ಕೆಂಪೇಗೌಡರ ವಿಚಾರಧಾರೆ ತಿಳಿಯುವುದು ಅಗತ್ಯ: ಶಾಸಕ ಷಡಕ್ಷರಿ

KannadaprabhaNewsNetwork |  
Published : Jun 28, 2025, 12:22 AM IST
ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ಮಾದರಿ ವಿಶಿಷ್ಟ : ಕೆ. ಷಡಕ್ಷರಿ | Kannada Prabha

ಸಾರಾಂಶ

ತಮ್ಮ ಕನಸಿನ ನಗರ ಬೆಂಗಳೂರನ್ನು ನಿರ್ಮಿಸಲು ಕೆಂಪೇಗೌಡರು ಸಮುದ್ರಮಟ್ಟದಿಂದ ಮೂರು ಸಾವಿರ ಅಡಿಗಳಷ್ಟು ಮೇಲಿರುವ ಭೂಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಯಾವುದೇ ರೀತಿಯ ಪ್ರವಾಹ, ಭೂಕಂಪವಾಗಲೀ ಇದುವರೆಗೂ ಬೆಂಗಳೂರಿಗೆ ಬಾಧಿಸಿಲ್ಲ. ನೀರಿನ ಕೊರತೆ ಉಂಟಾಗಬಾರದೆಂದು 350 ಕೆರೆ- ಕಟ್ಟೆಗಳನ್ನು ನಿರ್ಮಿಸಿದ್ದರು .

ಕನ್ನಡಪ್ರಭ ವಾರ್ತೆ ತಿಪಟೂರು

ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ವಿಶಿಷ್ಟವಾಗಿತ್ತು, ಅವರು ದೂರದೃಷ್ಟಿಯಿಂದ ಕಟ್ಟಿದ ಬೆಂಗಳೂರಿನ ರೀತಿಯಲ್ಲಿಯೇ ನಾವು ಎಲ್ಲ ನಗರ ಮತ್ತು ಪಟ್ಟಣಗಳನ್ನು ನಿರ್ಮಿಸಿದರೆ ಎಲ್ಲ ಊರುಗಳೂ ಆದರ್ಶವಾಗಿರಲಿದ್ದು, ನಾವು ಕೆಂಪೇಗೌಡರ ಆದರ್ಶ, ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ, ನಾಡು ನಿರ್ಮಾಣ ಮಾಡುವತ್ತ ಕಾರ್ಯೋನ್ಮುಖರಾಗಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ತಾಲೂಕು ಆಡಳಿತದಿಂದ ನಗರದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ 516ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಮಹನೀಯರ ಸಾಧನೆಗಳು, ತ್ಯಾಗ, ಬಲಿದಾನಗಳು ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಸರ್ಕಾರ ಜಯಂತಿಗಳನ್ನು ಆಚರಿಸುತ್ತದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಮತ್ತಷ್ಟು ಅಭಿವೃದ್ಧಿಯಾಗಲು ಎಸ್.ಎಂ.ಕೃಷ್ಣ ಅವರೂ ಕಾರಣ. ಅವರು ಬೆಂಗಳೂರಿಗೆ ಐಟಿ- ಬಿಟಿ ತರದಿದ್ದರೆ ನಗರ ಇಷ್ಟು ಅಭಿವೃದ್ಧಿ ಹೊಂದುತ್ತಿರಲಿಲ್ಲ. ಇಲ್ಲಿಯೂ ಸಮುದಾಯದವರೆಲ್ಲ ಒಟ್ಟಿಗೆ ಸೇರಿ ಕೆಂಪೇಗೌಡರ ಜಯಂತಿಯನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸಲು ಮುಂದೆ ಬಂದರೆ ಸಹಕಾರ ನೀಡುವುದಾಗಿ ತಿಳಿಸಿದರು.

ನಗರಸಭಾಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ಬೆಂಗಳೂರು ದೇಶದ ಆರ್ಥಿಕ ನಗರವಾಗಿ ಹಾಗೂ ಐಟಿ ಬಿಟಿ ನಗರವಾಗಿ ಬೆಳೆದಿರುವುದರ ಹಿಂದೆ ಕೆಂಪೇಗೌಡರ ದೂರದೃಷ್ಟಿ ಇದೆ. ನಾವು ಎಂದಿಗೂ ಈ ನಾಡಿನ ಸಂಸ್ಕೃತಿ, ನಡೆ- ನುಡಿ ಬಿಟ್ಟುಕೊಡಬಾರದು. ಈ ಮಹಾನ್ ನಾಡಿನಲ್ಲಿ ಜನಿಸಿರುವ ನಾವೇ ಪುಣ್ಯವಂತರು ಎಂದು ತಿಳಿಸಿದರು.

ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ಉಪನ್ಯಾಸ ನೀಡುತ್ತಾ, ತಮ್ಮ ಕನಸಿನ ನಗರ ಬೆಂಗಳೂರನ್ನು ನಿರ್ಮಿಸಲು ಕೆಂಪೇಗೌಡರು ಸಮುದ್ರಮಟ್ಟದಿಂದ ಮೂರು ಸಾವಿರ ಅಡಿಗಳಷ್ಟು ಮೇಲಿರುವ ಭೂಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಯಾವುದೇ ರೀತಿಯ ಪ್ರವಾಹ, ಭೂಕಂಪವಾಗಲೀ ಇದುವರೆಗೂ ಬೆಂಗಳೂರಿಗೆ ಬಾಧಿಸಿಲ್ಲ. ನೀರಿನ ಕೊರತೆ ಉಂಟಾಗಬಾರದೆಂದು 350 ಕೆರೆ- ಕಟ್ಟೆಗಳನ್ನು ನಿರ್ಮಿಸಿದ್ದರು ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಪವನ್‌ ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಗರಸಭೆ ಉಪಾಧ್ಯಕ್ಷೆ ಮೇಘಶ್ರೀ ಭೂಷಣ್, ಒಕ್ಕಲಿಗರ ಸಂಘದ ತಾ. ಅಧ್ಯಕ್ಷ ಚಿದಾನಂದ್, ವೈದ್ಯ ಡಾ. ವಿವೇಚನ್, ಡಾ.ರಾಮೇಗೌಡ ಸೇರಿ ಸಮಾಜದ ಮುಖಂಡರು ಭಾಗವಹಿಸಿದ್ದರು.

PREV

Recommended Stories

ಉದ್ಭವ ಶಿವಲಿಂಗ, ನಂದಿ ಬಸವ ಭಗ್ನ
ಹಾಲು ಉತ್ಪಾದನೆಯಲ್ಲಿ ವಿಜಯಪುರ ಪಾಲು ಪ್ರಧಾನ