ಗದಗ-ಬೆಟಗೇರಿ ನಗರಸಭೆ ಮೇಲೆ ಲೋಕಾಯುಕ್ತದಾಳಿ: 8ಕ್ಕೂ ಹೆಚ್ಚು ವಿಭಾಗಗಳ ಕಡತ ಪರಿಶೀಲನೆ

KannadaprabhaNewsNetwork |  
Published : Jul 14, 2026, 02:15 AM IST
ಗದಗ ಮತ್ತು ಧಾರವಾಡದಿಂದ ಆಗಮಿಸಿದ್ದ ಲೋಕಾ ಅಧಿಕಾರಿಗಳ ವಾಹನಗಳು..  | Kannada Prabha

ಸಾರಾಂಶ

ಲಂಚದ ಬೇಡಿಕೆ, ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಬ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯದ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ ಗದಗ- ಬೆಟಗೇರಿ ನಗರಸಭೆ ಕಚೇರಿ ಮೇಲೆ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ವಿವಿಧ ವಿಭಾಗಗಳ ಕಡತಗಳನ್ನು ಸುದೀರ್ಘವಾಗಿ ಪರಿಶೀಲಿಸಿದರು

ಗದಗ: ಲಂಚದ ಬೇಡಿಕೆ, ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಬ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯದ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ ಗದಗ- ಬೆಟಗೇರಿ ನಗರಸಭೆ ಕಚೇರಿ ಮೇಲೆ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ವಿವಿಧ ವಿಭಾಗಗಳ ಕಡತಗಳನ್ನು ಸುದೀರ್ಘವಾಗಿ ಪರಿಶೀಲಿಸಿದರು.

ಲೋಕಾಯುಕ್ತರು ನೀಡಿದ ಸರ್ಚ್ ವಾರೆಂಟ್ ಮೇರೆಗೆ ನಡೆದ ಈ ಕಾರ್ಯಾಚರಣೆಯ ನೇತೃತ್ವವನ್ನು ಗದಗ ಲೋಕಾಯುಕ್ತ ಡಿಎಸ್‌ಪಿ ವಿಜಯ ಬಿರಾದಾರ ವಹಿಸಿದ್ದರು. ಕಾರ್ಯಾಚರಣೆಯಲ್ಲಿ ಐವರು ಸಿಪಿಐಗಳು ಸೇರಿದಂತೆ ಗದಗ ಹಾಗೂ ಧಾರವಾಡ ಜಿಲ್ಲೆಗಳ 15ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಬೆಳಗ್ಗೆಯೇ ಏಳಕ್ಕೂ ಹೆಚ್ಚು ವಾಹನಗಳಲ್ಲಿ ನಗರಸಭೆ ಕಚೇರಿಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ವಿವಿಧ ವಿಭಾಗಗಳಿಗೆ ತೆರಳಿ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಆರಂಭಿಸಿದರು. ಬೀದಿದೀಪ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ, ಟ್ಯಾಂಕರ್ ಮೂಲಕ ನೀರು ವಿತರಣೆ, ಲೋಕೋಪಯೋಗಿ ಇಲಾಖೆ, ತೆರಿಗೆ ವಿಭಾಗ ಸೇರಿದಂತೆ ಒಟ್ಟು ಎಂಟು ಪ್ರಮುಖ ವಿಭಾಗಗಳ ಕಡತಗಳನ್ನು ಪರಿಶೀಲಿಸಿದರು, ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ಪ್ರಗತಿ ಹಾಗೂ ವಿಲೇವಾರಿ ಕುರಿತ ದಾಖಲೆಗಳನ್ನೂ ಅಧಿಕಾರಿಗಳು ಪರಿಶೀಲಿಸಿದರು.

ಸಂಜೆ ವರೆಗೂ ಮುಂದುವರಿದ ದಾಳಿ ವೇಳೆ ಹಲವಾರು ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ವಿವಿಧ ವಿಭಾಗಗಳಲ್ಲಿ ಹಲವು ಲೋಪದೋಷಗಳು ಕಂಡು ಬಂದಿರುವುದಾಗಿ ತಿಳಿದುಬಂದಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಿ ವಿವರಣೆ ಪಡೆಯಲಾಯಿತು.ದಾಳಿಯ ಆರಂಭದಲ್ಲಿ ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ಆಗಮಿಸಿದ್ದರಿಂದ ನಗರಸಭೆ ಸಿಬ್ಬಂದಿ ಆತಂಕಗೊಂಡಂತೆ ಕಂಡುಬಂದರು. ಈ ವೇಳೆ ಯಾವುದೇ ರೀತಿಯ ಭಯಪಡಬೇಕಿಲ್ಲ. ನಾವು ಕೇಳುವ ದಾಖಲೆಗಳನ್ನು ಮಾತ್ರ ಒದಗಿಸಿ ಎಂದು ಲೋಕಾಯುಕ್ತ ಅಧಿಕಾರಿಗಳೇ ಸಿಬ್ಬಂದಿಗೆ ಧೈರ್ಯ ತುಂಬಿ ಕಡತಗಳ ಪರಿಶೀಲನೆ ಮುಂದುವರಿಸಿದರು ಎಂದು ತಿಳಿದುಬಂದಿದೆ.

ಗದಗ ಬೆಟಗೇರಿ ನಗರಸಭೆಯಲ್ಲಿ ಹಲವು ವರ್ಷಗಳಿಂದ ವ್ಯಾಪಕ ಭ್ರಷ್ಟಾಚಾರ, ಲಂಚದ ಬೇಡಿಕೆ ಹಾಗೂ ಸಾರ್ವಜನಿಕರ ಕೆಲಸಗಳಿಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ಸಾರ್ವಜನಿಕರು ನಿರಂತರವಾಗಿ ಮಾಡುತ್ತಿದ್ದರು. ಸೋಮವಾರ ನಡೆದ ಲೋಕಾಯುಕ್ತ ದಾಳಿ ಆ ಆರೋಪಗಳಿಗೆ ಮತ್ತಷ್ಟು ಬಲ ನೀಡಿದಂತಾಗಿದೆ.

ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳ ಕಾರ್ಯವೈಖರಿ, ನಿರ್ಲಕ್ಷ್ಯ ಮತ್ತು ಲಂಚಬಾಕತನದ ಕುರಿತು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ದಾಳಿಯ ವಿಚಾರ ಅವಳಿ ನಗರದಲ್ಲಿ ದಿನವಿಡೀ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಲೋಕಾಯುಕ್ತರ ಪರಿಶೀಲನೆಯಿಂದ ಮುಂದಿನ ದಿನಗಳಲ್ಲಿ ನಗರಸಭೆಯ ಆಡಳಿತದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತವೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ. ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಯ ವೇಳೆ ಸಂಗ್ರಹಿಸಿರುವ ದಾಖಲೆಗಳು ಹಾಗೂ ಮಾಹಿತಿ ಆಧರಿಸಿ ಮುಂದಿನ ದಿನಗಳಲ್ಲಿ ಹಲವು ರೀತಿಯ ಪ್ರತ್ಯೇಕ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಎಲ್ಎಗಳು ಎಚ್ಚರಿಕೆಯಿಂದ ಕೆಲಸ ಮಾಡಿ: ಸಿ.ಸಿ. ಪಾಟೀಲ
ಜುಲೈ 16ರಂದು ವೀರಭದ್ರಯ್ಯ ಮಹಾಸ್ವಾಮಿಗಳ ಪುಣ್ಯಸ್ಮರಣೆ