ಶಿರಹಟ್ಟಿ: ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಬೆಳೆಸುವುದು ಮತ್ತು ಪ್ರಾಯೋಗಿಕ ಜ್ಞಾನದ ಅಭಿರುಚಿ ರೂಢಿಸಿಕೊಳ್ಳಲು ವಿಜ್ಞಾನ ಪ್ರದರ್ಶನ ಚಟುವಟಿಕೆಗಳು ಸಹಾಯಕವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ ಹೇಳಿದರು.
ವಿಜ್ಞಾನ ವಿಷಯಗಳ ಕಲಿಕೆಗೆ ಮಾದರಿಗಳು ಅತ್ಯವಶ್ಯಕ. ಮಾದರಿಗಳ ಮೂಲಕ ಪ್ರಯೋಗಶೀಲತೆ, ದತ್ತಾಂಶ ಶೇಖರಣೆ ವಿಶ್ಲೇಷಣೆ ಪ್ರಯೋಗದ ಕುರಿತು ನಿರ್ಧಾರಿತ ತೀರ್ಮಾನ ಕೈಗೊಳ್ಳುವುದು ಮುಂತಾದ ಕೌಶಲ್ಯ ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ವಿಜ್ಞಾನ ಮಾದರಿ ತಯಾರಿಸುವುದು ಸುಲಭದ ಮಾತಲ್ಲ. ವಿಜ್ಞಾನದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಇಂತಹ ಮಾದರಿ ಗರಚಿಸುವಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದುವಂತೆ ವೇದಿಕೆ ರೂಪಿಸಬೇಕು. ಹೊಸ ಹೊಸ ಪ್ರಯೋಗ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು. ಶಿಕ್ಷಣ ಕೇವಲ ಅಂಕ ಗಳಿಸುವಂತೆ ಆಗದೆ ಅವರ ಜ್ಞಾನಾರ್ಜನೆಗೆ ಅವಕಾಶ ನೀಡುವಂತೆ ಆಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಈಶ್ವರ ಮೆಡ್ಲೇರಿ ಮಾತನಾಡಿ, ಮಳೆ ನೀರು ಸಂಗ್ರಹ, ಸಾವಯವ ಬೆಳೆಯ ಬೀಜಗಳು, ಗೃಹಗಳ ಮಾದರಿ, ಪರಿಸರ ಸಂರಕ್ಷಣೆ ವಿಧಾನಗಳು, ದೈನಂದಿನ ಜೀವನದಲ್ಲಿ ಹೇಗೆ ಬಳಕೆಗೆ ಬರುತ್ತದೆ ಎನ್ನುವ ಕುರಿತು ಮಕ್ಕಳಿಗೆ ತಿಳಿಸಿದ ಅವರು, ವಿಜ್ಞಾನದಿಂದ ವೈಚಾರಿಕ ಮನೋಭಾವ ಬೆಳೆಯುತ್ತದೆ ಎಂದರು.
ಪ್ರತಿಯೊಬ್ಬ ಮಗುವಿನೊಳಗೆ ಸೃಜನಶೀಲತೆ ಸೂಪ್ತವಾಗಿರುತ್ತದೆ. ಅದನ್ನು ಅಭಿವ್ಯಕ್ತಗೊಳಿಸಲು ಇಂತಹ ವೇದಿಕೆ ಕಲ್ಪಿಸುವುದು ಅತ್ಯಂತ ಅಗತ್ಯ. ಮಕ್ಕಳಿಗೆ ಪಠ್ಯ ಜ್ಞಾನದ ಜತೆಗೆ ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಜ್ಞಾನ ನೀಡುವುದು ಶಿಕ್ಷಣ ಮೂಲತತ್ವವಾಗಿದೆ.