ಶ್ರೀ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಬೀಗ ಮುದ್ರೆ

KannadaprabhaNewsNetwork | Published : Nov 23, 2024 12:34 AM

ಸಾರಾಂಶ

ಶ್ರೀ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಬೀಗ ಮುದ್ರೆ

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಕಲ್ಲೇಶ್ವರ ಸ್ವಾಮಿ ದೇವಾಲಯದ ಪಕ್ಕದ ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ಪ್ರತಿ ವರ್ಷ ನಗರದ ಅಯ್ಯಪ್ಪ ಮಾಲಾಧಾರಿಗಳು ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ ಮಾಡುತ್ತಾ ಬಂದಿದ್ದು ಕಳೆದ ಎರಡು ದಿನಗಳ ಹಿಂದೆ ತಾಲೂಕು ಆಡಳಿತ ಯಾವುದೇ ಮಾಹಿತಿ ನೀಡದೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಬೀಗ ಹಾಕಿದ್ದು ಈ ನಡೆಗೆ ಅಯ್ಯಪ್ಪ ಮಾಲಾಧಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದಲೂ ಅಯ್ಯಪ್ಪಸ್ವಾಮಿ ದೇವಾಲಯದ ಟ್ರಸ್ಟ್ ವತಿಯಿಂದ ಇಲ್ಲಿ ಪ್ರತಿ ನವೆಂಬರ್ ತಿಂಗಳು ಪೂಜೆ ಮಾಡುತ್ತಾ ಬಂದಿದ್ದು, ಪ್ರತಿ ವರ್ಷ ಬಾಡಿಗೆಯಂತೆ 54 ದಿನಗಳಿಗೆ 27ಸಾವಿರ ರು. ತಾಲೂಕು ಆಡಳಿತಕ್ಕೆ ಪಾವತಿ ಆಗಿರುತ್ತದೆ. ಅಲ್ಲದೆ ಮುಜರಾತಿ ಇಲಾಖೆ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ಬಾಕಿ ಉಳಿಸಿಕೊಂಡಿದ್ದ ವಿದ್ಯುತ್ ಬಿಲ್ಲನ್ನು ಸಹ ಈ ಟ್ರಸ್ಟ್ ಪಾವತಿಸಿದೆ. ಸುಮಾರು 50 ವರ್ಷಗಳ ಹಿಂದಿನಿಂದಲೂ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಹಳೆಯ ದೇವಾಲಯವಿದ್ದ ಸ್ಥಳದಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇತ್ತೀಚಿಗೆ ಕಲ್ಲೇಶ್ವರ ಸ್ವಾಮಿಯ ಹಳೆಯ ದೇವಾಲಯವನ್ನು ತೆರವು ಮಾಡಿ ಹೊಸ ದೇವಾಲಯ ನಿರ್ಮಿಸಲಾಗಿದೆ. ಈ ದೇವಾಲಯದ ಆವರಣದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಅಯ್ಯಪ್ಪ ಮಾಲಾಧಾರಿಗಳು ಪೂಜೆ ಮಾಡುತ್ತಾರೆ. ಆದರೆ ತಾಲೂಕು ಆಡಳಿತ ಟ್ರಸ್ಟ್ ಗಮನಕ್ಕೂ ತರದೆ ಏಕಾಏಕಿ ಶೆಡ್‌ಗೆ ಬೀಗ ಹಾಕಲಾಗಿದ್ದು ಅಷ್ಟು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದ ಪೂಜಾ ಕಾರ್ಯಗಳಿಗೆ ಅಧಿಕಾರಿಗಳು ವಿಘ್ನವನ್ನುಂಟು ಮಾಡಿದ್ದಾರೆಂದು ಮಾಲಾಧಾರಿಗಳು ತೀವ್ರ ಅಸಮಾಧಾನದಿಂದಲೂ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ಈ ಜಾಗ ಸರ್ಕಾರಕ್ಕೆ ಸೇರಿದೆ ಇಲ್ಲಿ ಸಮುದಾಯ ಭವನ ನಿರ್ಮಾಣ ಮಾಡುತ್ತೇವೆಂದು ತಾಲೂಕು ಆಡಳಿದ ಮುಂದೆ ಮುಂದಾಗ ಅಯ್ಯಪ್ಪ ಮಾಲಾಧಾರಿಗಳು ಪ್ರತಿಭಟನೆ, ಧರಣಿ ಮಾಡಿದ್ದರು. 60 ವರ್ಷಗಳ ಇತಿಹಾಸ ಹೊಂದಿರುವ ಜಾಗವನ್ನು ನಾವು ಬಿಟ್ಟುಕೊಡುವುದಿಲ್ಲ ಎಂದು ಟ್ರಸ್ಟ್ ಪ್ರತಿಭಟನೆ ನಡೆಸಿತ್ತು. ಈಗ ಏಕಾಏಕಿ ಬೀಗ ಹಾಕಿರುವುದು ದೊಡ್ಡ ಮಟ್ಟದ ಹೋರಾಟಕ್ಕೆ ನಾಂದಿಯಾಗಬಹುದು.

Share this article