ರಾಜೀಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸುವ ಲೋಕ್ ಅದಾಲತ್ ಕಾರ್ಯಕ್ರಮ ಜುಲೈ 12ರಂದು ಜಿಲ್ಲೆಯಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಇತ್ಯರ್ಥವಾಗಿ ಲೋಕ್ ಅದಾಲತ್ ಯಶಸ್ವಿಯಾಗಲು ಎಲ್ಲರೂ ಸಹಕರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಮನವಿ ಮಾಡಿದರು.
ಶಿವಮೊಗ್ಗ: ರಾಜೀಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸುವ ಲೋಕ್ ಅದಾಲತ್ ಕಾರ್ಯಕ್ರಮ ಜುಲೈ 12ರಂದು ಜಿಲ್ಲೆಯಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಇತ್ಯರ್ಥವಾಗಿ ಲೋಕ್ ಅದಾಲತ್ ಯಶಸ್ವಿಯಾಗಲು ಎಲ್ಲರೂ ಸಹಕರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಮನವಿ ಮಾಡಿದರು.ಲೋಕ್ ಅದಾಲತ್ ಕುರಿತು ಚರ್ಚಿಸಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರು, ಅಧಿಕಾರಿಗಳು, ಅಭಿಯೋಜಕರು, ಇನ್ಶೂರೆನ್ಸ್ ಕಂಪೆನಿಗಳ ಅಧಿಕಾರಿಗಳೊಂದಿಗೆ ನಡೆಸಲಾದ ಸಭೆಯಲ್ಲಿ ಅವರು ಮಾತನಾಡಿದರು.
ಈ ಲೋಕ್ ಅದಾಲತ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು ಸೇರಿದಂತೆ ರಾಜಿಯಾಗಬಹುದಾದ ಸಿವಿಲ್, ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು. ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು. ವಿದ್ಯುಚ್ಛಕ್ತಿ, ಜಲಮಂಡಳಿ ಹಾಗೂ ನ್ಯಾಯಾಲಯಕ್ಕೆ ಬರಬಹುದಾದಂತಹ ಇತರೆ ಯಾವುದೇ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಿ, ಅವುಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ಕರೆಸಿಕೊಂಡು ರಾಜಿ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.ಈ ಬಾರಿ ‘ಸಾಥಿ’ ಅಭಿಯಾನದಡಿ ಪರಿತ್ಯಕ್ತ, ಪೋಷಕರಿಲ್ಲದ ಮಕ್ಕಳಿಗೆ ಆಧಾರ್ ಮಾಡಿಸಲಾಗುತ್ತಿದ್ದು, ಅದಕ್ಕೆ ಅಗತ್ಯವಾದ ಜನನ ಪ್ರಮಾಣ ಪತ್ರವನ್ನು ಪಾಲಿಕೆಯವರು ಮಾಡಿಕೊಡಬೇಕೆಂದ ಅವರು, ವಿಮಾ ಕಂಪೆನಿಗಳು, ವಿವಿಧ ಇಲಾಖೆಗಳು ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹಕರಿಸಬೇಕು ಎಂದರು. 2024 ಡಿಸೆಂಬರ್ 14 ರಂದು ನಡೆದ ಲೋಕ್ ಅದಾಲತ್‌ನಲ್ಲಿ ಒಟ್ಟು 13393 ಪ್ರಕರಣಗಳು ವಿಲೇವಾರಿ ಆಗಿವೆ. 2025 ಮಾರ್ಚ್ 8 ರಂದು ನಡೆದ ಲೋಕ್ ಅದಾಲತ್‌ನಲ್ಲಿ 13,808 ವಿಲೇವಾರಿ ಆಗಿದ್ದು, ಜು.12ರಂದು ನಡೆಯಲಿರುವ ಲೋಕ್ ಅದಾಲತ್‌ಗೆ ಈಗಾಗಲೇ 14,014 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದರು.ಕಳೆದ ಬಾರಿ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಒಂದನೇ ಮತ್ತು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ, ಸರ್ಕಾರಿ ಅಭಿಯೋಜಕರು, ಇನ್ಶೂರೆನ್ಸ್ ಕಂಪೆನಿ ಅಧಿಕಾರಿಗಳು, ಅಬಕಾರಿ, ಅರಣ್ಯ, ಮೆಸ್ಕಾಂ, ಬ್ಯಾಂಕುಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.