ಗುಣಮಟ್ಟ ಕಳೆದುಕೊಂಡ ನಂದಿನಿ ಮೊಸರು; ಗ್ರಾಹಕರ ದೂರು

KannadaprabhaNewsNetwork |  
Published : Jul 14, 2026, 02:15 AM IST
ಲೋಳೆ ರೀತಿಯ ಮೊಸರು ಬಂದಿರುವುದನ್ನು ಗ್ರಾಹಕರೊಬ್ಬರು ತೋರಿಸುತ್ತಿರುವುದು. | Kannada Prabha

ಸಾರಾಂಶ

ರಾಜ್ಯದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ಗಳಲ್ಲಿ ಒಂದಾದ ಕೆಎಂಎಫ್‌ ಸಂಸ್ಥೆಯ ಹಾವೇರಿ ಹಾಲು ಒಕ್ಕೂಟದಿಂದ ವಿತರಣೆಯಾಗುತ್ತಿರುವ ನಂದಿನಿ ಮೊಸರಿನ ಪ್ಯಾಕೆಟ್‌ಗಳಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದ್ದು, ಗ್ರಾಹಕರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹಾವೇರಿ: ರಾಜ್ಯದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ಗಳಲ್ಲಿ ಒಂದಾದ ಕೆಎಂಎಫ್‌ ಸಂಸ್ಥೆಯ ಹಾವೇರಿ ಹಾಲು ಒಕ್ಕೂಟದಿಂದ ವಿತರಣೆಯಾಗುತ್ತಿರುವ ನಂದಿನಿ ಮೊಸರಿನ ಪ್ಯಾಕೆಟ್‌ಗಳಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದ್ದು, ಗ್ರಾಹಕರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಹಾವೇರಿ ಒಕ್ಕೂಟದ ವ್ಯಾಪ್ತಿಯಲ್ಲಿ ಸರಬರಾಜಾಗುತ್ತಿರುವ 200 ಎಂಎಲ್ ಹಾಗೂ 500 ಮಿಲೀ ಪ್ಯಾಕೆಟ್‌ಗಳ ನಂದಿನಿ ಮೊಸರು ಸಂಪೂರ್ಣವಾಗಿ ಹಾಳಾಗಿರುವುದು ಬೆಳಕಿಗೆ ಬಂದಿದೆ. ಮೊಸರು ಎಂದಿನ ಗಟ್ಟಿ ರೂಪದಲ್ಲಿ ಇರದೆ, ವಿಚಿತ್ರವಾಗಿ ಲೋಳೆ ಹಾಗೂ ಜೆಲ್ಲಿಯಂತೆ ಮಾರ್ಪಟ್ಟಿದೆ. ಇದನ್ನು ಯಾವುದೇ ಆಹಾರ ಪದಾರ್ಥಗಳಿಗೆ ಅಥವಾ ನೇರವಾಗಿ ಬಳಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಹಕರ ಬೇಸರ: ನಂದಿನಿ ಮೊಸರಿನಲ್ಲಿ ಈ ರೀತಿಯ ಸಮಸ್ಯೆ ಕಂಡುಬರುತ್ತಿರುವುದು ಇದೇ ಮೊದಲೇನಲ್ಲ. ಆಗಾಗ ಇಂತಹ ಕೆಟ್ಟ ಗುಣಮಟ್ಟದ ಮೊಸರು ಸರಬರಾಜಾಗುತ್ತಿದೆ. ಹಣ ಕೊಟ್ಟು ಕೊಂಡರೂ ಉಪಯೋಗಕ್ಕೆ ಬಾರದಂತಾಗಿದೆ. ಹಲವಾರು ವರ್ಷಗಳಿಂದ ನಂದಿನಿ ಮೊಸರನ್ನೇ ಬಳಕೆ ಮಾಡುತ್ತಿದ್ದು, ಇತ್ತೀಚೆಗೆ ಆಗಾಗ ಈ ರೀತಿ ಸಮಸ್ಯೆ ಎದುರಾಗುತ್ತಿದೆ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ. ಪದೇ ಪದೇ ಎದುರಾಗುತ್ತಿರುವ ಈ ಸಮಸ್ಯೆಯಿಂದ ಬೇಸತ್ತಿರುವ ಹಲವು ನಿಯಮಿತ ಗ್ರಾಹಕರು ಈಗ ನಂದಿನಿ ಮೊಸರು ಬಳಸುವುದನ್ನೇ ಕೈಬಿಡುತ್ತಿದ್ದಾರೆ.

ಕಾರಣ ಏನು?: ಇಲ್ಲಿಯ ಜಂಗಮನಕೊಪ್ಪದಲ್ಲಿರುವ ಕೆಎಂಎಫ್‌ ಘಟಕದಲ್ಲಿ ಹಾಲು, ಮೊಸರು ಪ್ಯಾಕೆಟ್‌ ಸಿದ್ಧವಾಗುತ್ತದೆ. ಬೇಸಿಗೆಯಲ್ಲಿ ನಿತ್ಯ 15 ಸಾವಿರ ಲೀಟರ್‌ಗೂ ಅಧಿಕ ಪ್ರಮಾಣದಲ್ಲಿ ನಂದಿನಿ ಮೊಸರು ಖರ್ಚಾಗುತ್ತಿತ್ತು. ಮಳೆಗಾಲ ಆರಂಭವಾದ ಮೇಲೆ ಮಾರಾಟದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆದರೆ, ಗುಣಮಟ್ಟದಲ್ಲಿ ಸಮಸ್ಯೆಯಾಗಿರುವುದು ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.

ಹಾಲು ಮತ್ತು ಮೊಸರನ್ನು ಸಂಸ್ಕರಿಸುವ ಘಟಕದಲ್ಲಿ ಉಂಟಾಗಿರುವ ತಾಂತ್ರಿಕ ದೋಷದಿಂದ ಹೀಗಾಗುತ್ತಿದೆಯೇ ಅಥವಾ ಅಲ್ಲಿನ ಸಿಬ್ಬಂದಿಯ ಬೇಜವಾಬ್ದಾರಿತನವೇ ಎಂಬುದು ಗೊತ್ತಾಗಬೇಕಿದೆ. ಕೆಎಂಎಫ್‌ನಂತಹ ಪ್ರತಿಷ್ಠಿತ, ರೈತರ ಸಂಸ್ಥೆಯಲ್ಲಿ ಇಂತಹ ಲೋಪದೋಷಗಳು ಮರುಕಳಿಸುವುದನ್ನು ಅಧಿಕಾರಿಗಳು ತಡೆಯಬೇಕಿದೆ ಎಂಬುದು ಗ್ರಾಹಕರ ಆಗ್ರಹವಾಗಿದೆ.

ನಿರ್ಲಕ್ಷಿಸಿದರೆ ಪೆಟ್ಟು: ಪ್ರಸ್ತುತ ಮಾರುಕಟ್ಟೆಯಲ್ಲಿ ಹತ್ತಾರು ಖಾಸಗಿ ಡೈರಿ ಕಂಪನಿಗಳ ಹಾಲು ಮತ್ತು ಮೊಸರು ಉತ್ಪನ್ನಗಳು ತೀವ್ರ ಪೈಪೋಟಿ ನೀಡುತ್ತಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಕೆಎಂಎಫ್‌ ಸದಾ ಎಚ್ಚರವಹಿಸುತ್ತದೆ. ಸಂಸ್ಥೆಯ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ತಕ್ಷಣ ಉತ್ಪಾದನಾ ವಿಭಾಗದವರು ಕ್ರಮ ವಹಿಸಬೇಕಿದೆ. ಗ್ರಾಹಕರು ಬೇರೆ ಕಂಪನಿಗಳತ್ತ ಮುಖ ಮಾಡಿದರೆ ಭವಿಷ್ಯದಲ್ಲಿ ನಂದಿನಿ ಬ್ರ್ಯಾಂಡ್‌ಗೆ ಭಾರಿ ನಷ್ಟ ಉಂಟಾಗುವ ಆತಂಕ ಎದುರಾಗಿದೆ. ಮೊಸರು ಹಾಳಾಗುತ್ತಿರುವುದಕ್ಕೆ ನಿಖರ ಕಾರಣ ಏನೆಂಬುದನ್ನು ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯವರು ಪತ್ತೆಹಚ್ಚಬೇಕಿದೆ. ಗ್ರಾಹಕರಿಗೆ ಎಂದಿನಂತೆ ಶುದ್ಧ ಹಾಗೂ ಗುಣಮಟ್ಟದ ನಂದಿನಿ ಮೊಸರು ಸಿಗುವಂತೆ ಮಾಡಬೇಕಿರುವುದು ತುರ್ತು ಅಗತ್ಯವಾಗಿದೆ.

ಭಾನುವಾರ ಮಾರುಕಟ್ಟೆಗೆ ವಿತರಣೆಯಾಗಿರುವ ಒಂದೆರಡು ಬ್ಯಾಚ್‌ನ ಮೊಸರು ಹಾಳಾಗಿರುವ ಬಗ್ಗೆ ದೂರುಗಳು ಬಂದಿವೆ. ಎಲ್ಲವೂ ಆ ರೀತಿ ಆಗಿಲ್ಲ. ಸೋಮವಾರ ವಿತರಣೆಯಾದ ಮೊಸರು ಸರಿಯಾಗಿಯೇ ಇದೆ. ಯಾವ ಕಾರಣಕ್ಕೆ ಹಾಗಾಗಿದೆ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇನೆ. ಇನ್ನು ಮುಂದೆ ಹಾಗಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹಾವೇರಿ ಹಾಲು ಒಕ್ಕೂಟದ ಎಂಡಿ ಪ್ರದೀಪ ಎಸ್‌.ಎಂ. ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಎಲ್ಎಗಳು ಎಚ್ಚರಿಕೆಯಿಂದ ಕೆಲಸ ಮಾಡಿ: ಸಿ.ಸಿ. ಪಾಟೀಲ
ಜುಲೈ 16ರಂದು ವೀರಭದ್ರಯ್ಯ ಮಹಾಸ್ವಾಮಿಗಳ ಪುಣ್ಯಸ್ಮರಣೆ