2 ತಿಂಗಳವರೆಗೂ ರೈತರಿಂದ ಸಾಲ ವಸೂಲಾತಿ ಮಾಡುವಂತಿಲ್ಲ

KannadaprabhaNewsNetwork |  
Published : May 08, 2024, 01:00 AM IST
ಡಿಸಿ ಸಭೆ | Kannada Prabha

ಸಾರಾಂಶ

ಬೆಳೆಯಿಲ್ಲದೇ ಕಂಗೆಟ್ಟಿರುವ ಇಂತಹ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿ ಮಾಡಬೇಕೆಂದು ಯಾವುದೇ ಬ್ಯಾಂಕು, ಮೈಕ್ರೋ ಫೈನಾನ್ಸ್ ಕಂಪನಿಗಳು ರೈತರಿಗೆ ಕಿರುಕುಳ ನೀಡಬಾರದು. ಸಾಲ ವಸೂಲಿಗಾಗಿ ರೈತರಿಗೆ ತೊಂದರೆ ಕೊಡುವುದು ಕಂಡು ಬಂದರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಬರಪರಿಸ್ಥಿತಿಯಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿರುವ ಹಿನ್ನೆಲೆಯಲ್ಲಿ ಮುಂದಿನ 2 ತಿಂಗಳವರೆಗೂ ರೈತರಿಂದ ಸಾಲ ವಸೂಲಾತಿ ಮಾಡುವಂತಿಲ್ಲವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬ್ಯಾಂಕು, ಮೈಕ್ರೋ ಫೈನಾನ್ಸ್ ಕಂಪನಿ, ಖಾಸಗಿ ಲೇವಾದೇವಿಗಾರರು ಹಾಗೂ ಸಾಲದಾತರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತಾಗಿ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಮಳೆ ಬಾರದೇ ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ. ಸಂಕಷ್ಟದಿಂದ ಹೊರಬರಲು ಮಾಡಿರುವ ಸಾಲ ತೀರಿಸಲಾಗದೇ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಬೆಳೆಯಿಲ್ಲದೇ ಕಂಗೆಟ್ಟಿರುವ ಇಂತಹ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿ ಮಾಡಬೇಕೆಂದು ಯಾವುದೇ ಬ್ಯಾಂಕು, ಮೈಕ್ರೋ ಫೈನಾನ್ಸ್ ಕಂಪನಿಗಳು ರೈತರಿಗೆ ಕಿರುಕುಳ ನೀಡಬಾರದು. ಸಾಲ ವಸೂಲಿಗಾಗಿ ರೈತರಿಗೆ ತೊಂದರೆ ಕೊಡುವುದು ಕಂಡು ಬಂದರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ಕಳೆದ 3 ದಿನಗಳಲ್ಲಿ ಜಿಲ್ಲೆಯ ತಿಪಟೂರು ತಾಲೂಕಿನ ಮಹಿಳೆ ಹಾಗೂ ಕೊರಟಗೆರೆ ತಾಲೂಕಿನ ಒಬ್ಬ ರೈತ ಸೇರಿ ಇಬ್ಬರು, ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ವರದಿಯಾಗಿದೆ. ಯಾವುದೇ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಪಡೆದವರಿಂದ ವಸೂಲಾತಿಗಾಗಿ ಮನೆಗೆ ಭೇಟಿ ನೀಡಿ ಮಾನಸಿಕ ನಿಂದನೆ ಮಾಡಿದರೆ ಅಂಥವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಇಂಥ ಪ್ರಕರಣಗಳು ಕಂಡು ಬಂದರೆ ಕೂಡಲೇ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ ಪೊಲೀಸ್ ಅಧಿಕಾರಿಗಳು ನೆರವಿಗೆ ಬರುತ್ತಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕಳೆದಾರು ತಿಂಗಳಲ್ಲಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ 4 ಪ್ರಕರಣಗಳ ಮೇಲೆ ಎಫ್‌ಐಆರ್ ದಾಖಲಾಗಿದೆ. ಮೈಕ್ರೋ ಫೈನಾನ್ಸ್ ಹಾಗೂ ಖಾಸಗಿ ಸಾಲದಾತರು ನೀಡಿದ ಸಾಲವನ್ನು ಮರುಪಾವತಿ ಮಾಡದಿರುವುದೇ ಈ ಆತ್ಮಹತ್ಯೆ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ತುಮಕೂರು ನಗರದಲ್ಲಿ ಮೀಟರ್ ಬಡ್ಡಿ ದಂಧೆ ಸೇರಿದಂತೆ ತಿಪಟೂರು, ಕೆ.ಬಿ. ಕ್ರಾಸ್, ಚಿಕ್ಕನಾಯಕನಹಳ್ಳಿಯಲ್ಲಿ ಫೈನಾನ್ಸ್ ಕಂಪನಿಗಳು ನೀಡಿರುವ ಸಾಲ ವಸೂಲಾತಿ ಮಾಡಲು ಸಾಲಗಾರರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರಲ್ಲದೇ, ಸಾಲ ಮಾಡಿ ತೀರಿಸಲಾಗದವರಿಗೆ ಮನೋಸ್ಥೈರ್ಯ ತುಂಬುವ ಕೆಲಸವಾಗಬೇಕು. ಸಾಲದಿಂದ ಮುಕ್ತಿ ಹೊಂದಲು ಆತ್ಮಹತ್ಯೆಯೊಂದೇ ಮಾರ್ಗವಲ್ಲ ಎಂಬ ಬಗ್ಗೆ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಉಪ ವಿಭಾಗಾಧಿಕಾರಿಗಳಾದ ಗೌರವ ಕುಮಾರ್ ಶೆಟ್ಟಿ, ಸಪ್ತಶ್ರೀ, ಗೋಟೂರು ಶಿವಪ್ಪ, ತಹಸೀಲ್ದಾರ್ ಎಂ. ಸಿದ್ದೇಶ್ ಸೇರಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.

ಬರ ಪರಿಹಾರವಾಗಿ ಶೀಘ್ರ ರೈತರ ಖಾತೆಗೆ ಹಣ:

ಜಿಲ್ಲೆಯಲ್ಲಿ ಬರ ಪರಿಹಾರವಾಗಿ ಮೊದಲ ಹಂತದಲ್ಲಿ 1,86,193 ರೈತರಿಗೆ 33.52ಕೋಟಿ ರು.ಗಳನ್ನು ವಿತರಿಸಲಾಗಿದೆ. ಎರಡನೇ ಹಂತದಲ್ಲಿ 1,32,332 ರೈತರಿಗೆ 74.21ಕೋಟಿ ರು.ಗಳ ಬರ ಪರಿಹಾರ ನೀಡಲು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇನ್ನೆರಡು ದಿನಗಳಲ್ಲಿ ೨ನೇ ಹಂತದ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗಲಿದೆ. ಜಿಲ್ಲೆಯಲ್ಲಿ 39089 ಪ್ರಕರಣಗಳಲ್ಲಿ ರೈತರು ತಮ್ಮ ಆಧಾರ್ ನಂಬರ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿಸದೇ ಇರುವುದರಿಂದ ಹಾಗೂ ಬ್ಯಾಂಕ್ ಖಾತೆ ಸಕ್ರಿಯವಾಗಿರದ ಕಾರಣ ನೇರವಾಗಿ ರೈತರ ಖಾತೆಗೆ ಪರಿಹಾರವನ್ನು ಪಾವತಿಸಲು ಸಾಧ್ಯವಾಗಿರುವುದಿಲ್ಲ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಹಾಗೂ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಿ ನ್ಯೂನ್ಯತೆಗಳನ್ನು ಸರಿಪಡಿಪಡಿಸಿಕೊಳ್ಳುವ ಬಗ್ಗೆ ರೈತರಿಗೆ ಅರಿವು ಮೂಡಿಸಲು ಸಂಬಂಧಿಸಿದ ಕಂದಾಯ ಹಾಗೂ ಕೃಷಿ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ