯವಾಗಿ ಬಾಳಬೇಕು ಎಂದರು.ಕುಷ್ಟಗಿಯ ಮದ್ದಾನೇಶ್ವರಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜನರ ಕಷ್ಟಗಳಿಗೆ ಸ್ಪಂದಿಸಲು ಇಲ್ಲಿನ ಸಂಸಾರಿಗಳಾದವರು, ದೀಕ್ಷೆ ಪಡೆದು ಜನರಿಗಾಗಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ. ೧೨ ವರ್ಷಗಳಿಂದ ಮಠ ಕಟ್ಟಿ ಕೆಲಸ ಮಾಡುವ ಜತೆಗೆ ಹತ್ತು ವರ್ಷದಿಂದ ಜಾತ್ರೆ ಮಾಡಿ ಜನರಿಗೆ ಧರ್ಮ ಬೋಧನೆ, ಸಾಮೂಹಿಕ ವಿವಾಹ ಮಾಡುತ್ತಿದ್ದಾರೆ. ಸತ್ಕಾರ್ಯಕ್ಕೆ ಜನರು ಸಹ ಸ್ಪಂದಿಸಿದ್ದಾರೆ ಎಂದರು.
ಚಾಮಲಾಪುರದ ಕರಿಬಸವೇಶ್ವರ ಸ್ವಾಮೀಜಿಗಳ ತುಲಾಭಾರ, ೧೧ ಜೋಡಿ ಸಾಮೂಹಿಕ ವಿವಾಹ, ಕರಿಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಗಜೇಂದ್ರಗಡ ಫೈವ್ ಸ್ಟಾರ್ ಮೆಲೋಡೀಸ್ ಆರ್ಕೆಸ್ಟ್ರಾ ಅವರಿಂದ ರಸಮಂಜರಿ, ಗವಿಮಠ ವಿದ್ಯಾಪೀಠದ ಮಕ್ಕಳಿಂದ ಸಂಗೀತ ಹಾಗೂ ಗಂಗಾವತಿ ಪ್ರಾಣೇಶ ಮತ್ತು ಮಿಮಿಕ್ರಿ ನರಸಿಂಹ ಜೋಶಿ ತಂಡದವರಿಂದ ಹಾಸ್ಯ ಸಂಜೆ ಜರುಗಿದವು.ಈ ವೇಳೆ ಶಂಕ್ರಯ್ಯಜ್ಜ ಹಿರೇಮಠ, ಸಂಗನಗೌಡ್ರ ಬಿಟಿಪಾಟೀಲ, ಪೊಲೀಸ್ ಅಧಿಕಾರಿ ಕನಕಪ್ಪ ಉಪ್ಪಾರ, ಅಂದಾನಗೌಡ್ರ ಉಳ್ಳಾಗಡ್ಡಿ, ವಕೀಲ ಹನುಮಂತ ಜಾಣಗಾರ, ಹುಲಗಪ್ಪ ಹರಿಜನ, ಅಂದಪ್ಪ ಕೊಪ್ಪಳ, ಶ್ರೀನಿವಾಸಾಚಾರ ಜೋಶಿ, ಗ್ರಾಪಂ ಸದಸ್ಯರಾದ ಮರಿಯಪ್ಪ ಜಿ.ಎಚ್., ತಾಯಮ್ಮ, ಮತ್ತು ಶ್ರೀಶೈಲ ಮೇಟಿ, ಮುಖ್ಯ ಗುರು ಚಂದ್ರಕಾಂತ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಬಾಳಪ್ಪ ಹನುಮಗೌಡ್ರ, ಹನುಮೇಶರಾವ್ ದೇಶಪಾಂಡೆ, ಹನುಮಂತಪ್ಪ ಕುರಿ, ರಾಮನಗೌಡ್ರ, ಈರನಗೌಡ್ರ ಇತರರಿದ್ದರು.