ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ಸ್ವಯಂ ಉದ್ಯೋಗಿಗಳಾಗುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಸರ್ಕಾರ ಕೂಡ ಅಗತ್ಯ ಪ್ರೋತ್ಸಾಹವನ್ನು ನೀಡುತ್ತಿದೆ. ಸಣ್ಣ ಉದ್ದಿಮೆಗಳನ್ನು ಆರಂಭಿಸಿದರೆ ಸ್ವಾವಲಂಬಿ ಜೀವನ ನಡೆಸಬಹುದು. ಯುವಜನರು ಗುಂಪುಗೂಡಿ ಸ್ಟಾರ್ಟಪ್‌ಗಳನ್ನು ತೆರೆಯಿರಿ. ಉದ್ಯೋಗಕ್ಕಾಗಿ ಇತರರನ್ನು ಅವಲಂಬಿಸುವ ಬದಲು ತಂತ್ರಜ್ಞಾನ, ಅವಕಾಶಗಳನ್ನು ಬಳಸಿಕೊಂಡು ಸ್ವ ಉದ್ಯೋಗಿಗಳಾಗಿ ಬದುಕಿನಲ್ಲಿ ಸ್ಥಿರತೆಯನ್ನು ಕಾಣಬಹುದು ಎಂದರು.
ಮೊಬೈಲ್ ತಂತ್ರಜ್ಞಾನವನ್ನು ಒಳ್ಳೆಯದಕ್ಕೂ ಬಳಸಬಹುದು, ಕೆಟ್ಟದ್ದಕ್ಕೂ ಬಳಸಬಹುದು. ಯುವಜನರು ಮೊಬೈಲ್‌ನ್ನು ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟದ್ದಕ್ಕೇ ಹೆಚ್ಚು ಬಳಸುತ್ತಿದ್ದಾರೆ. ಎಐ ಯುಗದಲ್ಲಿರುವ ಯುವಕರು ಬದುಕನ್ನು ಗಂಭೀರವಾಗಿ ಪರಿಗಣಿಸಬೇಕು. ಅವಕಾಶಗಳನ್ನು ಉಪಯೋಗಿಸಿಕೊಂಡು ಬದುಕಿನಲ್ಲಿ ಯಶಸ್ಸಿನ್ನತ್ತ ಮುನ್ನಡೆಯುವ, ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಕಡೆ ನಿಮ್ಮ ಗಮನವಿರಬೇಕು. ಉಡಾಫೆ, ಬೇಜವಾಬ್ದಾರಿಯಿಂದ ನಡೆದರೆ ಬದುಕಿನಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದರು.ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಜಗತ್ತು ತಲ್ಲಣಗೊಂಡಿದೆ. ಎಲ್ಲ ಕ್ಷೇತ್ರಗಳಲ್ಲೂ ಎಐ ನಾಗಾಲೋಟದಿಂದ ಮುನ್ನಡೆಯುತ್ತಿದೆ. ಶಿಕ್ಷಣ, ಕೈಗಾರಿಕೆ, ಹೋಟೆಲ್, ಸಾಫ್ಟ್‌ವೇರ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಎಐ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಇದರಿಂದ ಹಲವು ಕ್ಷೇತ್ರಗಳಲ್ಲಿ ಉದ್ಯೋಗಸ್ಥರ ಮೇಲೆ ತೂಗುಗತ್ತಿ ಬಿದ್ದಿದೆ ಎಂದು ಆತಂಕದಿಂದ ಹೇಳಿದರು.
ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಇಂದಿನ ಉದ್ಯೋಗ ಮೇಳದಲ್ಲಿ ೧೬೦ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿವೆ. ವಿದ್ಯಾರ್ಥಿಗಳಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಕಂಪನಿಗಳು ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡಬೇಕಿದೆ. ಓದಿರುವ, ಕೆಲಸದಲ್ಲಿ ಬದ್ಧತೆ ಇರುವ, ಪ್ರಾಮಾಣಿಕತೆ ಇರುವ ಯುವಕರು-ಯುವತಿಯರು ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರನ್ನು ಆಯ್ಕೆ ಮಾಡುವ ಮೂಲಕ ಹೆಚ್ಚು ಉದ್ಯೋಗಗಳನ್ನು ದೊರಕಿಸಿಕೊಟ್ಟು ಉದ್ಯೋಗ ಮೇಳ ಹೊಸ ದಾಖಲೆ ಸೃಷ್ಟಿಸುವಂತೆ ಮಾಡುವಂತೆ ಮನವಿ ಮಾಡಿದರು.
- ಇನ್ನೊಂದು ತಿಂಗಳಲ್ಲಿ ಅಮೆರಿಕ ಮೂಲದ ಸಾಫ್ಟ್‌ವೇರ್ ಕಂಪನಿ ಆರಂಭ
ಮುಂದಿನ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ೨೦ ಸಾವಿರ ಉದ್ಯೋಗವಕಾಶಗಳನ್ನು ಸೃಷ್ಟಿಸಲಾಗುವುದು. ಇನ್ನೊಂದು ತಿಂಗಳಲ್ಲಿ ಅಮೆರಿಕಾ ಮೂಲದ ಸಾಪ್ಟ್‌ವೇರ್ ಕಂಪನಿ ನಗರದಲ್ಲಿ ಕಾರ್ಯಾರಂಭ ಮಾಡಲಿದೆ. ಯುವಕರಿಗೆ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.
ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಅವರಿಗಾಗಿಯೇ ಉದ್ಯೋಗ ಮೇಳದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ನಿರುದ್ಯೋಗಿಗಳು ಉದ್ಯೋಗಿಗಳಾಗುವ ಮೂಲಕ ಕುಟುಂಬಕ್ಕೆ ಆಧಾರಸ್ತಂಭಗಳಾಗಬೇಕು ಎಂದು ಸಲಹೆ ನೀಡಿದರು.
- ಕನಿಷ್ಠ ೯ ಸಾವಿರ ರು.ನಿಂದ ೨೦ ಸಾವಿರ ರು.ವರೆಗೆ ವೇತನ ನಿಗದಿ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೋಮಾ. ಐಟಿಐ, ಪದವಿ ಪಡೆದಿರುವ ನಿರುದ್ಯೋಗಿಗಳಿಗೆ ಹೆಚ್ಚಿನ ಮಹತ್ವ ನೀಡಿ ಆಯೋಜಿಸಿರುವಂತೆ ಕಂಡುಬಂದಿತು.ಮೇಳದಲ್ಲಿ ಭಾಗವಹಿಸಿದ್ದ ಶೇ.೯೦ರಷ್ಟು ಕಂಪನಿಯವರು ಕನಿಷ್ಠ ೯ ರಿಂದ ೨೦ ಸಾವಿರ ರು.ವರೆಗೆ ವೇತನ ನೀಡುವ ಭರವಸೆಯೊಂದಿಗೆ ಉದ್ಯೋಗಾಕಾಂಕ್ಷಿಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದವು. ಕೆಲಸದ ಅನುಭವವಿರುವವರಿಗೆ ೩೫ ವರ್ಷ, ಕೆಲಸದ ಅನುಭವವಿಲ್ಲದವರಿಗೆ ೨೫ ವರ್ಷದವರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಕೆಲವು ಕಂಪನಿಗಳು ಸಂದರ್ಶನ ಮಾಡುತ್ತಿದ್ದವು.
ಉದ್ಯೋಗ ಮೇಳದಲ್ಲಿ ಎಂಬಿಎ, ಎಂಸಿಎ, ಬಿಬಿಎಂ ಪದವೀಧರರಿಗೆ ಬೆರಳೆಣಿಕೆಯಷ್ಟು ಅವಕಾಶಗಳಿದ್ದವು. ಕೆಲವು ಫಾರ್ಮಾಸಿಸ್ಟ್ ಕಂಪನಿಗಳು ಸೇಲ್ಸ್ ಎಕ್ಸಿಕ್ಯುಟೀವ್, ಔಷಧ ಮಳಿಗೆಗಳಲ್ಲಿ ಕೆಲಸ ಮಾಡುವವರು, ಮಾರ್ಕೆಟಿಂಗ್ ಎಕ್ಸಿಕ್ಯುಟೀವ್ ಹುದ್ದೆಗಳಿಗೆ ಸಂದರ್ಶನ ನಡೆಸುತ್ತಿದ್ದವು.ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಫೈನಾನ್ಸ್, ಷೋರೂಂ, ಫಾರ್ಮಾ, ಕಿರು ಉದ್ದಿಮೆದಾರರು, ಬಿಲ್ಡರ್ಸ್‌ಗಳು ಸೇರಿದಂತೆ ಸಣ್ಣ ಕಂಪನಿಗಳಿಂದ ಮಧ್ಯಮ ಮಟ್ಟದ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು. ಆನ್‌ಲೈನ್ ಮೂಲಕ ೬ ಸಾವಿರ ಮಂದಿ ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಸಿಕೊಂಡಿದ್ದರು. ಪ್ರತಿಯೊಂದು ತಾಲೂಕಿನವರು ಪ್ರತ್ಯೇಕವಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಹೊರಜಿಲ್ಲೆಯವರು ಪ್ರತ್ಯೇಕವಾಗಿ ನೋಂದಣಿ ಮಾಡಿಸಿಕೊಳ್ಳಬಹುದಿತ್ತು.
ಹೊರಗೆ ನೋಂದಣಿ ಮಾಡಿಸಿಕೊಂಡವರು ಅಲ್ಲಿನವರಿಂದ ಮಾಹಿತಿ ಪಡೆದು ಆ ಕೊಠಡಿಗೆ ತೆರಳಿ ಸಂದರ್ಶನದಲ್ಲಿ ತೊಡಗುತ್ತಿದ್ದರು. ಕೆಲವು ಕಂಪನಿಯವರು ಆಯ್ಕೆಯಾದವರಿಗೆ ಸ್ಥಳದಲ್ಲೇ ಅಪಾಯಿಂಟ್‌ಮೆಂಟ್ ಆರ್ಡರ್ ನೀಡಿದರೆ, ಕೆಲವು ಕಂಪನಿಗಳು ವಿಳಾಸ ಕೊಟ್ಟು ಅಲ್ಲಿಗೇ ಬರುವಂತೆ ಹೇಳಿ ಕಳುಹಿಸುತ್ತಿದ್ದುದು ಕಂಡುಬಂದಿತು.ಕಂಪನಿಗಳು ತಮಗೆ ಅಗತ್ಯವಿರುವ ಹುದ್ದೆಗಳು, ಎಲ್ಲೆಲ್ಲಿ ಕೆಲಸ ಮಾಡಲು ಅವಕಾಶಗಳಿವೆ, ವಿದ್ಯಾರ್ಹತೆ ಏನು, ಯಾವ ಕೊಠಡಿಯಲ್ಲಿ ಸಂದರ್ಶನ ನಡೆಯಲಿದೆ ಎಂಬುದನ್ನು ವಿವರವಾಗಿ ಉದ್ಯೋಗಮೇಳ ನಡೆಯುತ್ತಿರುವ ಹೊರಾವರಣದಲ್ಲಿ ಪ್ರಕಟಿಸಿದ್ದವು. ಇದನ್ನು ನೋಡಿಕೊಂಡು ಯುವಕ-ಯುವತಿಯರು ತಮಗೆ ಆಸಕ್ತಿ ಇರುವ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಉದ್ಯೋಗವನ್ನರಸಿ ಸಂದರ್ಶನಕ್ಕೆ ತೆರಳುತ್ತಿದ್ದರು.
ಜಿಲ್ಲಾ ಮಟ್ಟದ ಉದ್ಯೋಗ ಮೇಳ - 20263000ಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಕೌಂಟರ್‌ನಲ್ಲಿ ನೋಂದಾಯಿಸಿದ್ದಾರೆ.
124 ಕಂಪನಿಗಳು ಭಾಗಿಯಾಗಿರುತ್ತಾರೆಸ್ಥಳದಲ್ಲಿಯೇ ಆಯ್ಕೆಯಾದ ಅಭ್ಯರ್ಥಿಗಳು: 212 (120 ಮಹಿಳೆಯರು & 92 ಪುರುಷರು)
ಶಾರ್ಟ್ ಲಿಸ್ಟ್ ಆಗಿರುವ ಅಭ್ಯರ್ಥಿಗಳು: 929 (486 ಮಹಿಳೆಯರು & 443 ಪುರುಷರು)ಉದ್ಯೋಗ ಪಡೆದ ವಿಶೇಷ ಚೇತನರು: 61
ಶಾರ್ಟ್ ಲಿಸ್ಟ್ ಆಗಿರುವ ವಿಶೇಷ ಚೇತನರು: 18