ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

KannadaprabhaNewsNetwork | Published : Oct 30, 2024 12:35 AM

ಸಾರಾಂಶ

ಡಿ. 3 ಮತ್ತು 4ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಶಿರಸಿಯಲ್ಲಿ ಆಯೋಜಿಸಲಾಗಿದೆ. ಅದರ ತಯಾರಿಗಾಗಿ ಅತೀ ಶೀಘ್ರದಲ್ಲಿ ಉಪಸಮಿತಿಗಳನ್ನು ರಚಿಸಬೇಕಿದೆ.

ಶಿರಸಿ: ಶಿರಸಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶಾಸಕ ಭೀಮಣ್ಣ ನಾಯ್ಕ ಅವರು ಮಂಗಳವಾರ ನಗರದ ಆಡಳಿತ ಸೌಧದ ಮುಂಭಾಗ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಶಿರಸಿಯಲ್ಲಿ 24ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಮೊದಲ ಹಂತವಾಗಿ ಲಾಂಛನವನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳು ಹಾಗೂ ಬನವಾಸಿ, ಶಿರಸಿಯ ಪ್ರಸಿದ್ಧ ಸ್ಥಳಗಳ ಚಿತ್ರಗಳನ್ನು ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಸಹಕಾರ ನೀಡಬೇಕು ಎಂದರು.

ನಂತರ ಆಡಳಿತ ಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರು, ಡಿ. 3 ಮತ್ತು 4ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಶಿರಸಿಯಲ್ಲಿ ಆಯೋಜಿಸಲಾಗಿದೆ. ಅದರ ತಯಾರಿಗಾಗಿ ಅತೀ ಶೀಘ್ರದಲ್ಲಿ ಉಪಸಮಿತಿಗಳನ್ನು ರಚಿಸಬೇಕಿದೆ. ಆರ್ಥಿಕವಾಗಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಉಪ ಸಮಿತಿ ರಚಿಸಲಾಗಿದೆ. ಘಟ್ಟದ ಮೇಲಿನ ಎಲ್ಲ ತಾಲೂಕೂಗಳಲ್ಲೂ ಹೆಚ್ಚಿನ ಪ್ರಚಾರ ಮಾಡಬೇಕಿದೆ. ಬಸ್‌ಗಳಲ್ಲಿ ಕರಪತ್ರ ಹಂಚುವ ಮೂಲಕ ಪ್ರಚಾರ ಕಾರ್ಯ ಮಾಡಲಾಗುತ್ತದೆ ಎಂದರು.

ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಆರ್.ಡಿ. ಹೆಗಡೆ ಆಲ್ಮನೆ ಅವರು ಆಯ್ಕೆಯಾಗಿದ್ದಾರೆ.‌ ಶಾಸಕರು ಲಾಂಛನ ಸಹ ಬಿಡುಗಡೆ ಮಾಡಿದ್ದಾರೆ. ಇಂದಿನಿಂದ ಕಾರ್ಯಕ್ರಮದ ತಯಾರಿ ಭರದಿಂದ ಸಾಗಲಿದೆ. 5ರಿಂದ 6 ಸಾವಿರ ಆಜೀವ ಸದಸ್ಯರಿದ್ದಾರೆ. ಅವರೆಲ್ಲರಿಗೂ ಆಮಂತ್ರಣ ಪತ್ರಿಕೆ ಕಳುಹಿಸಲಾಗುತ್ತದೆ ಎಂದರು.ಶಿರಸಿ ತಾಲೂಕು ಘಟಕದ ಅಧ್ಯಕ್ಷ ಜಿ ಸುಬ್ರಾಯ ಭಟ್ ಬಕ್ಕಳ ಮಾತನಾಡಿ, ಜಿಲ್ಲಾಧ್ಯಕ್ಷರ ಒಪ್ಪಿಗೆ ಮೇರೆಗೆ ಹಲವು ಸಮಿತಿಗಳನ್ನು ರಚಿಸಲಾಗುತ್ತದೆ. ಎಲ್ಲರ ಸಹಕಾರದೊಂದಿಗೆ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು ಶ್ರಮಿಸುತ್ತಿದ್ದೇವೆ ಎಂದರು.ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕೆ ನಗರಸಭೆ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ಈಗಾಗಲೆ ಸಾಹಿತ್ಯ ಪರಿಷತ್ತಿಗೆ ಕಾರ್ಯಾಲಯವನ್ನು ತೆರೆಯಲು ಕೊಠಡಿಯನ್ನು ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಭಾಗೀರಥಿ ಹೆಗಡೆ, ನಗರಸಭೆ ಪೌರಾಯುಕ್ತ ಕಾಂತರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡ, ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ತಾಪಂ ಮುಖ್ಯ ಕಾರ್ಯನಿರ್ವಾಹಕ ಸತೀಶ ಹೆಗಡೆ, ಸಿಪಿಐ ಶಶಿಕಾಂತ ವರ್ಮ ಹಾಗೂ ಕಸಾಪ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.ಕಾರ್ಯಾಲಯ ಉದ್ಘಾಟನೆ

ಶಿರಸಿಯಲ್ಲಿ ನಡೆಯಲಿರುವ 24ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರಸಭೆ ಪಕ್ಕದಲ್ಲಿ ನಿರ್ಮಾಣವಾದ ಮಳಿಗೆಯೊಂದನ್ನು ಕಸಾಪ ಕಾರ್ಯಾಲಯಕ್ಕೆ ನೀಡಲಾಗಿದೆ. ಈ ಕಾರ್ಯಾಲಯವನ್ನು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಶಿರಸಿ ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ, ನಗರಸಭೆ ಪೌರಾಯುಕ್ತ ಕಾಂತರಾಜ್, ಉಪಾಧ್ಯಕ್ಷ ರಮಾಕಾಂತ ಭಟ್, ಸಿಪಿಐ ಶಶಿಕಾಂತ ವರ್ಮ ಹಾಗೂ ಕಸಾಪ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಮಂತ್ರಣ

ಶಿರಸಿ: ಶಿರಸಿಯಲ್ಲಿ ನಡೆಯಲಿರುವ 24ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಆರ್.ಡಿ. ಹೆಗಡೆ ಆಲ್ಮನೆಯವರ ನಿವಾಸಕ್ಕೆ ಕಸಾಪ ಪದಾಧಿಕಾರಿಗಳು ಹಾಗೂ ತಹಸೀಲ್ದಾರ್ ಮಂಗಳವಾರ ಭೇಟಿ ನೀಡಿ ಅಧಿಕೃತವಾಗಿ ಆಹ್ವಾನ ನೀಡಿದರು.ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಶಿರಸಿ ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ, ವಿ.ಆರ್. ಹೆಗಡೆ ಮತ್ತಿಘಟ್ಟ, ಶ್ರೀನಿವಾಸ ನಾಯ್ಕ, ಭಾಗೀರಥಿ ಹೆಗಡೆ, ಸಾವಿತ್ರಿ ಶಾಸ್ತ್ರಿ, ಕೃಷ್ಣ ಪದಕಿ, ಮಹಾದೇವ ಚಲವಾದಿ, ಜಯರಾಮ ಹೆಗಡೆ, ವಿಮಲಾ ಭಾಗ್ವತ್, ಜಗದೀಶ ಭಂಡಾರಿ, ರಾಜೇಶ್ ದೇಶಭಾಗ್ ಸೇರಿ ಹಲವರು ಇದ್ದರು.

Share this article