ಹಾಸನ ಮಹಾನಗರ ಪಾಲಿಕೆಯಲ್ಲಿ ಲೋಕಾಯುಕ್ತ ತಪಾಸಣೆ

KannadaprabhaNewsNetwork |  
Published : Aug 19, 2026, 01:45 AM IST
18ಎಚ್ಎಸ್ಎನ್8 :  | Kannada Prabha

ಸಾರಾಂಶ

ಲೋಕಾಯುಕ್ತ ಅಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ, ಎಇ, ಎಇಇ ಸೇರಿದಂತೆ ವಿವಿಧ ವಿಭಾಗಗಳ ಕಚೇರಿಗಳಿಗೆ ತೆರಳಿ ದಾಖಲೆಗಳು, ಕಡತಗಳು ಹಾಗೂ ಅಧಿಕಾರಿಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿದರು. ಕೆಲವು ಕಚೇರಿಗಳ ಬಾಗಿಲುಗಳನ್ನು ಮುಚ್ಚಿಕೊಂಡು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದು ಕಂಡುಬಂದಿತು. ಸಿಬ್ಬಂದಿಯ ಹಾಜರಾತಿ, ಕರ್ತವ್ಯ ನಿರ್ವಹಣೆಯ ವಿವರಗಳು ಹಾಗೂ ಸಾರ್ವಜನಿಕರಿಗೆ ಒದಗಿಸಬೇಕಾದ ಸೇವೆಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಸಾರ್ವಜನಿಕರಿಂದ ನಿರಂತರವಾಗಿ ಕೇಳಿಬರುತ್ತಿದ್ದ ದೂರುಗಳ ಹಿನ್ನೆಲೆಯಲ್ಲಿ ಹಾಸನ ಮಹಾನಗರ ಪಾಲಿಕೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ದಿಢೀರ್ ಭೇಟಿ ನೀಡಿ ಸಂಜೆವರೆಗೂ ದಾಖಲೆಗಳ ಪರಿಶೀಲನೆ ನಡೆಸಿದರು. ಸಿಬ್ಬಂದಿಯ ಹಾಜರಾತಿ, ಅಧಿಕಾರಿಗಳ ಕರ್ತವ್ಯ ನಿರ್ವಹಣೆ, ಸಾರ್ವಜನಿಕ ಸೇವೆಗಳಲ್ಲಿನ ವಿಳಂಬ ಹಾಗೂ ವಿವಿಧ ಇಲಾಖೆಗಳ ಕಾರ್ಯವೈಖರಿ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕಿದರು.

ಲೋಕಾಯುಕ್ತ ಎಸ್ಪಿ ನಂದಿನಿ ನೇತೃತ್ವದಲ್ಲಿ ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ಆಗಮಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆಯಲ್ಲಿ ಭಾಗವಹಿಸಿದ್ದರು. ಸುಮಾರು ಆರು ವಾಹನಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲಿಕೆ ಕಚೇರಿಗೆ ಆಗಮಿಸಿದ್ದು, ಏಕಕಾಲದಲ್ಲಿ ವಿವಿಧ ವಿಭಾಗಗಳಲ್ಲಿ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಅಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ, ಎಇ, ಎಇಇ ಸೇರಿದಂತೆ ವಿವಿಧ ವಿಭಾಗಗಳ ಕಚೇರಿಗಳಿಗೆ ತೆರಳಿ ದಾಖಲೆಗಳು, ಕಡತಗಳು ಹಾಗೂ ಅಧಿಕಾರಿಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿದರು. ಕೆಲವು ಕಚೇರಿಗಳ ಬಾಗಿಲುಗಳನ್ನು ಮುಚ್ಚಿಕೊಂಡು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದು ಕಂಡುಬಂದಿತು. ಸಿಬ್ಬಂದಿಯ ಹಾಜರಾತಿ, ಕರ್ತವ್ಯ ನಿರ್ವಹಣೆಯ ವಿವರಗಳು ಹಾಗೂ ಸಾರ್ವಜನಿಕರಿಗೆ ಒದಗಿಸಬೇಕಾದ ಸೇವೆಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು.

ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಆಧರಿಸಿ ಯಾವ ಹಂತದಲ್ಲಿ ವಿಳಂಬವಾಗುತ್ತಿದೆ, ಅರ್ಜಿಗಳ ವಿಲೇವಾರಿ ಹೇಗೆ ನಡೆಯುತ್ತಿದೆ ಹಾಗೂ ಸಾರ್ವಜನಿಕ ಸೇವೆ ಪಡೆಯುವ ಸಂದರ್ಭದಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪವಿದೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು. ಪಾಲಿಕೆ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರು ಲೋಕಾಯುಕ್ತ ಎಸ್ಪಿ ನಂದಿನಿ ಅವರ ಮುಂದೆ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡರು. ವಿಶೇಷವಾಗಿ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆಯಲು ವಿಳಂಬವಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಮಧ್ಯವರ್ತಿಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ, ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ಸ್ಪಂದಿಸುವ ರೀತಿಯಲ್ಲಿನ ಸಮಸ್ಯೆ ಸೇರಿದಂತೆ ಹಲವು ಅಹವಾಲುಗಳನ್ನು ಜನರು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದರು.

ಪಾಲಿಕೆ ಆಯುಕ್ತರು, ಎಇಇ ಸೇರಿದಂತೆ ವಿವಿಧ ಅಧಿಕಾರಿಗಳಿಂದ ಲೋಕಾಯುಕ್ತ ತಂಡ ಹಲವು ಮಾಹಿತಿಗಳನ್ನು ಪಡೆದುಕೊಂಡಿತು. ಸಾರ್ವಜನಿಕರಿಂದ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಡತಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಳ್ಳಲಾಯಿತು. ಪಾಲಿಕೆಯ ವಿವಿಧ ವಿಭಾಗಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು, ಸಾರ್ವಜನಿಕ ಸೇವೆಗಳ ವಿಲೇವಾರಿ, ಅಧಿಕಾರಿಗಳ ಹಾಜರಾತಿ ಹಾಗೂ ಕರ್ತವ್ಯ ನಿರ್ವಹಣೆಯ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ತಪಾಸಣಾ ವಾರಂಟ್‌ನೊಂದಿಗೆ ಪರಿಶೀಲನೆ

ಲೋಕಾಯುಕ್ತ ಅಧಿಕಾರಿಗಳು ತಪಾಸಣಾ ವಾರಂಟ್‌ನೊಂದಿಗೆ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿದರು ಎನ್ನಲಾಗಿದ್ದು, ಇದರಿಂದ ಪಾಲಿಕೆ ಆವರಣದಲ್ಲಿ ಕೆಲಕಾಲ ಕುತೂಹಲದ ವಾತಾವರಣ ನಿರ್ಮಾಣವಾಗಿತ್ತು. ಸಾಮಾನ್ಯ ತಪಾಸಣೆಯ ರೀತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧ ವಿಭಾಗಗಳಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದ್ದು ವಿಶೇಷವಾಗಿತ್ತು. ಪಾಲಿಕೆಯ ಬಹುತೇಕ ಕಚೇರಿಗಳಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆದ ಹಿನ್ನೆಲೆಯಲ್ಲಿ ಸಿಬ್ಬಂದಿಯಲ್ಲೂ ಆತಂಕದ ವಾತಾವರಣ ಕಂಡುಬಂತು.

ಲೋಕಾಯುಕ್ತ ಅಧಿಕಾರಿಗಳ ಈ ಭೇಟಿ ಕೇವಲ ಸಾಮಾನ್ಯ ಪರಿಶೀಲನೆಯೇ ಅಥವಾ ನಿರ್ದಿಷ್ಟ ದೂರುಗಳ ಆಧಾರದ ಮೇಲೆ ಕೈಗೊಂಡಿರುವ ಕ್ರಮವೇ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ. ಪರಿಶೀಲನೆಯ ಬಳಿಕ ಅಧಿಕಾರಿಗಳು ಯಾವ ರೀತಿಯ ವರದಿ ಸಿದ್ಧಪಡಿಸಲಿದ್ದಾರೆ ಮತ್ತು ಮುಂದಿನ ಕ್ರಮ ಏನು ಎಂಬುದು ಇದೀಗ ಗಮನಾರ್ಹವಾಗಿದೆ. ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನೀಡಬೇಕಾದ ಸೇವೆಗಳ ಬಗ್ಗೆ ಆಗಾಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಭೇಟಿ ಮಹತ್ವ ಪಡೆದುಕೊಂಡಿದೆ. ಜನನ-ಮರಣ ಪ್ರಮಾಣಪತ್ರ, ವಿವಿಧ ಅನುಮತಿಗಳು, ಸಾರ್ವಜನಿಕ ಕಾಮಗಾರಿಗಳು ಹಾಗೂ ಇತರ ಸೇವೆಗಳಲ್ಲಿ ವಿಳಂಬ ಅಥವಾ ಮಧ್ಯವರ್ತಿಗಳ ಹಾವಳಿ ಕಂಡುಬಂದಲ್ಲಿ ಅದನ್ನು ನಿಯಂತ್ರಿಸುವ ಅಗತ್ಯವಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖರ್ಗೆ ಭಾಷಣ ಮಾಡಿದ ಸ್ಥಳ ಸ್ವಚ್ಛ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ
ನದಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ