ಬಂಟ್ವಾಳ: ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇದರ ಅಂಗವಾಗಿ ಬಂಟ್ವಾಳ ತಾಲೂಕು ಕಚೇರಿಗೂ ಇನ್ಸ್ ಪೆಕ್ಟರ್ ಚಂದ್ರಶೇಖರ್ ಕೆ.ಎನ್. ನೇತೃತ್ವದ ಲೋಕಾಯುಕ್ತ ತಂಡ ಭೇಟಿ ನೀಡಿ ವಿವಿಧ ವಿಭಾಗಗಳ ಕಡತಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿತು. ಕಚೇರಿಯಲ್ಲಿನ ಕಡತಗಳ ವಿಲೇವಾರಿ, ಬಾಕಿ ಇರುವ ಅರ್ಜಿಗಳು ಹಾಗೂ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಮೇಲಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳಲ್ಲೂ ಏಕಕಾಲದಲ್ಲಿ ಪರಿಶೀಲನೆ ಕೈಗೊಳ್ಳಲಾಗಿದ್ದು, ಆಯಾ ಕಚೇರಿಗಳಲ್ಲಿರುವ ಸಂಬಂಧಿತ ಕಡತ ಹಾಗೂ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು.
ಬಂಟ್ವಾಳ ತಾಲೂಕು ಕಚೇರಿಯ ವಿವಿಧ ಶಾಖೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಸಂಬಂಧಿತ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಪ್ರಕರಣಕ್ಕೆ ಸಂಬಂಧಿಸಿದ ಕಡತಗಳಲ್ಲಿರುವ ದಾಖಲೆಗಳು, ಹಿಂದಿನ ಆದೇಶಗಳು, ಅರ್ಜಿಗಳ ವಿಲೇವಾರಿ ಹಾಗೂ ಸಂಬಂಧಿತ ಪ್ರಕ್ರಿಯೆಗಳ ಕುರಿತು ಪರಿಶೀಲನೆ ನಡೆಸಿದರು.