ಅರ್ಜುನ ಭೌತಿಕವಾಗಿ ಇಲ್ಲದಿದ್ದರೂ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾನೆ

KannadaprabhaNewsNetwork |  
Published : Jun 28, 2025, 12:22 AM IST
48 | Kannada Prabha

ಸಾರಾಂಶ

ನರಹಂತಕ ಹುಲಿ ಸೆರೆ ಕಾರ್ಯಾಚರಣೆ ಅಥವಾ ಆನೆ ಸೆರೆ ಕಾರ್ಯಾಚರಣೆ ಎಂದರೆ ಮೊದಲು ಬರುತ್ತಿದ್ದ ಹೆಸರೇ ಅರ್ಜುನ ಆನೆಯದು

ಕನ್ನಡಪ್ರಭ ವಾರ್ತೆ ಡಿ.ಬಿ. ಕುಪ್ಪೆಎಂಟು ಬಾರಿ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಎಲ್ಲ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾನೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.ಡಿ.ಬಿ. ಕುಪ್ಪೆಯ ಬಳ್ಳೆ ಶಿಬಿರದಲ್ಲಿ ಅರ್ಜುನನ ಪ್ರತಿರೂಪದಂತಿರುವ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾಪ್ಟನ್ ಎಂದೇ ಖ್ಯಾತನಾಗಿದ್ದ ಅರ್ಜುನ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ಬಳಿ ಮದಗಜ ಸೆರೆ ಕಾರ್ಯಾಚರಣೆ ವೇಳೆ 2023ರ ಡಿ. 4ರಂದು ಏಕಾಂಗಿಯಾಗಿ ಹೋರಾಡಿ ಮಡಿದ. ಮಾವುತ ಮತ್ತು ಹಲವು ಅರಣ್ಯ ಸಿಬ್ಬಂದಿಯ ಜೀವ ಉಳಿಸಿ ತನ್ನ ಜೀವ ಬಲಿಕೊಟ್ಟ. ಅರ್ಜುನನ ಅಗಲಿಕೆಯ ನೋವು ನಿರಂತರವಾಗಿ ಕಾಡುತ್ತದೆ ಎಂದರು.ನರಹಂತಕ ಹುಲಿ ಸೆರೆ ಕಾರ್ಯಾಚರಣೆ ಅಥವಾ ಆನೆ ಸೆರೆ ಕಾರ್ಯಾಚರಣೆ ಎಂದರೆ ಮೊದಲು ಬರುತ್ತಿದ್ದ ಹೆಸರೇ ಅರ್ಜುನ ಆನೆಯದು. ಅಷ್ಟು ವಿಶ್ವಾಸಾರ್ಹತೆ ಇದ್ದ ಅರ್ಜುನನ ಅಕಾಲಿಕ ಸಾವಿನ ನೋವಿದೆ. ಆದರೆ ಅರ್ಜುನನ ನೆನಪು ಚಿರಸ್ಥಾಯಿಯಾಗಿ ಉಳಿಯುವಂತೆ ಯಸಳೂರು ಮತ್ತು ಡಿ.ಬಿ. ಕುಪ್ಪೆಯ ಬಳ್ಳೆಯಲ್ಲಿ ಎರಡು ಸ್ಮಾರಕ ನಿರ್ಮಿಸಲಾಗಿದ್ದು, ಮೊದಲಿಗೆ ಬಳ್ಳೆಯಲ್ಲಿ ಸ್ಮಾರಕ ಉದ್ಘಾಟಿಸಲಾಗುತ್ತಿದೆ ಎಂದರು.ದಸರಾ ಮಹೋತ್ಸವದಲ್ಲಿ 8 ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಜನಮನ ಗೆದ್ದಿದ್ದ ಅರ್ಜುನ ಸುಮಾರು 5600 ಕೆ.ಜಿ. ತೂಕವಿದ್ದ. ಅರ್ಜುನ 2023ರ ಡಿ. 4ರಂದು ಮೃತಪಟ್ಟಾಗ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿತ್ತು ಅರ್ಜುನ ಮೃತದೇಹವನ್ನು ಬಳ್ಳೆಗೆ ತಂದು ಸಮಾಧಿ ಮಾಡಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಆದರೆ ಮೃತ ಆನೆಯನ್ನು ನೂರಾರು ಕಿಲೋ ಮೀಟರ್ ತಂದು ಸಮಾಧಿ ಮಾಡುವುದು ಕಷ್ಟಸಾಧ್ಯ. ದೇಹದಲ್ಲಿ ಗಾಳಿ ಸೇರಿ ಸ್ಫೋಟವಾಗುವ ಭೀತಿ ಇತ್ತು. ಹೀಗಾಗಿ ಯಸಳೂರು ಬಳಿಯ ದಬ್ಬಳ್ಳಿಕಟ್ಟೆಯ ನೆಡುತೋಪಿನಲ್ಲಿ ಸಮಾಧಿ ಮಾಡಲಾಯಿತು ಎಂದು ಈಶ್ವರ ಖಂಡ್ರೆ ತಿಳಿಸಿದರು.ತಾವು ಬೆಳಗಾವಿಯಿಂದ ಯಸಳೂರಿಗೆ ತೆರಳಿ, ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿದ್ದನ್ನು ಸ್ಮರಿಸಿದ ಅವರು, ಆಗ ಸಮಾಧಿ ಸ್ಥಳ ದಬ್ಬಳ್ಳಿಕಟ್ಟೆಯಲ್ಲಿ ಮತ್ತು ಅರ್ಜುನ ವಾಸವಾಗಿದ್ದ ಬಳ್ಳೆ ಶಿಬಿರದಲ್ಲಿ ಸ್ಮಾರಕವನ್ನು ನಿರ್ಮಿಸುವುದಾಗಿ ಹೇಳಿದ್ದೆ. ಅದರಂತೆ ಇಂದು ಇಲ್ಲಿ ಸ್ಮಾರಕ ಉದ್ಘಾಟಿಸಲಾಗುತ್ತಿದೆ ಎಂದು ತಿಳಿಸಿದರು. ಹಂತಹಂತವಾಗಿ ಅಭಿವೃದ್ಧಿಈ ಸ್ಮಾರಕವನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ಅರ್ಜುನ ಆನೆ ಪಾಲ್ಗೊಂಡ ವಿವಿಧ ಕಾರ್ಯಾಚರಣೆಗಳ ಚಿತ್ರ, ದಸರಾ ಮಹೋತ್ಸವದ ಅಪರೂಪದ ಕ್ಷಣಗಳ ಚಿತ್ರ ಎಲ್ಲವನ್ನೂ ಇಲ್ಲಿ ಪ್ರದರ್ಶಿಸುವ ಮೂಲಕ ಅರ್ಜುನ ಆನೆಯ ಶೌರ್ಯ, ಸಾಹಸ ಎಲ್ಲರಿಗೂ ತಿಳಿಯುವಂತೆ ಮಾಡಲಾಗುವುದು ಎಂದರು.ಈ ಸ್ಮಾರಕ 2.98 ಮೀಟರ ಎತ್ತರ ಇದೆ. 3.74 ಮೀಟರ್ ಉದ್ದ ಇದೆ. ಅರ್ಜುನ ಆನೆಯ ಸ್ಮಾರಕ 650 ಕೆ.ಜಿ. ತೂಕ ಇದೆ. ಇದನ್ನು ಕಲಾವಿದ ಮಂಗಳೂರು ಮೂಲದ ಧನಂಜಯ ಅವರು ನಿರ್ಮಿಸಿದ್ದು, ಅರ್ಜುನ ಆನೆಯೇ ನಮ್ಮ ಮುಂದೆ ನಿಂತಿರುವಂತೆ ಕಾಣುತ್ತದೆ. ಇದಕ್ಕಾಗಿ ಕಲಾವಿದರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಈಶ್ವರ ಖಂಡ್ರೆ ಹೇಳಿದರು.ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಸಿಸಿಎಫ್ ಮಾಲತಿ, ಡಿಸಿಎಫ್ ಸೀಮಾ ಮೊದಲಾದವರು ಇದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ