
ಗದಗ: ಪೋಡಿ ಮಾಡಿ ಕೊಡಲು ಲಂಚದ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ಇಬ್ಬರು ಸಿಬ್ಬಂದಿ ಮಂಗಳವಾರ ಗದಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹರ್ಲಾಪುರ ಗ್ರಾಮದ ನಿವಾಸಿ ಗಣೇಶ ಅಂದಪ್ಪ ಮುಂಡರಗಿ ಎಂಬವರು ಅವರು ಖರೀದಿಸಿದ್ದ 6 ಗುಂಟೆ ಜಮೀನಿನ ಪೋಡಿ ಕೆಲಸಕ್ಕಾಗಿ ಗದಗ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಅಲೆದಾಡುತ್ತಿದ್ದರು. ಸರ್ಕಾರದ ಯೋಜನೆಯಡಿ ಈ ಕೆಲಸ ಉಚಿತವಾಗಿ ನಡೆಯಬೇಕಿದ್ದರೂ, ಡಾಟಾ ಎಂಟ್ರಿ ಆಪರೇಟರ್ ಕವಿತಾ ಅವರು ಮೊದಲು ₹3 ಸಾವಿರ ಹಾಗೂ ನಂತರ ₹2,500 ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು.
ಗಣೇಶ ಅವರು ಗದಗ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಮಧ್ಯಾಹ್ನ ಗಣೇಶ ಅವರು ಕಚೇರಿಗೆ ತೆರಳಿದಾಗ, ಕವಿತಾ ಅವರ ಸೂಚನೆಯಂತೆ ನಾಗೇಶ ಬಡಿಗೇರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಸ್.ಎಸ್. ತೇಲಿ ನೇತೃತ್ವದ ತಂಡ ದಾಳಿ ನಡೆಸಿ, ಇಬ್ಬರನ್ನೂ ವಶಕ್ಕೆ ಪಡೆದಿದೆ.ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಮತ್ತು ಡಿವೈಎಸ್ಪಿ ವಿಜಯ ಬಿರಾದಾರ ಅವರ ಮಾರ್ಗದರ್ಶನದಲ್ಲಿ ಎಸ್.ಎಸ್. ತೇಲಿ ನೇತೃತ್ವದ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದೆ. ಯಾವುದೇ ಸರ್ಕಾರಿ ಕಚೇರಿಯಲ್ಲಿ ಕೆಲಸಕ್ಕಾಗಿ ಲಂಚದ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ಭಯಪಡದೆ ತಕ್ಷಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮನೆಗೋಡೆ ಕುಸಿದು ಇಬ್ಬರು ಸಾವುನರಗುಂದ: ಹಳೆಯ ಮನೆಗೋಡೆ ತೆರವು ಮಾಡುತ್ತಿದ್ದಾಗ ದಿಢೀರ್ ಗೋಡೆ ಕುಸಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಗ್ರಾಮದ ನಾಗಪ್ಪ ಮಾದರ (58) ಶೇಖಪ್ಪ ಪರಸಣ್ಣವರ (50) ಮೃತಪಟ್ಟವರು. ಮಹಾಂತೇಶ ಮ್ಯಾಗೇರಿ, ರಾಕೇಶ ದೊಡ್ಡಮನಿ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಘಟನೆಯ ವಿವರ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಂಗಳವಾರ ಯಲ್ಲಪ್ಪ ಕೇಳಗೇರಿ ಎಂಬವರ ಹಳೆಯ ಮನೆಯ ಗೋಡೆಯನ್ನು ನಾಲ್ವರು ತೆರವು ಮಾಡುತ್ತಿದ್ದರು. ಆಗ ದಿಢೀರ್ ಗೋಡೆ ಕುಸಿದು ಬಿದ್ದಿದೆ. ಘಟನೆಯಲ್ಲಿ ನಾಗಪ್ಪ ಮಾದರ ಮತ್ತು ಶೇಖಪ್ಪ ಪರಸಣ್ಣವರ ಎಂಬವರು ಕುಸಿದ ಗೋಡೆಯ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಮಹಾಂತೇಶ ಮ್ಯಾಗೇರಿ, ರಾಕೇಶ ದೊಡ್ಡಮನಿ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಮಂಜುನಾಥ ನಡುವಿನಮನಿ ಅವರು ತನಿಖೆ ಕೈಗೊಂಡಿದ್ದಾರೆ.